ADVERTISEMENT

‘ವಿಶ್ವಮಾನವ ಪರಿಕಲ್ಪನೆ ಕೊಟ್ಟ ಕುವೆಂಪು’

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2017, 5:50 IST
Last Updated 30 ಡಿಸೆಂಬರ್ 2017, 5:50 IST
ರಾಮನಗರದಲ್ಲಿ ಕುವೆಂಪು ಭಾವಚಿತ್ರಕ್ಕೆ ಸಿ.ಎಂ. ಲಿಂಗಪ್ಪ ಹಾಗೂ ಬಿ.ಆರ್. ಮಮತಾ ಪುಷ್ಪ ಸಮರ್ಪಿಸಿದರು
ರಾಮನಗರದಲ್ಲಿ ಕುವೆಂಪು ಭಾವಚಿತ್ರಕ್ಕೆ ಸಿ.ಎಂ. ಲಿಂಗಪ್ಪ ಹಾಗೂ ಬಿ.ಆರ್. ಮಮತಾ ಪುಷ್ಪ ಸಮರ್ಪಿಸಿದರು   

ರಾಮನಗರ: ‘ರಸಋಷಿ ಕುವೆಂಪು ತಮ್ಮ ಅತ್ಯುತ್ತಮ ಸಾಹಿತ್ಯ ಕೃಷಿ ಹಾಗೂ ವಿಶ್ವಮಾನವ ಪರಿಕಲ್ಪನೆಯಿಂದ ಎಲ್ಲರಿಗೂ ಮಾದರಿ ಆಗಿದ್ದಾರೆ’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ. ಲಿಂಗಪ್ಪ ಬಣ್ಣಿಸಿದರು. ನಗರದ ಗುರುಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಹಯೋಗದಲ್ಲಿ ಶುಕ್ರವಾರ ನಡೆದ ವಿಶ್ವ ಮಾನವ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾಹಿತ್ಯ ಪ್ರಕಾರಗಳಲ್ಲಿ ಕನ್ನಡ ಭಾಷೆಗೆ ಅತ್ಯುತ್ತಮ ಪ್ರಶಸ್ತಿಗಳನ್ನು ತಂದುಕೊಟ್ಟ ಹಿರಿಮೆ ಕುವೆಂಪು ಅವರದ್ದಾಗಿದೆ, ಅವರು ಇಡೀ ವಿಶ್ವವನ್ನೇ ತಮ್ಮ ಮನೆಯೆಂದು ತಿಳಿದು, ಜಗತ್ತಿಗೆ ವಿಶ್ವ
ಮಾನವ ಸಂದೇಶ ನೀಡಿದರು. ಅವರ ಬದುಕು ಮತ್ತು ಬರವಣಿಗೆ ನಮ್ಮೆಲ್ಲರಿಗೂ ಆದರ್ಶಪ್ರಾಯವಾಗಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ. ಬಿ.ಆರ್. ಮಮತಾ ಅವರು ಮಾತನಾಡಿ, ವಿಶ್ವ ಮಾನವ ದಿನಾಚರಣೆಯ ಅರ್ಥ ಬಹಳ ವಿಶಾಲವಾದದ್ದು. ಲಿಂಗಬೇಧ, ಜಾತಿ, ಮತ, ಪಂಥದಂತಹ ಯಾವುದೇ ರೀತಿಯ ಬೇಧಭಾವ ವಿಲ್ಲದೇ ಎಲ್ಲವನ್ನು ಮೆಟ್ಟಿ, ವಿಶ್ವವೇ ತನ್ನ ಮನೆ ಎಂದು ತಿಳಿದು, ಅದರಂತೆಯೇ ಕುವೆಂಪು ಜೀವಿಸಿದರು, ಅವರು ವಿಶ್ವ ಮಾನವ, ರಾಷ್ಟ್ರಕವಿಯಾಗಿ, ಶಿಕ್ಷಕರಾಗಿ ಬಹಳಷ್ಟು ವಿಭಿನ್ನ ಪಾತ್ರವನ್ನು ತೋರಿಸಿದ್ದಾರೆ. ಅವರಂತೆಯೇ ನಾವೆಲ್ಲರೂ ವಿಶ್ವ ಮಾನವರಾಗಿ ಬಾಳಬೇಕು ಎಂದು ನುಡಿದರು.

ADVERTISEMENT

ರಾಜ್ಯ ಸಾಹಿತ್ಯ ಅಕಾಡಮಿಯ ಸದಸ್ಯ ಡಾ. ಬೈರಮಂಗಲ ರಾಮೇಗೌಡ ಪ್ರಧಾನ ಉಪನ್ಯಾಸ ನೀಡಿದರು. ರಾಮನಗರ ನಗರಸಭೆ ಅಧ್ಯಕ್ಷ ಪಿ. ರವಿಕುಮಾರ್, ಉಪಾಧ್ಯಕ್ಷೆ ತಹಸೀನ್ ತಾಜ್, ಸದಸ್ಯರಾದ ಚೇತನ್ ಕುಮಾರ್, ಲೋಹಿತ್ ಬಾಬು, ಪಾಷಾ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕಿ ಲಕ್ಷ್ಮಿ, ಮುಖಂಡರಾದ ರಾ.ಸಿ ದೇವರಾಜ್, ಶಿವಕುಮಾರ ಸ್ವಾಮಿ, ಡಾ. ಗೋವಿಂದಯ್ಯ, ಬಿ.ಟಿ. ದಿನೇಶ್‌, ಎಂ.ಡಿ. ಶಿವಕುಮಾರ್‌. ಸಮದ್‌, ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

ಡಾ. ಎಂ. ಬೈರೇಗೌಡ ಅವರ ಕುವೆಂಪು ನಾಟಕಗಳ ಗುಚ್ಛ ‘ಸ್ವಪ್ನಸಿದ್ಧಿ’ ನಾಟಕ ಪ್ರದರ್ಶಿಸಲಾಯಿತು. ಮಾಯಗಾನಹಳ್ಳಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ನಾಡಗೀತೆ, ರೈತಗೀತೆಯನ್ನು ಪ್ರಸ್ತುತ ಪಡಿಸಿದರು. ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಹಾಯಕ ನಿರ್ದೇಶಕ ಎಂ. ರಾಜು ಸ್ವಾಗತಿಸಿದರು.

ಶಾಂತಿ ಕದಡುವ ಯತ್ನ ಬೇಡ

ಪ್ರಧಾನ ಉಪನ್ಯಾಸ ನೀಡಿದ ರಾಜ್ಯ ಸಾಹಿತ್ಯ ಅಕಾಡೆಮಿ ಸದಸ್ಯ ಡಾ. ಬೈರಮಂಗಲ ರಾಮೇಗೌಡ ‘ಕುವೆಂಪು ರಚಿಸಿರುವ ನಾಡಗೀತೆಯಲ್ಲಿ ಸರ್ವಜನಾಂಗದ ಶಾಂತಿಯ ತೋಟ ಎಂದು ಬರೆಯಲಾಗಿದೆ. ಇದು ಕೇವಲ ಕರ್ನಾಟಕ ಮಾತ್ರವಲ್ಲ ಇಡೀ ಭಾರತವನ್ನು ಒಳಗೊಂಡಿದೆ.

ಎಲ್ಲಾ ಜಾತಿ ಮತ್ತು ಸಮುದಾಯಗಳು ಶಾಂತಿಯಿಂದ ಬದುಕಲು ನಮ್ಮ ಸಂವಿಧಾನದ ತತ್ವವಾಗಿದೆ. ಅನೇಕರು ತಮ್ಮ ಧರ್ಮವನ್ನು ಮುಂದಿಟ್ಟುಕೊಂಡು ನಾವೆಲ್ಲರೂ ಇಂತಹವರೇ ಎಂದು ಜನರನ್ನು ದಿಕ್ಕು ತಪ್ಪಿಸುವ ಪ್ರಯತ್ನ ನಡೆಯುತ್ತಿದೆ. ಇದಕ್ಕೆ ಯಾರೂ ಕಿವಿಗೊಡಬಾರದು’ ಎಂದರು.

ಸಂವಿಧಾನ ಬದಲಾವಣೆ ಕುರಿತ ವಿವಾದಾತ್ಮಕ ಹೇಳಿಕೆಯನ್ನು ಪ್ರಸ್ತಾಪಿಸಿದ ಅವರು ‘ನಮ್ಮ ಸಂವಿಧಾನ ಡಾ.ಬಿ.ಆರ್ ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚನೆಯಾಗಿದೆ. ಅವರ ಬುದ್ದಿಮತ್ತೆ ಮತ್ತು ದೂರದೃಷ್ಟಿ ಅಪಾರವಾದದ್ದು, ಅದರ ಬಹಳ ಮುಖ್ಯವಾದ ತತ್ವವೇ ಜಾತ್ಯತೀತತೆ. ಆದರೆ ಈಚಿನ ದಿನಗಳಲ್ಲಿ ಈ ಜಾತ್ಯತೀತ ತತ್ವಕ್ಕೆ ಪೆಟ್ಟುಕೊಡುವ ಎಲ್ಲಾ ಹುನ್ನಾರಗಳು ನಡೆಯುತ್ತಿವೆ. ಆದ್ದರಿಂದ ಎಲ್ಲರೂ ಎಚ್ಚೆತ್ತುಕೊಳ್ಳಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.