ರಾಮನಗರ: ಯಶವಂತಪುರ ಮತ್ತು ಕೇರಳದ ಕಣ್ಣೂರು ನಡುವೆ ನಿತ್ಯ ಸಂಚರಿಸುವ ಯಶವಂತಪುರ–ಕಣ್ಣೂರು ಎಕ್ಸ್‌ಪ್ರೆಸ್ ರೈಲು (16517/16518) ಮಾರ್ಚ್ 7ರಿಂದ ರಾಮನಗರ ಮತ್ತು ಚನ್ನಪಟ್ಟಣಗಳಲ್ಲಿ ನಿಲ್ಲಿಸಲು ಅನುಮತಿ ನೀಡಿ ರೈಲ್ವೆ ಸಚಿವಾಲಯ ಆದೇಶ ಹೊರಡಿಸಿದೆ.
ಬೆಂಗಳೂರು ಗ್ರಾಮಂತರ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ ಅವರ ಒತ್ತಾಯದ ಮೇರೆಗೆ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಈ ತೀರ್ಮಾನ ಪ್ರಕಟಿಸಿದ್ದಾರೆ. ಇದರಿಂದ ಚನ್ನಪಟ್ಟಣ ಮತ್ತು ರಾಮನಗರದಿಂದ ನಿತ್ಯ ಬೆಂಗಳೂರಿಗೆ ಪ್ರಯಾಣಿಸುವ ಸಾವಿರಾರು ರೈಲ್ವೆ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸೈಯದ್ ಜಿಯಾವುಲ್ಲಾ, ಮಾಜಿ ಶಾಸಕ ಸಿ.ಎಂ.ಲಿಂಗಪ್ಪ, ಮುಖಂಡ ರಘುನಂದನ್ ರಾಮಣ್ಣ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಎಕ್ಸ್‌ಪ್ರೆಸ್ ರೈಲುಗಳು ರಾಮನಗರ ಮತ್ತು ಚನ್ನಪಟ್ಟಣದಲ್ಲಿ ನಿಲುಗಡೆ ಮಾಡಬೇಕು ಎಂಬುದು ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿತ್ತು. ಸಂಸದರು ಜನಸಂಪರ್ಕ ಸಭೆಗಳನ್ನು ನಡೆಸಿದ ಸಂದರ್ಭದಲ್ಲಿ ಜನರಿಂದ ಈ ಬಗ್ಗೆ ಹೆಚ್ಚು ಮನವಿಗಳು ಕೇಳಿ ಬಂದಿದ್ದವು. ಈ ಸಲುವಾಗಿ ನಾಗರಿಕರು, ರೈಲ್ವೆ ಪ್ರಯಾಣಿಕರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು, ರಾಜಕಾರಣಿಗಳು ರೈಲ್ವೆ ತಡೆ ಹೋರಾಟಗಳನ್ನು ಮಾಡಿದರೂ ಪ್ರಯೋಜನವಾಗಿರಲಿಲ್ಲ. ಆದರೆ ಸಂಸದ ಸುರೇಶ್ ಅವರು ರೈಲ್ವೆ ಸಚಿವ ಖರ್ಗೆ ಅವರ ಮನವೊಲಿಸಿ ಜಿಲ್ಲೆಯ ಜನರಿಗೆ ಈ ಕೊಡುಗೆ ದೊರೆಕಿಸಿಕೊಟ್ಟಿದ್ದಾರೆ ಎಂದು ಅವರು ಹೇಳಿದರು.
ಇದಲ್ಲದೆ ಇನ್ನೂ ಕೆಲ ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆಗೆ ಮನವಿ ಮಾಡಲಾಗಿದ್ದು, ಹಂತ ಹಂತವಾಗಿ ಈಡೇರುವ ಸಾಧ್ಯತೆ ಇದೆ. ಚನ್ನಪಟ್ಟಣದ ಎಲೆಕೆರಿ ಬಳಿ ₨15 ಕೋಟಿ ವೆಚ್ಚದಲ್ಲಿ ರೈಲ್ವೆ ಮೇಲು ಸೇತುವೆ ನಿರ್ಮಾಣಕ್ಕೆ ಒಪ್ಪಿಗೆ ದೊರೆತಿದೆ. ಅದೇ ರೀತಿ ಟಿಪ್ಪು ನಗರದಲ್ಲಿ ರೈಲ್ವೆ ಕೆಳ ಸೇತುವೆ ನಿರ್ಮಿಸುವ (₨2.26 ಕೋಟಿ) ಪ್ರಸ್ತಾವಕ್ಕೆ ಶೀಘ್ರವೇ ಅನುಮೋದನೆ ದೊರೆಯಲಿದೆ.
ರಾಮನಗರದ ಕೆಂಪನಹಳ್ಳಿ ಬಳಿಯ ರೈಲ್ವೆ ಲೆವೆಲ್ ಕ್ರಾಸಿಂಗ್ ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಲು ಅನುಮತಿ ಲಭ್ಯವಾಗಿದೆ ಎಂದರು.
ಸಿಎಂ ವಿಶೇಷ ಅನುದಾನ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಆರಕ್ಕೆ (ರಾಮನಗರ, ಚನ್ನಪಟ್ಟಣ, ಕನಕಪುರ, ಮಾಗಡಿ, ಕುಣಿಗಲ್, ಆನೆಕಲ್) ಮುಖ್ಯಮಂತ್ರಿ ಅವರ ವಿಶೇಷ ಅನುದಾನದಲ್ಲಿ ₨18 ಕೋಟಿ ಲಭ್ಯವಾಗಿದೆ. ಪ್ರತಿ ಕ್ಷೇತ್ರಕ್ಕೆ ತಲಾ ಮೂರು ಕೋಟಿ ವೆಚ್ಚದಲ್ಲಿ ಸಿಮೆಂಟ್ ರಸ್ತೆ ನಿರ್ಮಾಣವಾಗಲಿದೆ.
ಇದಲ್ಲದೆ ಕನಕಪುರ ಮತ್ತು ರಾಮನಗರಕ್ಕೆ ರಾಜೀವ್ ಆವಾಸ್ ಯೋಜನೆಯಡಿ ವಸತಿ ಯೋಜನೆ ಅನುಮೋದನೆ ದೊರೆಯಲಿದೆ. ಕನಕಪುರದಲ್ಲಿ ₨72 ಕೋಟಿ ಹಾಗೂ ರಾಮನಗರದಲ್ಲಿ ₨ 50 ಕೊಟಿ ವೆಚ್ಚದಲ್ಲಿ ಮನೆಗಳು ನಿರ್ಮಾಣವಾಗಲಿದ್ದು, ಈ ಪಟ್ಟಣಗಳನ್ನು ಕೊಳೆಗೇರಿ ಮುಕ್ತಗೊಳಿಸುವ ಮಹತ್ವದ ಉದ್ದೇಶದಿಂದ ಈ ಯೋಜನೆ ಜಾರಿಗೆ ಬರಲಿದೆ ಎಂದರು.
ಕಾಂಗ್ರೆಸ್ ಮುಖಂಡ ಮರಿದೇವರು, ರಮೇಶ್, ಕೆ.ಶೇಷಾದ್ರಿ, ಕಾಂತರಾಜ ಪಟೇಲ್, ಸಿ.ಎನ್.ಆರ್. ವೆಂಕಟೇಶ್. ಎಲ್.ಚಂದ್ರಶೇಖರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.