ADVERTISEMENT

ರಸ್ತೆ ಕಾಮಗಾರಿ ಕಳಪೆ ಗುಣಮಟ್ಟ: ಆರೋಪ

​ಪ್ರಜಾವಾಣಿ ವಾರ್ತೆ
Published 16 ಜೂನ್ 2017, 10:54 IST
Last Updated 16 ಜೂನ್ 2017, 10:54 IST
ರಾಮನಗರದ ಜಿಪಂ ಭವನದ ಎದುರು ಸಮತಾ ಸೈನಿಕ ದಳದ ಪದಾಧಿಕಾರಿಗಳು ಬುಧವಾರ ರಸ್ತೆ ಕಾಮಗಾರಿಯ ಛಾಯಾಚಿತ್ರಗಳನ್ನು ಪ್ರದರ್ಶಿಸಿದರು
ರಾಮನಗರದ ಜಿಪಂ ಭವನದ ಎದುರು ಸಮತಾ ಸೈನಿಕ ದಳದ ಪದಾಧಿಕಾರಿಗಳು ಬುಧವಾರ ರಸ್ತೆ ಕಾಮಗಾರಿಯ ಛಾಯಾಚಿತ್ರಗಳನ್ನು ಪ್ರದರ್ಶಿಸಿದರು   

ರಾಮನಗರ: ‘ಹಾರೋಹಳ್ಳಿ ಹೋಬಳಿಯ ಕೆಬ್ಬೆದೊಡ್ಡಿ ಗ್ರಾಮದಲ್ಲಿ ಕಳಪೆ ಡಾಂಬರೀಕರಣ ಮಾಡಲಾಗಿದೆ’ ಎಂದು ಆರೋಪಿಸಿ ಸಮತಾ ಸೈನಿಕ ದಳದ ಜಿಲ್ಲಾ ಘಟಕದ ಕಾರ್ಯಕರ್ತರು ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

‘ಕೆಬ್ಬೆದೊಡ್ಡಿ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಪಡಿಸಲು 2016–17ನೇ ಸಾಲಿನಲ್ಲಿ ಎಸ್ಸಿ ಎಸ್ಟಿ ಅನುದಾನದಲ್ಲಿ ಸರ್ಕಾರ ಸುಮಾರು ₹20 ಲಕ್ಷ ಬಿಡುಗಡೆ ಮಾಡಿದೆ. ಕಳೆದ ಹತ್ತು ದಿನಗಳ ಹಿಂದೆ ರಸ್ತೆಗೆ ಹಾಕಿರುವ ಡಾಂಬರ್‌ ಕಿತ್ತು ಹೋಗಿದೆ. ಕಳಪೆ ಕಾಮಗಾರಿಯ ಬಗ್ಗೆ ಗುತ್ತಿಗೆದಾರರನ್ನು ಪ್ರಶ್ನಿಸಿದರೆ ಜಿಲ್ಲಾ ಪಂಚಾಯಿತಿ ಇ.ಇ ಹಾಗೂ ಜೆ.ಇಗೆ ಕಮೀಷನ್ ನೀಡಬೇಕು. ಉಳಿದ ಹಣದಲ್ಲಿ ಇನ್ನೆಷ್ಟು ಡಾಂಬರೀಕರಣ ಮಾಡಲು ಸಾಧ್ಯ ಎಂದು ಪ್ರಶ್ನಿಸುತ್ತಾರೆ’ ಎಂದು ಅವರು ದೂರಿದರು.

‘ಎಸ್ಸಿಎಸ್ಟಿ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿರುವ ಇ.ಇ ಹಾಗೂ ಜೆ.ಇ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು. ದಲಿತ ಕಾಲೊನಿಗೆ ಉತ್ತಮ ಡಾಂಬರೀಕರಣ ಮಾಡದೆ ಹಣ ದುರುಪಯೋಗ ಮಾಡಿಕೊಳ್ಳುತ್ತಿರುವ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ಸರ್ಕಾರ ಕೂಡಲೆ ಉನ್ನತ ಮಟ್ಟದ ತನಿಖೆ ನಡೆಸಿ ಅನುದಾನದ ಹಣವನ್ನು ಸದ್ಬಳಕೆ ಮಾಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಜಿಲ್ಲೆಯಲ್ಲಿ ಗ್ರಾಮ, ತಾಲ್ಲೂಕು, ಜಿಲ್ಲಾ ಪಂಚಾಯಿತಿಗಳಲ್ಲಿರುವ ಎಸ್ಸಿಎಸ್ಟಿ ಅನುದಾನವನ್ನು ಅಧಿಕಾರಿಗಳು ಸಮರ್ಪಕವಾಗಿ ಅಭಿವೃದ್ಧಿ ಮಾಡಲು ಬಳಸಿಕೊಳ್ಳುತ್ತಿಲ್ಲ. ದಲಿತ ಕಾಲೊನಿಗಳನ್ನು ಅಭಿವೃದ್ಧಿ ಪಡಿಸಲು ಹಲವು ಯೋಜನೆಗಳಿದ್ದರೂ ಪ್ರಯೋಜನವಾಗಿಲ್ಲ’ ಎಂದು ಸಮತಾ ಸೈನಿಕ ದಳದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಜಿ. ಗೋವಿಂದಯ್ಯ ಆಕ್ರೋಶ ವ್ಯಕ್ತಪಡಿಸಿದರು. ‘ಜಿಲ್ಲಾ ಪಂಚಾಯಿತಿಯಲ್ಲಿ ನಡೆದಿರುವ ಅಕ್ರಮಗಳ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುತ್ತದೆ’ ಎಂದು ಎಚ್ಚರಿಸಿದರು.

ಕೆಬ್ಬೆದೊಡ್ಡಿ ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜು, ಸಮತಾ ಸೈನಿಕ ದಳದ ಜಿಲ್ಲಾ ಘಟಕದ ಉಪಾಧ್ಯಕ್ಷ ಲಕ್ಷ್ಮಣ್, ಪ್ರಧಾನ ಕಾರ್ಯದರ್ಶಿ ಕೋಟೆಕಾಳರಾಜು, ಪದಾಧಿಕಾರಿಗಳಾದ ಸಂಜೀವ, ರಾಜೇಶ್‌, ಗಿರೀಶ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.