ADVERTISEMENT

ಸಿ.ಎಂ ಕ್ಷಮೆಯಾಚನೆಗೆ ಜೆಡಿಎಸ್ ಪಟ್ಟು

ಪಕ್ಷದ ವರಿಷ್ಠ ದೇವೇಗೌಡರ ವಿರುದ್ಧದ ಹೇಳಿಕೆಗೆ ಮುಖಂಡರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2018, 10:44 IST
Last Updated 6 ಏಪ್ರಿಲ್ 2018, 10:44 IST
ಪತ್ರಿಕಾಗೋಷ್ಠಿಯಲ್ಲಿ ವಿಧಾನಪರಿಷತ್‌ ಸದಸ್ಯ ರಮೇಶ್ ಬಾಬು ಮಾತನಾಡಿದರು
ಪತ್ರಿಕಾಗೋಷ್ಠಿಯಲ್ಲಿ ವಿಧಾನಪರಿಷತ್‌ ಸದಸ್ಯ ರಮೇಶ್ ಬಾಬು ಮಾತನಾಡಿದರು   

ರಾಮನಗರ: ‘ಸಿದ್ದರಾಮಯ್ಯ ಅವರನ್ನು ಬೆಳೆಸಿದ್ದೇ ಎಚ್.ಡಿ.ದೇವೇಗೌಡರು. ಅವರ ವಿರುದ್ಧವೇ ಮಾತನಾಡುವ ಮೂಲಕ ಮುಖ್ಯಮಂತ್ರಿ ತಮ್ಮ ಮುಖಕ್ಕೆ ತಾವೇ ಮಸಿ ಬಳಿದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಕ್ಷಮೆಯಾಚಿಸಬೇಕು’ ಎಂದು ವಿಧಾನ ಪರಿಷತ್ ಸದಸ್ಯ ರಮೇಶ್‌ ಬಾಬು ಆಗ್ರಹಿಸಿದರು.

‘ಮಾಗಡಿಯಲ್ಲಿ ಬುಧವಾರ ನಡೆದಕಾಂಗ್ರೆಸ್‌ ಸಮಾವೇಶದಲ್ಲಿ ದೇವೇಗೌಡರ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಲಾಗಿದೆ. ಅವರು, ಸೋಲಿನ ಹತಾಶೆಯಿಂದ ಈ ಮಾತುಗಳನ್ನಾಡಿದ್ದಾರೆ. ಈ ಹಿಂದೆ ಮುಖ್ಯಮಂತ್ರಿಯಾಗಿ ಎದುರಿಸಿದ ಚುನಾವಣೆಗಳಲ್ಲಿ ಗುಂಡೂರಾವ್, ನಿಜಲಿಂಗಪ್ಪ, ಎಸ್.ಆರ್. ಬೊಮ್ಮಾಯಿ, ಎಚ್.ಎಚ್.ಪಟೇಲ್‌ರಂತ ನಾಯಕರು ಸೋತಿದ್ದಾರೆ. ಈ ಬಾರಿಯೂ ಸಿದ್ದರಾಮಯ್ಯ ಸೋಲುವುದು ಖಚಿತ. ವರುಣಾ, ಚಾಮುಂಡೇಶ್ವರಿ ಕ್ಷೇತ್ರಗಳನ್ನು ಅವರೇ ಪ್ರತಿಷ್ಠೆಯ ಕ್ಷೇತ್ರಗಳಾಗಿ ಮಾಡಿಕೊಂಡಿದ್ದಾರೆ. ಮೀಸಲು ಕ್ಷೇತ್ರಗಳನ್ನು ಹೊರತುಪಡಿಸಿ ರಾಜ್ಯದ ಉಳಿದ 173 ಕ್ಷೇತ್ರಗಳಲ್ಲಿ ಎಲ್ಲಿಯೇ ನಿಂತರೂ ಜೆಡಿಎಸ್ ಕಾರ್ಯಕರ್ತರು ಅವರನ್ನು ಸೋಲಿಸುತ್ತಾರೆ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಸಿದ್ದರಾಮಯ್ಯ1983ರಲ್ಲಿ ಮೊದಲ ಬಾರಿಗೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಚುನಾವಣೆಗೆ ನಿಂತಾಗ ಅವರಿಗೆ ಲೋಕದಳದಿಂದ ಟಿಕೆಟ್ ನೀಡಿ, ಹಣಕಾಸಿನ ಸಹಾಯ ಮಾಡಿದ್ದು ಜಾರ್ಜ್‌ ಫರ್ನಾಂಡಿಸ್. ಆದರೆ, ಸದ್ಯ ಹಾಸಿಗೆ ಹಿಡಿದಿರುವ ಅವರನ್ನು ಸಿದ್ದು ಸೌಜನ್ಯಕ್ಕಾದರೂ ಭೇಟಿ ಮಾಡಿಲ್ಲ; ಎಂದು ಟೀಕಿಸಿದರು.

ADVERTISEMENT

‘1985ರಲ್ಲಿ ಸಿದ್ದರಾಮಯ್ಯರನ್ನು ಜೆಡಿಎಸ್‌ಗೆ ಸೇರಿಸಿಕೊಂಡದ್ದೇ ದೇವೇಗೌಡರು. ನಂತರದಲ್ಲಿ ಪಿಜಿಆರ್‌ ಸಿಂಧ್ಯಾ, ಎಂ.ಪಿ.ಪ್ರಕಾಶ್‌ರಂತಹ ನಾಯಕರನ್ನೂ ಬದಿಗೊತ್ತಿ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಕೊಟ್ಟರು. ಆದರೆ, ಇದ್ಯಾವುದರ ಕುರಿತು ಅವರಿಗೆ ಕೃತಜ್ಞತೆ ಇದ್ದಂತೆ ಇಲ್ಲ. ಗೌಡರ ಬಗ್ಗೆ ಯಾರು ಏನೇ ಟೀಕೆ ಮಾಡಿದರೂ ‘ನಾಯಿ ಬೊಗಳಿದರೆ ದೇವಲೋಕ ಹಾಳಾಗದು’ಎಂದರು.

ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ‘ಸಿದ್ದರಾಮಯ್ಯ ಒಬ್ಬ ಡೋಂಗಿ ಸಮಾಜವಾದಿ’ಎಂದು ಟೀಕಿಸಿದರು.‘1996ರಲ್ಲಿ ದೇವೇಗೌಡರು ಪ್ರಧಾನಿಯಾಗಿ ಅಧಿಕಾರದಿಂದ ಇಳಿಯುವ ಕಡೆಯ ದಿನದಂದು ಬಿಜೆಪಿ ನಾಯಕ ವಾಜಪೇಯಿ ಬೆಂಬಲ ನೀಡುವುದಾಗಿ ಮುಂದೆ ಬಂದರು. ಆದರೆ, ಗೌಡರು ಅದನ್ನು ನಯವಾಗಿ ತಿರಸ್ಕರಿಸಿ ಅಧಿಕಾರ ತ್ಯಾಗ ಮಾಡಿದರು. ಅವರೆಂದು ಇನ್ನೊಬ್ಬರ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ರಾಜಕಾರಣಿ ಅಲ್ಲ’ ಎಂದರು.

‘ಗಣಿಗಾರಿಕೆ ವಿರುದ್ಧ ಬಳ್ಳಾರಿಯಲ್ಲಿ ಪಾದಯಾತ್ರೆ ಮಾಡಿದ್ದ ಸಿದ್ದರಾಮಯ್ಯ ಇಂದು ಅದೇ ಆನಂದ ಸಿಂಗ್, ನಾಗೇಂದ್ರ ಅವರನ್ನು ಪಕ್ಷಕ್ಕೆ ಸೇರಿಸಿ
ಕೊಂಡಿದ್ದಾರೆ. ಅಶೋಕ್ ಖೇಣಿಯನ್ನೂ ಬರಮಾಡಿಕೊಂಡಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಮುಂದೆ 25 ಸ್ಥಾನ ಪಡೆಯು
ವುದು ಕಾಂಗ್ರೆಸ್ ಹೊರತು ಜೆಡಿಎಸ್ ಅಲ್ಲ’ ಎಂದರು.

‘ಕಾವೇರಿ ವಿಚಾರದಲ್ಲಿ ದೇವೇಗೌಡರ ಕಾಲಿಗೆ ಬಿದ್ದಿದ್ದ ಸಿದ್ದರಾಮಯ್ಯ ಇಂದು ಅವರ ಜುಟ್ಟು ಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಒಬ್ಬ ಗೌಡರು 10ಮೋದಿ, 100 ಅಮಿತ್‌ ಶಾ ಹಾಗೂ 500 ರಾಹುಲ್‌ ಗಾಂಧಿಗೆ ಸಮ ಎಂದರು.

ಮಾಗಡಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಸಂಭಾವ್ಯ ಅಭ್ಯರ್ಥಿ ಎ.ಮಂಜು, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ್‌ಕುಮಾರ್, ಹಿರಿಯ ವಕೀಲ ಸುಬ್ಬಾಶಾಸ್ತ್ರಿ, ಮುಖಂಡರಾದ ಎಚ್.ಎಂ. ಕೃಷ್ಣಮೂರ್ತಿ, ಪೂಜಾರಿಪಾಳ್ಯ ಕೃಷ್ಣಮೂರ್ತಿ, ಎಚ್.ಸಿ.ರಾಜಣ್ಣ, ಜಗದೀಶ್‌, ಪ್ರಾಣೇಶ್, ರಾಜಶೇಖರ್, ಜಯಕುಮಾರ್, ಅಜಯ್‌ ದೇವೇಗೌಡ, ಶೇಖಪ್ಪ ಇದ್ದರು.

‘ಹೊಂದಾಣಿಕೆ ನಿರ್ಧಾರ ನಮ್ಮದಲ್ಲ’

ಬಿಬಿಎಂಪಿಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮುಂದುವರಿದಿರುವ ಕುರಿತು ಪ್ರತಿಕ್ರಿಯಿಸಿದ ರಮೇಶ್‌ ಬಾಬು ‘ಬಿಬಿಎಂಪಿ ಕಾಯ್ದೆ ಪ್ರಕಾರ ಅವಿಶ್ವಾಸ ಮಂಡಿಸುವ ಹಕ್ಕು ನಮಗೆ ಇಲ್ಲ. ನಾವು ಮೈತ್ರಿ ತ್ಯಜಿಸಲು ಸಿದ್ದರಿದ್ದೇವೆ. ಕಾಂಗ್ರೆಸ್ ನಾಯಕರು ತೀರ್ಮಾನ ಕೈಗೊಳ್ಳಲಿ’ ಎಂದು ಸವಾಲು ಹಾಕಿದರು.

**

ಏಳು ಬಂಡಾಯ ಶಾಸಕರಿಗೆ ಹಣ ನೀಡಿ ರಾಜ್ಯಸಭೆ ಚುನಾವಣೆಯಲ್ಲಿ ವೋಟು ಹಾಕಿಸಿಕೊಂಡಿದ್ದು ಸಿದ್ದರಾಮಯ್ಯ. ಇದು ಜೆಡಿಎಸ್ ಒಡೆಯುವ ತಂತ್ರ – ಕೆ.ಟಿ. ಶ್ರೀಕಂಠೇಗೌಡ,ವಿಧಾನ ಪರಿಷತ್‌ ಸದಸ್ಯ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.