ADVERTISEMENT

ಸುಪ್ರೀಂ ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 3 ಮೇ 2012, 5:55 IST
Last Updated 3 ಮೇ 2012, 5:55 IST

ರಾಮನಗರ: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ಆರ್‌ಜಿಯುಎಚ್‌ಎಸ್) ನಿರ್ಮಾಣದ ಭೂ ಸ್ವಾಧೀನ ಕಾರ್ಯಕ್ಕೆ ಸಂಬಂಧಿಸಿದಂತೆ ಈ ಹಿಂದೆ `ಡಿ-ನೋಟಿಫೈ~ ಮಾಡಿದ್ದ 12.9 ಎಕರೆ ಭೂಮಿಯನ್ನು ಪುನಃ ಹಿಂದಕ್ಕೆ ಪಡೆದು ವಿ.ವಿ ನಿರ್ಮಾಣ ಕಾರ್ಯ ಕೈಗೊಳ್ಳಲು ಸರ್ಕಾರ ಬದ್ಧವಿದ್ದು ಈ ಸಂಬಂಧ ಸುಪ್ರೀಂ ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಲು ನಿರ್ಧರಿಸಲಾಗಿದೆ. 

 ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ. ರಾಮದಾಸ್ ಹಾಗೂ ಅರಣ್ಯ, ಜಿಲ್ಲಾ ಉಸ್ತುವಾರಿ ಸಚಿವ ಸಿ.ಪಿ.ಯೋಗೇಶ್ವರ್ ನೇತೃತ್ವದಲ್ಲಿ ಬುಧವಾರ ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಯಿತು.

ವಿ.ವಿಗೆ ಭೂ ಸ್ವಾಧೀನ ಮಾಡಿಕೊಳ್ಳುವುದನ್ನು ವಿರೋಧಿಸಿ ಹಾಗೂ ಸೂಕ್ತ ಪರಿಹಾರ ಒದಗಿಸುವಂತೆ ಕೋರಿ ಅರ್ಚಕರ ಹಳ್ಳಿ ರೈತರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ಹಿನ್ನೆಲೆಯಲ್ಲಿ  ಸಚಿವರು ಬುಧವಾರ ನಗರದ ಕಂದಾಯ ಭವನದಲ್ಲಿ ಅಧಿಕಾರಿಗಳು ಹಾಗೂ ರೈತರ ಜತೆ ನಡೆಸಿದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಂಡರು.

ರೈತರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿ ಇದೇ 4ರಂದು ವಿಚಾರಣೆಗೆ ಬರಲಿದ್ದು, ಅದಕ್ಕೆ ಸರ್ಕಾರದಿಂದ ಸೂಕ್ತ ರೀತಿಯಲ್ಲಿ ವಾದ ಮಂಡಿಸಲು ಅಗತ್ಯ ಸಿದ್ಧತೆ ನಡೆಸಲು ಅಧಿಕಾರಿಗಳಿಗೆ ಈ ಸಂದರ್ಭದಲ್ಲಿ ಸೂಚಿಸಲಾಯಿತು.

`ವಿಶ್ವವಿದ್ಯಾಲಯ ನಿರ್ಮಾಣಕ್ಕೆಂದು ಗುರುತಿಸಲಾಗಿದ್ದ ಭೂಮಿಯಲ್ಲಿ ತಮಗೆ ಬೇಕಾದ ಕೆಲವರಿಗೆ `ಡಿ-ನೋಟಿಫೈ~ ಮಾಡಿ ಸರ್ಕಾರ ಭೂಮಿಯನ್ನು ಹಿಂದಿರುಗಿಸಿದೆ. ಅದೇ ರೀತಿ ರೈತರ ಜಮೀನನ್ನು ಡಿ-ನೋಟಿಫೈ ಮಾಡಿ ಹಿಂದಿರುಗಿಸಿ ಎಂದು ಸುಪ್ರೀಂ ಕೋರ್ಟ್‌ನಲ್ಲಿ ರೈತರು ಮನವಿ ಮಾಡಿದ್ದಾರೆ. ಹಾಗಾಗಿ ಡಿ-ನೋಟಿಫೈ ಆದೇಶವನ್ನು ಹಿಂಪಡೆದು, ಮೊದಲು ಗುರುತಿಸಿದ್ದ ಎಲ್ಲ ಜಾಗವನ್ನು ವಿ.ವಿ ನಿರ್ಮಾಣಕ್ಕೆ ಬಳಸಿಕೊಳ್ಳುವುದಾಗಿ ಸುಪ್ರೀಂ ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸುವಂತೆ~ ಸಚಿವ ರಾಮದಾಸ್ ಕೆಐಎಡಿಬಿ ಅಧಿಕಾರಿಗಳಿಗೆ ಸೂಚಿಸಿದರು.

ರಾಮನಗರದಲ್ಲೇ ವಿ.ವಿ: ವಿ.ವಿ. ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜನ್ನು ರಾಮನಗರದಲ್ಲಿಯೇ ನಿರ್ಮಿಸಬೇಕು ಎಂಬುದು ಈ ಭಾಗದ ಜನತೆಯ ಮತ್ತು ಜನ ಪ್ರತಿನಿಧಿಗಳ ಬೇಡಿಕೆಯಾಗಿದೆ. ಈ ಸಂಬಂಧ ಹಲವಾರು ಪ್ರತಿಭಟನೆ, ಹೋರಾಟಗಳು ನಡೆದಿವೆ. ಹಾಗಾಗಿ ಸರ್ಕಾರ ವಿ.ವಿಯನ್ನು ರಾಮನಗರದಲ್ಲಿಯೇ ನಿರ್ಮಿಸಲು ಬದ್ಧವಿದೆ. ಈಗಾಗಲೇ ಅರ್ಚಕರಹಳ್ಳಿಯಲ್ಲಿ ವಿ.ವಿ ನಿರ್ಮಿಸಲು ಸರ್ಕಾರ ಕ್ರಮ ತೆಗೆದುಕೊಂಡಿದೆ.

ಈ ಸಂಬಂಧ ಕೆಲ ರೈತರಿಂದ ಭೂ ಸ್ವಾಧೀನವನ್ನು ಮಾಡಿಕೊಳ್ಳಲಾಗಿದ್ದು, ಹಲವರಿಗೆ ಪರಿಹಾರ ಕೂಡ ನೀಡಲಾಗಿದೆ. ಹೀಗಿರುವಾಗ ಈ ಭೂಮಿಯನ್ನು ಕೈಬಿಡುವುದು ಕಷ್ಟದ ಕೆಲಸ ಎಂದು ಸಚಿವರು ಸ್ಪಷ್ಟಪಡಿಸಿದರು.

ಮಾರ್ಗಸೂಚಿ ದರ- ಸಿ.ಎಂ ಜತೆ ಚರ್ಚೆ: ವಿ.ವಿಗೆಂದು ೂ ಸ್ವಾಧೀನ ಪಡಿಸಿಕೊಳ್ಳುವ ಭೂಮಿಗೆ ಹಾಲಿ ಮಾರ್ಗಸೂಚಿ ದರದ ಪ್ರಕಾರ ಪರಿಹಾರ ನೀಡಿದರೆ ಭೂಮಿ ಬಿಟ್ಟುಕೊಡಲು ಸಿದ್ಧ ಎಂದು ರೈತರು ತಿಳಿಸಿದಾಗ, ಈ ಬೇಡಿಕೆ ಕುರಿತು ಒಂದೆರೆಡು ದಿನದಲ್ಲಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರೊಡನೆ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳುವುದಾಗಿ ಸಚಿವರು ತಿಳಿಸಿದರು.

ಜೂನ್‌ನಲ್ಲಿ ಕೆಲಸ ಆರಂಭ: ಭೂ ಸ್ವಾಧೀನ ಸಮಸ್ಯೆಯನ್ನು ಮೇ ಅಂತ್ಯದೊಳಗೆ ಪರಿಹರಿಸಿಕೊಂಡು ಜೂನ್ ತಿಂಗಳಿಂದ ವಿ.ವಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲು ಅಗತ್ಯ ಕ್ರಮಗಳನ್ನು ಸರ್ಕಾರ ಕೈಗೊಳ್ಳಲಿದೆ ಎಂದು ಅವರು ತಿಳಿಸಿದರು.

ಶಾಸಕ ಕೆ.ರಾಜು, ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಎಂ.ಸಿ.ಅಶ್ವತ್ಥ್, ಜಿಲ್ಲಾಧಿಕಾರಿ ವಿ. ಶ್ರೀರಾಮರೆಡ್ಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ, ವಿ.ವಿ ಕುಲಪತಿ ಡಾ. ಶ್ರೀಪ್ರಕಾಶ್, ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣಗೌಡ, ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರ್‌ವಾಲ್, ಉಪ ವಿಭಾಗಾಧಿಕಾರಿ ಸ್ನೇಹಾ, ರೈತರಾದ ಸೋಮಶೇಖರ್, ಹೊನ್ನಪ್ಪ, ಮೋಹನ್, ಪ್ರಕಾಶ್, ಮೂರ್ತಿ ಸಭೆಯಲ್ಲಿ ಪಾಲ್ಗೊಂಡಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.