ADVERTISEMENT

‘ವರಿಷ್ಠರು ಸೂಚಿಸಿದರೆ ಚುನಾವಣೆಗೆ ಸ್ಪರ್ಧೆ’

ಚಾಮುಂಡೇಶ್ವರಿ, ಬಿಸಿಲಮ್ಮ ದೇವಿಗೆ ಹರಕೆ ಸಲ್ಲಿಸಿದ ಅನಿತಾ ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 2 ಜೂನ್ 2018, 7:06 IST
Last Updated 2 ಜೂನ್ 2018, 7:06 IST

ರಾಮನಗರ: ‘ಪಕ್ಷದ ವರಿಷ್ಠರು ಸೂಚಿಸಿದರೆ ಉಪ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ’ ‌‌ಎಂದು ಜೆಡಿಎಸ್ ನಾಯಕಿ ಅನಿತಾ ಕುಮಾರಸ್ವಾಮಿ ಹೇಳಿದರು.

ಶುಕ್ರವಾರ ಸಂಜೆ ಇಲ್ಲಿನ ಚಾಮುಂಡೇಶ್ವರಿ ದೇವಸ್ಥಾನ ದಲ್ಲಿ ವಿಶೇಷ ಪೂಜೆಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ‘ರಾಮನಗರಕ್ಕೂ ನಮ್ಮ ಕುಟುಂಬಕ್ಕೂ ಭಾವನಾತ್ಮಕ ಸಂಬಂಧವಿದೆ. ಕ್ಷೇತ್ರದ ಜನರು, ಕಾರ್ಯಕರ್ತರು ಸ್ಪರ್ಧಿಸುವಂತೆ ಒತ್ತಡ ತರುತ್ತಿದ್ದಾರೆ. ಪಕ್ಷದ ತೀರ್ಮಾನದಂತೆ ನಡೆದುಕೊಳ್ಳುತ್ತೇನೆ’ ಎಂದು ತಿಳಿಸಿದರು.

‘ಚುನಾವಣೆ ಮುಗಿದ ಮೇಲೆ ನಾನು ಇಲ್ಲಿಗೆ ಬಂದಿರಲಿಲ್ಲ. ರಾಮನಗರದ ಚಾಮುಂಡೇಶ್ವರಿ ದೇವಿಗೆ, ಚನ್ನಪಟ್ಟಣ ತಾಲ್ಲೂಕಿನ ಹುಣಸನಹಳ್ಳಿ ಬಿಸಿಲಮ್ಮ ದೇವಿಗೆ ಹರಕೆ ಕಟ್ಟಿಕೊಂಡಿದ್ದೆ. ಈಗ ಹರಕೆ ತೀರಿಸಲು ಬಂದಿದ್ದೇನೆ’ ಎಂದು ತಿಳಿಸಿದರು.

ADVERTISEMENT

ಜೆಡಿಎಸ್–ಕಾಂಗ್ರೆಸ್ ಮೈತ್ರಿ ಸರ್ಕಾರ ಐದು ವರ್ಷಗಳ ಆಡಳಿತ ಪೂರ್ಣಗೊಳಿಸಲಿದೆ. ರಾಮನಗರದಲ್ಲಿ ರಾಜೀವ್‌ಗಾಂಧಿ ವಿಶ್ವವಿದ್ಯಾಲಯ ನಿರ್ಮಾಣಕ್ಕೆ ಮೊದಲ ಆದ್ಯತೆ ನೀಡಲಾಗುತ್ತಿದೆ. ನಂತರದ ದಿನಗಳಲ್ಲಿ ರಾಮನಗರ–ಚನ್ನಪಟ್ಟಣ ಅವಳಿ ನಗರಗಳನ್ನಾಗಿ ಮಾಡಿ ಅಭಿವೃದ್ಧಿ ಕಾಮಗಾರಿ ಮಾಡಲಾಗುವುದು ಎಂದು ತಿಳಿಸಿದರು.

ಕ್ಷೇತ್ರದ ಸಮಸ್ಯೆ ಬಗೆಹರಿಸಲು ಚನ್ನಪಟ್ಟಣ, ರಾಮನಗರದ ಜನ ಬೆಂಗಳೂರಿಗೆ ಬರಬೇಕಾಗಿಲ್ಲ. ಕಳೆದ ಮೂರು ವರ್ಷಗಳಿಂದ ನಾನು ಈ ಕ್ಷೇತ್ರಗಳ ಜನರ ಸಮಸ್ಯೆ ಕೇಳುತ್ತಿದ್ದೇನೆ. ಮುಂದಿನ ದಿನಗಳಲ್ಲಿಯೂ ಜನರ ಸಮಸ್ಯೆ ಬಗೆಹರಿಸಲುಕ್ರಮಕೈಗೊಳ್ಳುತ್ತೇನೆ ಎಂದು ತಿಳಿಸಿದರು.

ಮಳೆಯಿಂದ ಕಿರಿಕಿರಿ: ಅನಿತಾ ಕುಮಾರಸ್ವಾಮಿ ಬರುತ್ತಾರೆ ಎಂದು ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಚಾಮುಂಡೇಶ್ವರಿ ದೇವಸ್ಥಾನದ ಬಳಿ ಸೇರಿದ್ದರು. ಸಂಜೆ ಮಳೆ ಸುರಿಯಲು ಪ್ರಾರಂಭಿಸಿದ್ದರಿಂದ ಕಾರ್ಯಕರ್ತರು ದೇವಸ್ಥಾನದ ಒಳಗೆ ಪ್ರವೇಶಿಸಲು ನುಗ್ಗಲಾರಂಭಿಸಿದರು. ಈ ಸಂದರ್ಭದಲ್ಲಿ ಪೊಲೀಸರು ಹಲವರನ್ನು ಒಳಗಡೆ ಬಿಡಲಿಲ್ಲ. ಮಳೆಯಲ್ಲಿಯೇ ಬಂದ ಅನಿತಾ ಪೂಜೆ ಸಲ್ಲಿಸಿ ತೆರಳಿದರು.

ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ್, ಯುವ ಘಟಕದ ಅಧ್ಯಕ್ಷ ಎಚ್.ಸಿ. ರಾಜಣ್ಣ, ನಗರಸಭಾ ಸದಸ್ಯರಾದ ಆರ್.ಎ.ಮಂಜುನಾಥ್, ಎ.ರವಿ, ನಾಗರಾಜ್‌, ಡಿ.ಕೆ.ಶಿವಕುಮಾರ್, ಮುಖಂಡರಾದ ಎ.ವಿ. ಭಾಸ್ಕರ್‌, ಸಯ್ಯದ್ ವಿಕಾರ್,ಬಿ.ಉಮೇಶ್‌, ಸಾಬಾನ್‌ ಸಾಬ್‌, ಸುಮಿತ್ರಾ ರಂಗಸ್ವಾಮಿ, ರೈಡ್ ನಾಗರಾಜು, ಗೂಳಿಗೌಡ, ವಕೀಲ ರಾಜಶೇಖರ್, ಜಯಕುಮಾರ್‌, ಪ್ರಸನ್ನಕುಮಾರ್, ಚಿಕ್ಕಣ್ಣ, ಎ.ಎಸ್. ಶಿವಕುಮಾರ್, ಸೋಮಶೇಖರ ರಾವ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.