ಮಾಗಡಿ: `ಸಂಸಾರದಲ್ಲಿ ಎದುರಾಗುವ ಸಮಸ್ಯೆಗಳಿಂದ ಕುಗ್ಗದೆ, ದೈವಭಕ್ತಿಯ ಜೊತೆಗೆ, ಕಾಯಕ ನಿಷ್ಠೆ ಬೆಳೆಸಿಕೊಂಡು ಸರ್ವರಲ್ಲೂ ಸಮಾನತೆಯನ್ನು ಕಾಣುವ ಜೀವನ ರೂಢಿಸಿಕೊಂಡವನೇ ನಿಜವಾದ ಸದ್ಗುಹಸ್ಥ' ಎಂದು ಆರ್ಯ ಶ್ರೀ ರೇಣುಕಾನಂದ ಸ್ವಾಮಿಜಿ ನುಡಿದರು.
ತಾಲ್ಲೂಕು ಆರ್ಯ ಈಡಿಗರ ಸಂಘದ ವತಿಯಿಂದ ಶ್ರೀಗಳ 36ನೇ ಜನ್ಮದಿನದ ಅಂಗವಾಗಿ ಬುಧವಾರ ಏರ್ಪಡಿಸಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
`ಪರೋಪಕಾರದ ಗುಣಗಳನ್ನು ಬೆಳೆಸಿಕೊಂಡಾಗ ವಿಶ್ವವೇ ನಮ್ಮ ಮನೆಯಂತಾಗಿ ಎಲ್ಲೆಡೆ ಶಾಂತಿ ನೆಲೆಸಲು ಸಾಧ್ಯ. ಮಕ್ಕಳಿಗೆ ಬಾಲ್ಯದಿಂದಲೇ ಸಮಾನತೆಯಿಂದ ಬದುಕುವುದನ್ನು ಕಲಿಸಿಬೇಕು. ಇತರರ ಒಳಿತಿನಲ್ಲಿ ನಮ್ಮ ಒಳಿತನ್ನು ಕಾಣುತ್ತಾ, ನಗುನಗುತ್ತಾ ಬದುಕಬೇಕು' ಎಂದು ಅವರು ಹೇಳಿದರು.
ಚಿಂತಕಿ ಜಯಮ್ಮ ಜಯರಾಮಯ್ಯ ಮಾತನಾಡಿ, `ನಾರಾಯಣ ಗುರುಗಳ ಆದರ್ಶಗಳನ್ನು ಮತ್ತು ಶರಣರ ವಚನಗಳಲ್ಲಿನ ಸಾರ್ವತ್ರಿಕ ಸತ್ಯವನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು' ಎಂದರು.
ಯಲ್ಲಮ್ಮ ಗಂಗಣ್ಣ ಮಾತನಾಡಿ, `ಮಕ್ಕಳನ್ನು ದೂರದರ್ಶನ ಮತ್ತು ಮೊಬೈಲ್ ಫೋನ್‌ಗಳಿಂದ ದೂರವಿಡಬೇಕು' ಎಂದು ಸಲಹೆ ನೀಡಿದರು.
ತಾಲ್ಲೂಕು ಆರ್ಯ ಈಡಿಗರ ಸಂಘದ ಅಧ್ಯಕ್ಷ ಎಂ.ಜಿ.ಗೋಪಾಲ್ ಈಡಿಗ ಅಧ್ಯಕ್ಷತೆ ವಹಿಸಿದ್ದರು.
ಸಂಘದ ಮುಖಂಡರಾದ ಬಸವರಾಜು ಈಡಿಗ, ಚಂದ್ರಶೇಖರ್, ರೇಣುಕಾ, ತಿಪ್ಪೇಸ್ವಾಮಿ, ಪುಟ್ಟಸ್ವಾಮಿ, ಮೋಹನ್ ಕುಮಾರ್, ರಾಮಣ್ಣ, ರಂಗಲಕ್ಷ್ಮೀ ಗೋಪಾಲ್, ಶೋಭಾ ಸತೀಶ್, ರಜನಿ ವೆಂಕಟೇಶ್, ಕುಸುಮಾ ಪ್ರಸನ್ನ, ಮಧು, ರೇಣುಕಪ್ಪ, ಗಿರಿಜಮ್ಮ ರಂಗಸ್ವಾಮಿ, ತಿರುಮಲ ತಿರುಪತಿ ಪಾದಯಾತ್ರಾ ಸಮಿತಿಯ ಅಧ್ಯಕ್ಷೆ ಶಾರದಾ ಸುರೇಶ್, ಮಠದ ಮ್ಯಾನೇಜರ್ ನಾಗರಾಜು, ಸಂತೋಷ್ ಇತರರು ಇದ್ದರು.
ತಾಲ್ಲೂಕಿನ ವಿವಿಧೆಡೆಯಿಂದ ಆಗಮಿಸಿದ್ದ ಈಡಿಗ ಸಮುದಾಯದ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.