ADVERTISEMENT

ಸಿರಿಧಾನ್ಯ ಬೆಳೆಯತ್ತ ರೈತರ ಆಸಕ್ತಿ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2017, 9:12 IST
Last Updated 27 ಅಕ್ಟೋಬರ್ 2017, 9:12 IST
ರಾಮನಗರ ತಾಲ್ಲೂಕಿನ ನಿಜಿಯಪ್ಪನದೊಡ್ಡಿಯ ಜಮೀನಿನಲ್ಲಿ ಕಟಾವಿಗೆ ಬಂದಿರುವ ನವಣೆ
ರಾಮನಗರ ತಾಲ್ಲೂಕಿನ ನಿಜಿಯಪ್ಪನದೊಡ್ಡಿಯ ಜಮೀನಿನಲ್ಲಿ ಕಟಾವಿಗೆ ಬಂದಿರುವ ನವಣೆ   

ರಾಮನಗರ: ಜಿಲ್ಲೆಯಲ್ಲಿ ಕೆಲ ದಶಕಗಳಿಂದ ಕಣ್ಮರೆಯಾಗಿದ್ದ ಸಿರಿಧಾನ್ಯದ ಬೆಳೆಗಳು ಈಗ ಅಲ್ಲಲ್ಲಿ ಕಂಡು ಬರುತ್ತಿವೆ. ಮಳೆ ಜೂಜಾಟದಿಂದ ಬೇಸತ್ತ ರೈತರು ಅಲ್ಪ ನೀರಿನಲ್ಲಿಯೂ ಚೆನ್ನಾಗಿ ಬೆಳೆಯುವ ಸಿರಿಧಾನ್ಯಗಳತ್ತ ಮುಖ ಮಾಡಿದ್ದಾರೆ.

ಒಂದು ಕಾಲಕ್ಕೆ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ನವಣೆ, ಹಾರಕ, ಸಜ್ಜೆ, ಬರಗ, ಸಾಮೆ, ಕೊರಲೆ ಇದೀಗ ಬೇಡಿಕೆ ಪಡೆಯುತ್ತಿವೆ. ಬದಲಾದ ಆಹಾರ ಪದ್ಧತಿಯಿಂದ ಜನರಲ್ಲಿ ಅಪೌಷ್ಟಿಕತೆ, ರೋಗ ನಿರೋಧಕ ಶಕ್ತಿ ಕುಂದುತ್ತಿರುವುದು ಸಿರಿಧಾನ್ಯಗಳಿಗೆ ಬೇಡಿಕೆ ಬರುವಂತಾಗಿದೆ.

ನೀರಾವರಿ ಇಲ್ಲದೆಯೇ ಕೇವಲ ಮಳೆಯ ಆಶ್ರಯದಲ್ಲಿ ಉತ್ತಮವಾಗಿ ಬೆಳೆಯುವ ಸಿರಿಧಾನ್ಯಗಳು ಬಯಲು ಸೀಮೆಯ ರೈತಾಪಿ ವರ್ಗಕ್ಕೆ ದಿನೇ ದಿನೇ ಹತ್ತಿರವಾಗುತ್ತಿವೆ. ಭತ್ತ ಬೆಳೆಯಲು ಬೇಕಾಗುವ ನೀರಿನಲ್ಲಿ ಕೇವಲ ಶೇ25ರಷ್ಟು ನೀರು ಲಭಿಸಿದರೂ ಸಾಕು ಸಿರಿಧಾನ್ಯಗಳು ಹುಲುಸಾಗಿ ಬೆಳೆಯುತ್ತವೆ.

ADVERTISEMENT

ಸಿರಿಧಾನ್ಯ ಬೆಳೆಯಲು ಫಲವತ್ತಾದ ಭೂಮಿ ಬೇಕಾಗಿಲ್ಲ. ಒಣ ಭೂಮಿ, ಕಲ್ಲು ಬಂಡೆಗಳಿಂದ ಕೂಡಿರುವ ಬರಡು ಭೂಮಿಯಲ್ಲೂ ಬೆಳೆಯಬಹುದು. ಯಾವುದೇ ಹವಾಮಾನದಲ್ಲೂ ಬೇಕಾದರೂ ಹೊಂದಿಕೊಳ್ಳವ ಬೆಳೆಯಾಗಿದೆ. ಈ ಬೆಳೆಗಳಿಗೆ ಯಾವುದೇ ರಾಸಾಯನಿಕ ಗೊಬ್ಬರ ಅಗತ್ಯವಿಲ್ಲ. ಕಂಪೆನಿಗಳ ಬೀಜಗಳು, ಕೀಟನಾಶಕ, ಕ್ರಿಮಿನಾಶಕಗಳು ಬೇಕಾಗಿಯೇ ಇಲ್ಲ.

‘ಮಧುಮೇಹ, ಬೊಜ್ಜು ಮತ್ತಿತರ ಕಾಯಿಲೆಗಳಿಗೆ ಈ ಧಾನ್ಯಗಳ ಸೇವನೆ ಉತ್ತಮ ಮದ್ದಾಗಿದೆ. ಹಿಂದೆ ಸಿರಿಧಾನ್ಯ ಬೆಳೆಯುತ್ತಿದ್ದ ಕಾಲದಲ್ಲಿ ಜನ ಉತ್ತಮ ಆರೋಗ್ಯ ಹೊಂದಿ ಗಟ್ಟಿಮುಟ್ಟಾಗಿದ್ದರು. ಯಾವುದೇ ರೋಗ ಇವರ ಬಳಿ ಸುಳಿಯುತ್ತಿರಲಿಲ್ಲ’ ಎನ್ನುತ್ತಾರೆ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಎಸ್.ಎಂ.ದೀಪಜಾ.

‘ಗರ್ಭಿಣಿಯರಿಗೆ, ವೃದ್ಧರಿಗೆ ಬೇಕಾಗುವ ಪೋಷಕಾಂಶ ಈ ಧಾನ್ಯಗಳಲ್ಲಿ ಅಡಗಿದೆ. ನಾರಿನಾಂಶ ಇರುವುದರಿಂದ ಜೀರ್ಣಶಕ್ತಿಗೆ ಸಹಕಾರಿಯಾಗಲಿದೆ. ಅಕ್ಕಿ ಮತ್ತು ಗೋಧಿಗಿಂತಲೂ ಈ ಧಾನ್ಯಗಳಲ್ಲಿ ಪ್ರೋಟಿನ್, ಕ್ಯಾಲ್ಸಿಯಂ, ವಿಟಮಿನ್‌ ಐದು ಪಟ್ಟು ಹೆಚ್ಚಾಗಿರುತ್ತದೆ’ ಎಂದು ತಿಳಿಸಿದರು.

ಮಾರುಕಟ್ಟೆ ಕಲ್ಪಿಸಿ: ‘ಸಿರಿಧಾನ್ಯ ಬೆಳೆಯುವ ರೈತರಿಗೆ ಸೂಕ್ತ ಮಾರುಕಟ್ಟೆ ಇಲ್ಲದೆ ಇರುವುದರಿಂದ ಈ ಬೆಳೆಗಳು ಬೆಳೆಯಲು ಸ್ವಲ್ಪ ಹಿಂದೇಟು ಹಾಕುತ್ತಿದ್ದಾರೆ. ಸರ್ಕಾರ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿ ಉತ್ತೇಜಿಸಬೇಕಾಗಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಅಕ್ಕಿ, ಗೋಧಿ, ಜತೆಗೆ ಈ ಧಾನ್ಯ ವಿತರಿಸಬೇಕು’ ಎನ್ನುತ್ತಾರೆ ನಿಜಿಯಪ್ಪನದೊಡ್ಡಿಯ ರೈತ ಎನ್.ಆರ್.ಸುರೇಂದ್ರ.‌

‘ವಿದ್ಯಾರ್ಥಿ ನಿಲಯಗಳಲ್ಲಿ, ಅಂಗನವಾಡಿ ಕೇಂದ್ರಗಳಲ್ಲಿ, ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದಲ್ಲಿ, ಸರ್ಕಾರಿ ಕ್ಯಾಂಟಿನ್‌ಗಳಲ್ಲಿ ಇವುಗಳನ್ನು ಕಡ್ಡಾಯವಾಗಿ ಬಳಸುವ ವ್ಯವಸ್ಥೆ ಜಾರಿಗೊಳಿಸಿದರೆ ಮಾರುಕಟ್ಟೆ ಸಮಸ್ಯೆಗೆ ಪರಿಹಾರವಾಗುತ್ತದೆ’ ಎಂದು ತಿಳಿಸಿದರು.

ಸಿರಿಧಾನ್ಯಕ್ಕೆ ಉತ್ತಮ ಬೆಲೆ : ‘ಈಗ ಸಿರಿಧಾನ್ಯಗಳಿಗೆ ಉತ್ತಮ ಬೆಲೆ ಸಿಗುತ್ತಿದೆ. ಎಲ್ಲೆಡೆ ಸಿರಿಧಾನ್ಯಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಇದು ಆರೋಗ್ಯಕ್ಕೆ ಒಳ್ಳೆಯದು, ಇದರ ಮೇವು ದನಕರುಗಳಿಗೆ ಉತ್ತಮ ಎಂಬ ಮಾತು ಕೇಳಿದ್ದೆ. ಆದ್ದರಿಂದ ಈ ವರ್ಷ ನಾವು ಸಿರಿಧಾನ್ಯ ಬೆಳೆಯುತ್ತಿದ್ದೇವೆ’ ಎಂದು ದೊಡ್ಡಗಂಗವಾಡಿ ಕೃಷಿಕ ಡಿ.ಆರ್. ಸುಂದರೇಶ್, ಚನ್ನೇಗೌಡನದೊಡ್ಡಿಯ ರೈತ ಚನ್ನೇಗೌಡ ಹೇಳಿದರು.

ಎಸ್. ರುದ್ರೇಶ್ವರ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.