ADVERTISEMENT

ವಸತಿ ನಿಲಯ: ಭೋಜನ ವೆಚ್ಚ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 18 ಜೂನ್ 2011, 19:30 IST
Last Updated 18 ಜೂನ್ 2011, 19:30 IST

ರಾಮನಗರ: ಸಮಾಜ ಕಲ್ಯಾಣ ಇಲಾಖೆಯಡಿ ಬರುವ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳಲ್ಲಿ ಇರುವ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳು ಮತ್ತು ಮೆಟ್ರಿಕ್ ನಂತರ ವಿದ್ಯಾರ್ಥಿಗಳು ಮತ್ತು ವಸತಿ ಶಾಲೆಗಳಲ್ಲಿ ಇರುವ ವಿದ್ಯಾರ್ಥಿಗಳು ಇನ್ನು ಮುಂದೆ ಇನ್ನಷ್ಟು ಸ್ವಾದಿಷ್ಟವಾದ ಹಾಗೂ ಗುಣಮಟ್ಟದ ಆಹಾರ ಸೇವಿಸಲಿದ್ದಾರೆ.

ಕಾರಣ, ಈ ಎಲ್ಲ ವಿದ್ಯಾರ್ಥಿಗಳಿಗೆ ಈ ವರ್ಷದ ಜೂನ್ ತಿಂಗಳಿನಿಂದ ಅನ್ವಯ ಆಗುವಂತೆ ಮಾಸಿಕ ಭೋಜನ ವೆಚ್ಚವನ್ನು ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದರಿಂದ ರಾಮನಗರ ಜಿಲ್ಲೆಯ 19 ವಸತಿ ಶಾಲೆಗಳ ಸುಮಾರು 3,500 ವಿದ್ಯಾರ್ಥಿಗಳು ಸೇರಿದಂತೆ ರಾಜ್ಯದಾದ್ಯಂತ ಸಹಸ್ರಾರು ವಿದ್ಯಾರ್ಥಿಗಳಿಗೆ ಉತ್ತಮ ಆಹಾರ ದೊರೆಯಲಿದೆ.

ಈ ಸಂಬಂಧ ಸಮಾಜ ಕಲ್ಯಾಣ ಇಲಾಖೆಯ ಅಧೀನ ಕಾರ್ಯದರ್ಶಿ (2) ಎಸ್. ಲೋಕನಾಥರಾವ್ ಅವರು ಆದೇಶ ಹೊರಡಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈ ವರ್ಷದ ಬಜೆಟ್‌ನಲ್ಲಿ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ವಸತಿ ಶಾಲೆಗಳ ವಿದ್ಯಾರ್ಥಿಗಳ ಬೋಜನ ವೆಚ್ಚ ಹೆಚ್ಚಿಸುವುದಾಗಿ ಘೋಷಿಸಿದ್ದರು. ಅದೀಗ ಆದೇಶದ ರೂಪದಲ್ಲಿ ಹೊರಹೊಮ್ಮಿದ್ದು, ಇದೇ ತಿಂಗಳಿಂದ ಜಾರಿಯಾಗಲಿದೆ.

ಎಷ್ಟು ಹೆಚ್ಚಳ: ಒಂದನೇ ತರಗತಿಯಿಂದ ಐದನೇ ತರಗತಿಯವರೆಗಿನ ವಸತಿ ಶಾಲೆಗಳ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ಮಾಸಿಕ 500 ರೂಪಾಯಿ ವೆಚ್ಚವನ್ನು ಸರ್ಕಾರ 600 ರೂಪಾಯಿಗೆ ಹೆಚ್ಚಿಸಿದೆ.
ಅದೇ ರೀತಿ ಮೆಟ್ರಿಕ್ ಪೂರ್ವ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು/ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳ 6ರಿಂದ 10ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ 750 ರೂಪಾಯಿ ಮಾಸಿಕ ವೆಚ್ಚವನ್ನು 800 ರೂಪಾಯಿಗೆ ಹೆಚ್ಚಿಸಲಾಗಿದೆ.

ಮೆಟ್ರಿಕ್ ಪೂರ್ವ ಸರ್ಕಾರದ ವಿದ್ಯಾರ್ಥಿ ನಿಲಯಗಳ 6ರಿಂದ 10ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ 650 ರೂಪಾಯಿ ಮಾಸಿಕ ವೆಚ್ಚವನ್ನು 750 ರೂಪಾಯಿಗೆ ಸರ್ಕಾರ ಹೆಚ್ಚಿಸಿದೆ.
ಮೆಟ್ರಿಕ್ ನಂತರದ ಸರ್ಕಾರದ ವಿದ್ಯಾರ್ಥಿ ನಿಲಯಗಳ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ 750 ರೂಪಾಯಿ ಮಾಸಿಕ ವೆಚ್ಚವನ್ನು 850 ರೂಪಾಯಿಗೆ ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ.

2010-11ರಲ್ಲಿ ರಾಜ್ಯ ಸರ್ಕಾರ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ ರೂ 650 ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ 750 ರೂಪಾಯಿ ಮಾಸಿಕ ಬೋಜನ ವೆಚ್ಚವನ್ನು ಹೆಚ್ಚಿಸಿತ್ತು. ಅದನ್ನು ಸರ್ಕಾರ ಈ ವರ್ಷ ತಲಾ 100 ರೂಪಾಯಿ ಹೆಚ್ಚಿಸಿದೆ.

ಗುಣಮಟ್ಟ ಹೆಚ್ಚಳಕ್ಕೆ ಸಹಕಾರಿ: ವಸತಿ ಶಾಲೆಗಳ ವಿದ್ಯಾರ್ಥಿಗಳ ಬೋಜನ ವೆಚ್ಚವನ್ನು ಸರ್ಕಾರ ತಲಾ 100 ರೂಪಾಯಿ ಹೆಚ್ಚಿಸಿರುವುದರಿಂದ ವಿದ್ಯಾರ್ಥಿಗಳಿಗೆ ಇನ್ನಷ್ಟು ಗುಣಮಟ್ಟದ ಮತ್ತು ಸ್ವಾದಿಷ್ಟವಾದ ಆಹಾರ ನೀಡಲು ಸಹಕಾರಿಯಾಗಲಿದೆ ಎಂದು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ತಿಮ್ಮಪ್ಪ `ಪ್ರಜಾವಾಣಿ~ಗೆ ತಿಳಿಸಿದರು.

`ಪ್ರಸ್ತುತ ವಿದ್ಯಾರ್ಥಿಗಳಿಗೆ ಬೆಳಿಗ್ಗೆ ದಿನಕ್ಕೊಂದು ಬಗೆಯ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿ ಹೊತ್ತಿನಲ್ಲಿ ಮುದ್ದೆ ಊಟ, ಸಂಜೆ `ಸ್ನ್ಯಾಕ್ಸ್~, ವಾರಕ್ಕೆ ಎರಡು ದಿನ ಮೊಟ್ಟೆ, ಇನ್ನೆರಡು ದಿನ ಬಾಳೆ ಹಣ್ಣು, ತಿಂಗಳಿಗೆ ಒಂದು ಅಥವಾ ಎರಡು ದಿನ ಶಾಖಾ ಆಹಾರವನ್ನು ನೀಡಲಾಗುತ್ತಿದೆ.

ದಿನಸಿ ಸಾಮಗ್ರಿಗಳ ಬೆಲೆ ಹೆಚ್ಚಳ ಹಾಗೂ ಗ್ಯಾಸ್ ಮತ್ತಿತರ ಇಂಧನದ ಬೆಲೆ ಹೆಚ್ಚಳದಿಂದಾಗಿ ಈ ಮೊದಲು ನೀಡಲಾಗುತ್ತಿದ್ದ ಬೊಜನಾ ವೆಚ್ಚವನ್ನು ಪರಿಷ್ಕರಿಸುವಂತೆ ವಿವಿಧೆಡೆಯಿಂದ ಸರ್ಕಾರಕ್ಕೆ ಬೇಡಿಕೆ ಹೋಗಿತ್ತು. ಅದನ್ನು ಮಾನ್ಯ ಮಾಡಿ ಸರ್ಕಾರ ಮಾಸಿಕ ಬೋಜನ ವೆಚ್ಚವನ್ನು ಹೆಚ್ಚಿಸಿದೆ.

ಇದರಿಂದ ವಿದ್ಯಾರ್ಥಿಗಳಿಗೆ ಇನ್ನಷ್ಟು ಅನುಕೂಲವಾಗಲಿದೆ~ ಎಂದು ಅವರು ವಿವರಿಸಿದರು.ಈ ಕುರಿತು ಪ್ರತಿಕ್ರಿಯೆ ನೀಡಿದ ಜಿಲ್ಲೆಯ ಮೊರಾರ್ಜಿ ದೇಸಾಯಿ ಶಾಲೆಯೊಂದರ ಪ್ರಾಚಾರ್ಯರು, `ವಿದ್ಯಾರ್ಥಿಗಳಿಗೆ ಬೋಜನ ವೆಚ್ಚ ಹೆಚ್ಚಿಸಿರುವುದು

ಸ್ವಾಗತಾರ್ಹ. ಆದರೆ ಇದು ಸದುಪಯೋಗ ಆಗಬೇಕು. ಇಲಾಖೆ ವತಿಯಿಂದ ಹೊರಗುತ್ತಿಗೆ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಆಹಾರ ವಿತರಣೆ ಆಗುತ್ತಿದೆ.ಈಗ ನೀಡುತ್ತಿರುವ ಗುಣಮಟ್ಟದ ಮತ್ತು ಪ್ರಮಾಣ ಹೆಚ್ಚಾಗಬೇಕು.

ವಿದ್ಯಾರ್ಥಿಗಳ ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಪೂರಕವಾದಂತಹಪೌಷ್ಠಿಕಾಂಶದಿಂದ ಕೂಡಿದ ಆಹಾರವನ್ನು ಇಲಾಖೆ ಸರಬರಾಜು ಮಾಡಬೇಕು. ಹಾಗಾದಾಗ ಮಾತ್ರ ಮಾಸಿಕ ಬೋಜನ ವೆಚ್ಚದ ಹೆಚ್ಚಳ ಸದುಪಯೋಗ ಆಗುತ್ತದೆ. ಇಲ್ಲದಿದ್ದರೆ ವಿದ್ಯಾರ್ಥಿಗಳ ನೆಪದಲ್ಲಿ ಇದು ಕಂಡವರ ಪಾಲಾಗುತ್ತದೆ~ ಎಂದು ಎಚ್ಚರಿಸುತ್ತಾರೆ.
ಮುಖ್ಯಾಂಶಗಳು
ವಸತಿ ಶಾಲಾ ವಿದ್ಯಾರ್ಥಿಗಳ ಬೊಜನಾ ವೆಚ್ಚ ಹೆಚ್ಚಳ
 ಆಹಾರದ ಗುಣಮಟ್ಟ, ಸ್ವಾದಿಷ್ಟ ಹೆಚ್ಚಳಕ್ಕೆ ನೆರವು
ಜೂನ್ ತಿಂಗಳಿನಿಂದ ಅನ್ವಯವಾಗುವಂತೆ ಸರ್ಕಾರದ ಆದೇಶ
ಮೆಟ್ರಿಕ್ ಪೂರ್ವ, ನಂತರದ ವಿದ್ಯಾರ್ಥಿಗಳಿಗೆ ತಲಾ ರೂ 100 ಹೆಚ್ಚಳ
ಜಿಲ್ಲೆಯ 19 ವಸತಿ ಶಾಲಾ ವಿದ್ಯಾರ್ಥಿಗಳಿಗೆ ಅನುಕೂಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.