ರಾಮನಗರ: ಹೇಮಾವತಿಯಿಂದ ನೀರು ಹರಿಸಿ ಮಾಗಡಿಯ ಕೆರೆಗಳನ್ನು ತುಂಬಿಸುವ ಪ್ರಸ್ತಾವನೆ ಬಹಳ ಹಿಂದಿನಿಂದಲೂ ಇತ್ತು. ಇದನ್ನು ಕಾಂಗ್ರೆಸ್ ಪಕ್ಷ ತನ್ನ ಸಾಧನೆ ಎಂದು ಬೀಗುವ ಅಗತ್ಯವಿಲ್ಲ’ ಎಂದು ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.
ಹೋಬಳಿಯ ಹೆಜ್ಜಾಲದಲ್ಲಿ ಶಾಸಕರ ನಿಧಿಯಿಂದ ರೂ 12 ಲಕ್ಷ ವೆಚ್ಚದಲ್ಲಿ ನಿರ್ಮಿಸಲಿರುವ ಶುದ್ಧ ನೀರಿನ ಘಟಕಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.
ಹೆೇಮಾವತಿಯಿಂದ ನೀರು ತಂದು ಮಾಗಡಿ ವ್ಯಾಪ್ತಿಯ 89 ಕೆರೆಗಳನ್ನು ತುಂಬಿಸುವ ನಿರ್ಧಾರ ಇಂದು ನಿನ್ನೆಯದಲ್ಲ. 1993-94ರಲ್ಲಿ ಅಂದಿನ ವಿಧಾನ ಪರಿಷತ್ ಸದಸ್ಯ ಟಿ.ಎ.ರಂಗಯ್ಯ ಅವರು ಪ್ರಥಮವಾಗಿ ಶ್ರೀರಂಗ ಯೋಜನೆ ಕೈಗೊಳ್ಳಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು ಎಂದು ತಿಳಿಸಿದರು.
ಹಿಂದೆ ವೀರಪ್ಪಮೊಯಿಲಿ ಅವರ ಸರ್ಕಾರದಲ್ಲಿ ನನ್ನನ್ನೂ ಒಳಗೊಂಡಂತೆ ಯೋಜನಾ ಸಮಿತಿ ರಚಿಸಲಾಗಿತ್ತು. ನಂತರದ ದಿನಗಳಲ್ಲಿ ಬಂದ ಎಸ್.ಎಂ.ಕೃಷ್ಣ ಅವರ ಸರ್ಕಾರದ ಅವಧಿಯಲ್ಲಿ ತಮ್ಮನ್ನು ಸಮಿತಿಯಿಂದ ಕೈಬಿಡಲಾಯಿತು. ನಂತರದ ಬಂದ ಸರ್ಕಾರಗಳಲ್ಲಿ ಯೋಜನೆ ಅನುಷ್ಠಾನಕ್ಕೆ ಮುಂದಾಗಿರಲಿಲ್ಲ ಎಂದು ಅವರು ವಿವರಿಸಿದರು.
ಹಿಂದಿನ ಬಿಜೆಪಿ ಸರ್ಕಾರದಲ್ಲಿ ನೀರಾವರಿ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಅವರಿಗೂ ಅನೇಕ ಬಾರಿ ಈ ಬಗ್ಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಸರ್ಕಾರ ಇಚ್ಛಾಶಕ್ತಿ ಕೊರತೆಯಿಂದ ಬೇಡಿಕೆ ನೆರವೇರಲಿಲ್ಲ. ಇದೀಗ ಕಾಂಗ್ರೆಸ್ ಅಧಿಕಾರದಲ್ಲಿ ಅನುಷ್ಠಾನವಾಗುತ್ತಿದ್ದು, ಅದಕ್ಕೆ ಸರ್ಕಾರವನ್ನು ಅಭಿನಂದಿಸುವುದಾಗಿ ಶಾಸಕ ಬಾಲಕೃಷ್ಣ ಹೇಳಿದರು.
ಮೂರು ವರ್ಷದವರೆಗೆ ಮಾತಾಡಲ್ಲ: ಈ ಯೋಜನೆ ಅನುಷ್ಠಾನ ಕುರಿತು ಸದ್ಯಕ್ಕೆ ಮಾತನಾಡುವುದಿಲ್ಲ. ಮೂರು ವರ್ಷ ಕಾಮಗಾರಿ ಹೇಗೆ ನಡೆಯುತ್ತದೆ ಎಂಬುದನ್ನು ಗಮನಿಸಿ, ಆ ನಂತರ ಮಾತನಾಡುತ್ತೇನೆ ಎಂದು ಅವರು ಪ್ರತಿಕ್ರಿಯಿಸಿದರು.
ಮಾಜಿ ಶಾಸಕ ಕೆ.ರಾಜು, ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಬ್ಯಾಟಪ್ಪ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಯು.ನರಸಿಂಹಯ್ಯ, ಗ್ರಾ.ಪಂ ಉಪಾಧ್ಯಕ್ಷ ಕೆಂಪಣ್ಣ, ಮುಖಂಡರಾದ ಶೇಷಪ್ಪ, ಬಿ.ಉಮೇಶ್, ರಾಜಶೇಖರ್, ರಮೇಶ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.