ADVERTISEMENT

ಸಂಸದರ ನಿಧಿ: ಆರು ತಿಂಗಳಲ್ಲಿ ಬಳಸಲು ಸೂಚನೆ

​ಪ್ರಜಾವಾಣಿ ವಾರ್ತೆ
Published 10 ಮೇ 2012, 5:10 IST
Last Updated 10 ಮೇ 2012, 5:10 IST

ರಾಮನಗರ: ಜಿಲ್ಲೆ ಮತ್ತು ಕ್ಷೇತ್ರದ ಜನತೆಗೆ ಮೂಲ ಸೌಕರ್ಯ ಕಲ್ಪಿಸಲು ಲೋಕಸಭಾ ಸದಸ್ಯರ ಕ್ಷೇತ್ರಾಭಿವೃದ್ಧಿ ನಿಧಿಯಲ್ಲಿ ಲಭ್ಯವಿರುವ ಸುಮಾರು 13 ಕೋಟಿ ರೂಪಾಯಿ ಅನುದಾನವನ್ನು ಮುಂದಿನ ಆರು ತಿಂಗಳಲ್ಲಿ ಸಂಪೂರ್ಣವಾಗಿ ಬಳಸಿಕೊಳ್ಳುವಂತೆ ಎಚ್.ಡಿ.ಕುಮಾರಸ್ವಾಮಿ ಅವರು ಜಿಲ್ಲಾಧಿಕಾರಿ ವಿ. ಶ್ರೀರಾಮರೆಡ್ಡಿ ಅವರಿಗೆ ಸೂಚಿಸಿದರು.

ಸಂಸದರ ಕ್ಷೇತ್ರಾಭಿವೃದ್ಧಿ ನಿಧಿಗೆ ದೊರೆತಿರುವ ಅನುದಾನ ಬಳಕೆಗೆ ಸಂಬಂಧಿಸಿದಂತೆ ಇಲ್ಲಿನ ಕಂದಾಯ ಭವನದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

`ಆಡಳಿತ ವ್ಯವಸ್ಥೆಯಲ್ಲಿ ಇದ್ದ ಕೆಲ ಗೊಂದಲದಿಂದ ನನ್ನ ಕ್ಷೇತ್ರಾಭಿವೃದ್ಧಿ ನಿಧಿಯ ಹಣ ಇಲ್ಲಿಯವರೆಗೆ ಬಳಕೆಯಾಗಿಲ್ಲ. ಈ ಅನುದಾನ ಬಳಕೆಯ ಅಧಿಕಾರ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಅವರಿಗಿತ್ತು.
ಇದೀಗ ಆ ಅಧಿಕಾರವನ್ನು ರಾಮನಗರ ಜಿಲ್ಲಾಧಿಕಾರಿ ಅವರಿಗೆ ವರ್ಗಾಯಿಸಲಾಗಿದೆ. ಈಗಲಾದರೂ ಲೋಕಸಭಾ ಸದಸ್ಯರಿಗೆ ಬರುವ ಅನುದಾನವನ್ನು ಸರಿಯಾಗಿ ಬಳಸಿಕೊಳ್ಳಬೇಕು~ ಎಂದು ಅವರು ಅಧಿಕಾರಿಗಳಿಗೆ ನಿರ್ದೇಶಿಸಿದರು.

`ಕ್ಷೇತ್ರದಲ್ಲಿ ಉಲ್ಬಣಗೊಂಡಿರುವ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಹಾಗೂ ಇತರ ಅಗತ್ಯ ಮೂಲ ಸೌಕರ್ಯ ಬಳಕೆಗೆ ಈ ಅನುದಾನ ಉಪಯೋಗಿಸಿಕೊಳ್ಳಬೇಕು. `ನರೇಗಾ~ ಯೋಜನೆಯ ಜತೆಗೆ ಸಂಸದರ ಅನುದಾನದ ಹಣವನ್ನೂ ಬಳಸಿಕೊಳ್ಳಿ. ನರೇಗಾ ಕೆಲಸಕ್ಕೆ ಅಗತ್ಯವಿರುವ ಸಲಕರಣೆಗಳನ್ನು ಸಂಸದರ ಅನುದಾನದಲ್ಲಿ ಪಡೆದು, ಕಾರ್ಮಿಕರಿಗೆ ನೀಡುವ ಕೂಲಿಗೆ ನರೇಗಾ ಹಣವನ್ನು ಬಳಸಿಕೊಳ್ಳಿ~ ಎಂದು ಅವರು ಕಿವಿಮಾತು ಹೇಳಿದರು.
 
13 ಕೋಟಿ ರೂಪಾಯಿಗಳನ್ನು ಪಾರದರ್ಶಕ ಕಾಯ್ದೆಯಡಿ ಖರ್ಚು ಮಾಡುವುದು ವಿಳಂಬವಾಗುತ್ತದೆ. ಈ ಕಾಯ್ದೆಗೆ ಧಕ್ಕೆ ಬಾರದಂತೆ, ಪಾರದರ್ಶಕತೆ ಕಾಯ್ದುಕೊಂಡು ಆರು ತಿಂಗಳಲ್ಲಿ ಬಳಸಿಕೊಳ್ಳುವಂತೆ ಅವರು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.