ADVERTISEMENT

‘ವರದಿ ಜಾರಿ ಮಾಡುವವರಿಗೆ ಬೆಂಬಲ’

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2018, 5:48 IST
Last Updated 24 ಫೆಬ್ರುವರಿ 2018, 5:48 IST

ರಾಮನಗರ: ಸರ್ಕಾರಿ ಶಾಲೆಗಳ ಸಬಲೀಕರಣ ಸಮಿತಿ ವರದಿಯನ್ನು ಜಾರಿ ಮಾಡುವ ಪಕ್ಷವನ್ನು ಈ ಬಾರಿಯ ಚುನಾವಣೆಯಲ್ಲಿ ಎಸ್‌ಡಿಎಂಸಿ ಸದಸ್ಯರು ಬೆಂಬಲಿಸಲಿದ್ದಾರೆ ಎಂದು ಮಗು ಮತ್ತು ಕಾನೂನು ಕೇಂದ್ರದ ಶಿಕ್ಷಣ ಕಾರ್ಯಕ್ರಮದ ಮುಖ್ಯಸ್ಥ ವಿ.ಪಿ. ನಿರಂಜನಾರಾಧ್ಯ ಹೇಳಿದರು.

ಇಲ್ಲಿನ ಸರ್ಕಾರಿ ಮೆಯಿನ್‌ ಶಾಲೆಯಲ್ಲಿ ಸರ್ಕಾರಿ ಶಾಲೆಗಳ ಸಬಲೀಕರಣ ಕುರಿತಂತೆ ಶುಕ್ರವಾರ ನಡೆದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

ಚುನಾವಣಾ ಪ್ರಚಾರದಲ್ಲಿ ತೊಡಗಿರುವ ರಾಜಕೀಯ ಪಕ್ಷಗಳು ವಿಷಯಾಧರಿತವಾಗಿ ಮಾತನಾಡುತ್ತಿಲ್ಲ. ವೈಯುಕ್ತಿಕ ಆರೋಪ ಪ್ರತ್ಯಾರೋಪಗಳಲ್ಲೇ ಕಾಲ ಕಳೆಯುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸಿದ್ಧಪಡಿಸಿರುವ ವರದಿಯನ್ನು ಈಗಾಗಲೇ ಸರ್ಕಾರಕ್ಕೆ ಸಲ್ಲಿಸಲಾಗಿದೆ. ವರದಿಯನ್ನು ಕೂಡಲೆ ಅನುಷ್ಠಾನಕ್ಕೆ ತರಬೇಕು ಎಂಬ ಚಳವಳಿಯನ್ನು ಶೀಘ್ರ ಪ್ರಾರಂಭಿಸಲಾಗುವುದು ಎಂದು ಅವರು ಹೇಳಿದರು.

ರಾಜ್ಯದಲ್ಲಿ ಕಳೆದ ವರ್ಷ ಹತ್ತು ಸಾವಿರಕ್ಕೂ ಹೆಚ್ಚು ಮಕ್ಕಳು ಖಾಸಗಿ ಶಾಲೆಗಳನ್ನು ಸೇರಿದ್ದಾರೆ. ಇದರಿಂದ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕಡಿಮೆಯಾಗಿದೆ. ಸರ್ಕಾರದ ಯೋಜನೆಗಳು ಸರಿಯಾಗಿ ಅನುಷ್ಠಾನವಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಎಸ್‌ಡಿಎಂಸಿಗಳು ಕ್ರಮಬದ್ಧವಾಗಿ ಕಾರ್ಯನಿರ್ವಹಿಸಿಬೇಕು ಎಂದರು.

ಎಸ್‌ಡಿಎಂಸಿ ಎಂದರೆ ಕೇವಲ ಶಾಲೆಯ ಭೌತಿಕ ಅಭಿವೃದ್ಧಿಯನ್ನು ಮಾಡುವುದಲ್ಲ. ಮೂಲ ಸೌಕರ್ಯಗಳನ್ನು ಕಲ್ಪಿಸುವ ಜತೆಗೆ ಶಿಕ್ಷಕರ ಬೋಧನೆ, ವಿದ್ಯಾರ್ಥಿಗಳ ಕಲಿಕೆಯ ಕಡೆಗೂ ಗಮನ ನೀಡಬೇಕು. ಎಸ್‌ಡಿಎಂಸಿಗಳನ್ನು ಪ್ರಜಾಸತಾತ್ಮಕವಾಗಿ ರಚನೆ ಮಾಡಬೇಕು. ಪ್ರತಿ ತಿಂಗಳು ಸಭೆಯನ್ನು ಮಾಡಬೇಕು ಎಂದು ತಿಳಿಸಿದರು.

ಕರ್ನಾಟಕ ಮಕ್ಕಳ ರಕ್ಷಣ ಆಯೋಗದ ವರದಿಯ ಪ್ರಕಾರ ಈಗಲೂ 2.5ಲಕ್ಷ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಶಿಕ್ಷಣ ವ್ಯವಸ್ಥೆಯನ್ನು ಸರಿಪಡಿಸಲು ಇರುವ ಕಾನೂನುಗಳು ಸರಿಯಾಗಿ ಅನುಷ್ಠಾನಗೊಳ್ಳುತ್ತಿಲ್ಲ ಎಂದರು.

ಶಿಕ್ಷಣ ಹಕ್ಕು ಕಾಯ್ದೆಯು ಜಾರಿಯಾಗಿ ಏಳು ವರ್ಷವಾದರೂ ಜನರನ್ನು ತಲುಪಿಲ್ಲ. ಭಾಷಾ ಮಾಧ್ಯಮದ ಬಗ್ಗೆ ಜನರಲ್ಲಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಬೇಕು. ಮಾತೃ ಭಾಷೆಯಲ್ಲಿಯೇ 12ನೇ ತರಗತಿವರೆಗೆ ಶಿಕ್ಷಣ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಬೇಕು ಎಂದರು.

ಬೇಸಿಗೆ ಶಿಬಿರಗಳಲ್ಲಿ ಮಧ್ಯಾಹ್ನದ ಊಟ ಸೇರಿದಂತೆ ಇನ್ನಿತರ ಕೆಲಸಗಳನ್ನು ಸರ್ಕಾರ ಎನ್‌ಜಿಒ ಗಳಿಗೆ ವಹಿಸಬಾರದು. ವಹಿಸಿದರೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಜಿ. ಉಮೇಶ್‌ ಆಯ್ಕೆ: ಸಭೆಯಲ್ಲಿ ದೊಡ್ಡಗಂಗವಾಡಿಯ ಜಿ. ಉಮೇಶ್‌ ಅವರು ಎಸ್‌ಡಿಎಂಸಿ ರಾಮನಗರ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.

ಎಸ್‌ಡಿಎಂಸಿ ಜಿಲ್ಲಾ ಘಟಕದ ಅಧ್ಯಕ್ಷ ಗೋಪಾಲ್, ಚಿನ್ನಗಿರಿಗೌಡ, ಯಶೋಧ ಇದ್ದರು. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಹಾಗೂ ರಾಷ್ಟ್ರೀಯ ಕಾನೂನು ಶಾಲೆ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ವತಿಯಿಂದ ಸಭೆ ಆಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.