ADVERTISEMENT

ಸಾಕ್ಷರತೆ ಪ್ರಮಾಣ ಹೆಚ್ಚಳಕ್ಕೆ ಶ್ರಮಿಸಿ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2011, 19:30 IST
Last Updated 13 ಫೆಬ್ರುವರಿ 2011, 19:30 IST

ರಾಮನಗರ:  ದೇಶದ ಅಭಿವೃದ್ಧಿಯ ಮಾನದಂಡವಾಗಿರುವ ಸಾಕ್ಷರತೆಯ ಪ್ರಮಾಣ ಹೆಚ್ಚಾಗಬೇಕಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಸಮುದಾಯ ಇನ್ನಷ್ಟು ಶ್ರಮವಹಿಸಿ ದುಡಿಯಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಪಿ.ಮಾದೇಗೌಡ ತಿಳಿಸಿದರು.ಗ್ರಾಮ ಪಂಚಾಯಿತಿ ಲೋಕಶಿಕ್ಷಣ ಸಮಿತಿ ಸದಸ್ಯರ ಕಾರ್ಯದರ್ಶಿಗಳಿಗೆ, ಮುಖ್ಯ ಶಿಕ್ಷಕರಿಗೆ ಹಾಗೂ ಸಂಪನ್ಮೂಲ ವ್ಯಕ್ತಿಗಳಿಗೆ ಮಹಿಳಾ ಸಮಾಜದಲ್ಲಿ ಶನಿವಾರ ಏರ್ಪಡಿಸಿದ್ದ ‘ಸಾಕ್ಷರ ಭಾರತ್-2012’ ಸಮೀಕ್ಷಾ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಾಲ್ಲೂಕಿನಲ್ಲಿ 2001ರ ಜನಗಣತಿ ಪ್ರಕಾರ ಶೇ 62 ಸಾಕ್ಷರತೆಯ ಪ್ರಮಾಣ ಇದೆ. ಅದನ್ನು ಶಿಕ್ಷಕ ಸಮುದಾಯದವರು ಶೇ 85ಕ್ಕೆ ಹೆಚ್ಚುವಂತೆ ಮಾಡಬೇಕು ಎಂದರು.ಮೈಸೂರಿನ ರಾಜ್ಯ ಸಂಪನ್ಮೂಲ ಕೇಂದ್ರದ ಸಮನ್ವಯ ಅಧಿಕಾರಿ ಡಾ. ಟಿ.ವೆಂಕಟೇಶ್ ಮಾತನಾಡಿ, ಕೌಟುಂಬಿಕ ಸಮೀಕ್ಷೆ, ಗ್ರಾಮ ಮಟ್ಟದ ಕ್ರೋಡೀಕೃತ ನಮೂನೆ, ಅನಕ್ಷರಸ್ಥರು ಹಾಗೂ ಬೋಧಕರ ಪಟ್ಟಿ ನಮೂನೆಗಳನ್ನು ಭರ್ತಿ ಮಾಡುವ ಮಾದರಿಯನ್ನು ವಿವರಿಸಿದರು.

ಸಾಕ್ಷರ ಭಾರತ್‌ನ ತಾಲ್ಲೂಕು ಸಂಯೋಜನಾಧಿಕಾರಿ ಎಸ್. ಶ್ರೀನಿವಾಸ ಮೂರ್ತಿ ಮಾತನಾಡಿ, ರಾಜ್ಯದಲ್ಲಿ ಮಹಿಳಾ ಸಾಕ್ಷರತಾ ಪ್ರಮಾಣ ಶೇ 50ಕ್ಕಿಂತ ಕಡಿಮೆಯಿರುವ 20 ಜಿಲ್ಲೆಗಳಲ್ಲಿ ಸಾಕ್ಷರ ಭಾರತ್ ಸಮೀಕ್ಷಾ ಕಾರ್ಯ ಹಮ್ಮಿಕೊಳ್ಳಲಾಗಿದೆ. ಅದರಲ್ಲಿ ರಾಮನಗರ ಜಿಲ್ಲೆ ಕೂಡ ಒಂದಾಗಿದೆ.

15 ವರ್ಷ ಮೀರಿದ ಅನಕ್ಷರಸ್ಥರಿಗೆ ಮೂಲ ಸಾಕ್ಷರತೆ, ಸಮಾನ ಶಿಕ್ಷಣ, ವ್ಯಕ್ತಿ ಕೌಶಲ್ಯ ತರಬೇತಿ ಹಾಗೂ ಮುಂದುವರಿಕೆ ಶಿಕ್ಷಣ ನೀಡುವುದು ಇದರ ಉದ್ದೇಶವಾಗಿದೆ. ಈ ಮೂಲಕ ತಾಲ್ಲೂಕಿನ ಸಾಕ್ಷರತೆ ಪ್ರಮಾಣವನ್ನು ಶೇ 85ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಅವರು ಹೇಳಿದರು. ಶಿಕ್ಷಣ ಸಂಯೋಜಕ ಶಂಕರಪ್ಪ, ಜಿಲ್ಲಾ ಸಂಪನ್ಮೂಲ ವ್ಯಕ್ತಿ ಜೆ.ಶ್ರೀಧರ್ ರಾಜು, ಮುಖ್ಯ ಶಿಕ್ಷಕಿ ಎಸ್. ನಾಗಮಣಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.