ADVERTISEMENT

ಸರ್ಕಾರಿ ಭೂಮಿಯಲ್ಲಿ ಮರಳು ಲೂಟಿ: ಆರೋಪ

​ಪ್ರಜಾವಾಣಿ ವಾರ್ತೆ
Published 21 ಮೇ 2012, 4:45 IST
Last Updated 21 ಮೇ 2012, 4:45 IST

ರಾಮನಗರ: ತಾಲ್ಲೂಕಿನ ದೊಡ್ಡಗಂಗವಾಡಿ ಗ್ರಾಮದಲ್ಲಿ ಸರ್ಕಾರಿ ಜಮೀನಿನಲ್ಲಿರುವ ಮರಳನ್ನು ಲೂಟಿ ಮಾಡಿದ್ದಲ್ಲದೆ ತಮ್ಮ ಹೊಲಗಳಿಗೆ ಹೋಗಲು ರೈತರಿಗೆ ಜಮೀನ್ದಾರರೊಬ್ಬರು ಕಿರುಕುಳ ನೀಡುತ್ತಿದ್ದಾರೆಂದು ಗ್ರಾಮಸ್ಥರು ಶುಕ್ರವಾರ ತಹಸೀಲ್ದಾರ್ ಡಾ. ರವಿ ತಿರ್ಲಾಪುರ ಅವರಿಗೆ ದೂರು ನೀಡಿದರು.

ಹಲವಾರು ವರ್ಷಗಳಿಂದ ದೊಡ್ಡಗಂಗವಾಡಿ ಗ್ರಾಮದ ಸರ್ವೇ ನಂ.101ರಲ್ಲಿ ಕಾಲು ದಾರಿ ಇತ್ತು. ಈ ದಾರಿಯ ಮೂಲಕ ಮೇಲ್ಭಾಗದ ಹೊಲಗಳಿಗೆ ವ್ಯವಸಾಯ ಮಾಡಲು ರೈತರು ಓಡಾಡುತ್ತಿದ್ದರು. ಈ ಭಾಗದಲ್ಲಿ ತೊರೆ ಸಹ ಇತ್ತು. ಇಲ್ಲಿಂದ ಕಣ್ವ ಜಲಾಶಯಕ್ಕೆ ನೀರು ಹರಿದು ಹೋಗುತ್ತಿತ್ತು. ಈ ತೊರೆ ಸರ್ಕಾರಿ ನಕ್ಷೆಯಲ್ಲಿ ಕೂಡ ನಮೂದಾಗಿದೆ. ಈ ತೊರೆಗೆ 1952ರಲ್ಲಿ ಅಣೆಕಟ್ಟು ನಿರ್ಮಾಣ ಮಾಡಲಾಗಿತ್ತು. ಇದರಿಂದಾಗಿ ನೂರಾರು ಎಕರೆ ಪ್ರದೇಶಗಳಿಗೆ ನೀರು ಸರಬರಾಜು ಆಗುತ್ತಿತ್ತು. ಇಲ್ಲಿ ಅಪಾರ ಪ್ರಮಾಣದಲ್ಲಿ ಮರಳು ಸಹಾ ಶೇಖರಣೆಯಾಗುತ್ತಿತ್ತು. ಯಾವುದೇ ತೊಂದರೆ ಇಲ್ಲದೆ ಸುಮಾರು 15 ಕುಟುಂಬದ ರೈತರು ತಮ್ಮ ಹೊಲಗಳಿಗೆ ಓಡಾಡುತ್ತಿದ್ದರು.

ಆದರೆ ಕಳೆದ ಆರು ತಿಂಗಳಿನಿಂದ ಜಮೀನ್ದಾರರೊಬ್ಬರು ಇಲ್ಲಿ ಶೇಖರಣೆಯಾಗಿದ್ದ ಸರ್ಕಾರದ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಮರಳನ್ನು ಸಾಗಿಸಿ ಮಾರಾಟ ಮಾಡಿದ್ದಾರೆ. ಅಲ್ಲದೆ ಪಕ್ಕದ ಜಮೀನಿನಲ್ಲಿ ಸಂಗ್ರಹಿಸಿಟ್ಟಿದ್ದಾರೆ. ರೈತರಿಗೆ ತಮ್ಮ ಹೊಲಗಳಿಗೆ ತಿರುಗಾಡಲು ಅಡ್ಡಿಪಡಿಸುತ್ತಿದ್ದಾರೆ. ಕೇಳಿದರೆ ನನ್ನ ಜಮೀನಿನಲ್ಲಿ ತಿರುಗಾಡಲು ಅವಕಾಶ ನೀಡುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ ಎಂದು ಅವರು ತಹಸೀಲ್ದಾರ್‌ಗೆ ನೀಡಿದ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ಮನವಿ ಸ್ವೀಕರಿಸಿದ ತಹಸೀಲ್ದಾರ್ ಮಾತನಾಡಿ, ಕಾನೂನು ಉಲ್ಲಂಘಿಸಿದವರ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು. ಈ ಪ್ರಕರಣಕ್ಕೆ ಸಂಬಂಧಿಸಿದ ವ್ಯಕ್ತಿಗಳಿಗೆ ನೋಟಿಸ್ ನೀಡಲಾಗುವುದು. ತಪ್ಪು ನಡೆದು, ಅಕ್ರಮ ಮರಳು ಸಾಗಾಣೆ ನಡೆದಿದ್ದರೆ ದಂಡ ವಿಧಿಸಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಗ್ರಾಮದ ರೈತರುಗಳಾದ ಎಂ.ರೇವಣ್ಣ, ವೀರಮಲ್ಲಯ್ಯ, ಎಂ. ವೀರಭದ್ರಯ್ಯ, ಡಿ.ಎಸ್.ಸಾವಂದಯ್ಯ, ಡಿ.ವಿ.ಚನ್ನವೀರಯ್ಯ, ಮಲ್ಲಯ್ಯ, ಜಗದೀಶ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.