ADVERTISEMENT

‘ರಾಹುಲ್‌ ಬಗ್ಗೆ ಮಾತನಾಡಲು ಜೆಡಿಎಸ್‌ಗೆ ನೈತಿಕತೆ ಇಲ್ಲ’

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2018, 10:54 IST
Last Updated 27 ಮಾರ್ಚ್ 2018, 10:54 IST
ಡಿ.ಕೆ, ಸುರೇಶ್‌
ಡಿ.ಕೆ, ಸುರೇಶ್‌   

ರಾಮನಗರ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬಗ್ಗೆ ಮಾತನಾಡಲು ಜೆಡಿಎಸ್ ಪಕ್ಷದವರಿಗೆ ನೈತಿಕತೆ ಇಲ್ಲ ಎಂದು ಸಂಸದ ಡಿ.ಕೆ. ಸುರೇಶ್ ಹೇಳಿದರು.

ಇಲ್ಲಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆವರಣದಲ್ಲಿ ಸೋಮವಾರ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿದ ನಂತರ ಸುದ್ದಿಗಾರರ ಜತೆ ಅವರು ಮಾತನಾಡಿದರು.

‘ದೇಶದಲ್ಲಿ ಎಚ್.ಡಿ. ದೇವೇಗೌಡ ಪ್ರಧಾನಿ ಆಗಲು ಕಾಂಗ್ರೆಸ್ ಕೊಡುಗೆಯೂ ಇದೆ ಎಂಬುದನ್ನು ಜೆಡಿಎಸ್ ಮುಖಂಡರು ಅರ್ಥ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.

ADVERTISEMENT

‘ಜಾತ್ಯತೀತತೆ ಬಗ್ಗೆ ಅವರು ಮಾತನಾಡುತ್ತಾರೆ. ಆದರೆ ಜ್ಯಾತ್ಯತೀತತೆ ಎಂದರೇನು ಎಂದು ಇಂದೊಮ್ಮೆ ಇದೇ ಪಕ್ಷದವರು ಪ್ರಶ್ನಿಸಿದ್ದರು. ಪ್ರತಿ ಚುನಾವಣೆಯಲ್ಲೂ ಬೇರೆ ಬೇರೆ ವೇಷಭೂಷಣವನ್ನು ಬದಲಿಸಿಕೊಂಡು ಬರುತ್ತಾರೆ. ನಾವು ಯಾವುದೇ ಪಕ್ಷದ ಜತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂಬುದನ್ನು ಜೆಡಿಎಸ್ ಮೊದಲು ಸ್ಪಷ್ಟಪಡಿಸಲಿ’ ಎಂದು ಆಗ್ರಹಿಸಿದರು.

‘ಚುನಾವಣೆಯಲ್ಲಿ ನಾವು ಯಾವ ಪಕ್ಷವನ್ನು ಓಲೈಸಿದರೆ ಅಧಿಕಾರ ಸಿಗಬಹುದು ಎಂಬುದನ್ನು ನೋಡಿಕೊಂಡು ತಮಗೆ ಅನುಕೂಲ ಮಾಡಿಕೊಳ್ಳುತ್ತಾರೆ. ಇವರ ತತ್ವ ಸಿದ್ದಾಂತಗಳನ್ನು ನಂಬಿದವರು ಮೂಲೆಗುಂಪಾಗುತ್ತಾರೆ’ ಎಂದು ಲೇವಡಿ ಮಾಡಿದರು.

ಹಗಲುಗನಸು: ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿಯಾಗುವ ಹಗಲುಗನಸು ಕಾಣುತ್ತಿದ್ದಾರೆ. ಆದರೆ ಅದು ಸಾಧ್ಯವಿಲ್ಲ ಎಂದು ಹೇಳಿದರು.

‘ಕಳೆದ ಚುನಾವಣಾ ಸಂದರ್ಭದಲ್ಲಿಯೂ ನಾನೇ ಮುಖ್ಯಮಂತ್ರಿ ಅಭ್ಯರ್ಥಿ. ಜೆಡಿಎಸ್‌ಗೆ ಮತ ನೀಡಿ ಎಂದು ಪ್ರಚಾರ ಮಾಡಿದ್ದರು. ಪುನಃ ಈಗ ಮತ್ತೆ ನಾನೇ ಮುಖ್ಯಮಂತ್ರಿ ಹೇಳಿಕೊಳ್ಳುತ್ತಿದ್ದಾರೆ. ಕುಮಾರಸ್ವಾಮಿ ಅವರು ಹಳೆ ಟೇಪ್‌ ಅನ್ನೇ ಹೊಸದಾಗಿ ರಿವೈಂಡ್‌ ಮಾಡುತ್ತಿದ್ದಾರೆ. ಜನರು ಇದರ ಬಗ್ಗೆ ಒಲವು ತೋರಿಸುವುದಿಲ್ಲ’ ಎಂದರು.

ನಾನೇ ಅಭ್ಯರ್ಥಿ: ‘ರಾಮನಗರ, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳಿಗೆ ನಾನೇ ಕಾಂಗ್ರೆಸ್ ಅಭ್ಯರ್ಥಿ. ರಾಮನಗರದಲ್ಲಿ ಇಕ್ಬಾಲ್‌ ಹುಸೇನ್‌ ನಮ್ಮ ಮುಖವಾಡವಷ್ಟೇ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.