ADVERTISEMENT

ಹೈನೋದ್ಯಮಕ್ಕೆ ಆದ್ಯತೆ ನೀಡಲು ಸಲಹೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2011, 18:30 IST
Last Updated 17 ಫೆಬ್ರುವರಿ 2011, 18:30 IST

ಚನ್ನಪಟ್ಟಣ: ಹೈನು ಉದ್ಯಮ ರೈತರ ಬದುಕನ್ನು ಆರ್ಥಿಕವಾಗಿ ಸದೃಢಗೊಳಿಸುವುದರಿಂದ ಕೃಷಿಕರು ಇತ್ತ ಕಡೆಯೂ ಗಮನ ಹರಿಸಬೇಕು ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಇಲ್ಲಿ ಸಲಹೆ ನೀಡಿದರು.

ಚರ್ಚ್ ರಸ್ತೆಯಲ್ಲಿ ನೂತನವಾಗಿ ಆರಂಭಿಸಿರುವ ನಂದಿನಿ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ ಉದ್ಘಾಟಿಸಿ ನಂತರ ಖಾಸಗಿ ಬಸ್ ನಿಲ್ದಾಣದಲ್ಲಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸಾಲ ವಿತರಣೆ ಸಮಾರಂಭದಲ್ಲಿ ಗುರುವಾರ ಅವರು ಮಾತನಾಡಿದರು.

ಕೃಷಿ ಚಟುವಟಿಕೆಗೆ ಪ್ರಮುಖವಾಗಿ ಬೇಕಾದ ವಿದ್ಯುತ್ ಅನ್ನು ಪಡೆಯುವಲ್ಲಿ ರೈತರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.ರೈತರಿಗೆ ಸರ್ಕಾರದಿಂದ ಹೆಚ್ಚು ಸವಲತ್ತುಗಳು ದೊರಕುತ್ತಿಲ್ಲ.ಇಂತಹ ಸಂಕಷ್ಟವನ್ನು ಸಮರ್ಥವಾಗಿ ಎದುರಿಸಲು ರೈತರು ಉಪಕಸುಬುಗಳಲ್ಲಿ ತೊಡಗಬೇಕಾಗಿರುವುದು ಅನಿವಾರ್ಯ ಎಂದು ಅವರು ಹೇಳಿದರು.

ಎಚ್.ಡಿ.ಕುಮಾರಸ್ವಾಮಿ ಅವರಿಗೆ ರೈತರ ಬಗ್ಗೆ ಕಾಳಜಿ ಇರುವುದರಿಂದಲೇ ತಮ್ಮ ಅಧಿಕಾರಾವಧಿಯಲ್ಲಿ ರೈತರ ಸಾಲವನ್ನು ಮನ್ನಾ ಮಾಡಿದರು. ಎಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಗೌರವವನ್ನು ಇಟ್ಟು ಜಿ.ಪಂ. ಹಾಗೂ ತಾ.ಪಂ.ಚುನಾವಣೆಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಿದ ಮತದಾರರಿಗೆ ಈ ಸಂದರ್ಭದಲ್ಲಿ ಅವರು ಕೃತಜ್ಞತೆ ಸಲ್ಲಿಸಿದರು.

ಬಮೂಲ್ ಅಧ್ಯಕ್ಷ ಸಿ.ಮಂಜುನಾಥ್ ಮಾತನಾಡಿ, ರೈತರು ಯಾವ ಉದ್ದೇಶಕ್ಕೆ ಸಾಲ ಪಡೆದಿರುತ್ತಾರೋ ಅದೇ ಉದ್ದೇಶಕ್ಕೆ ವಿನಿಯೋಗಿಸಿದರೇ  ಖಂಡಿತವಾಗಿ ಆದಾಯ ಬರುತ್ತದೆ.ಇದರಿಂದ ಪಡೆದ ಸಾಲವನ್ನು ಮರುಪಾವತಿಸಲು ಅನುಕೂಲವಾಗುತ್ತದೆ ಎಂದರು.

ಬಮೂಲ್‌ನಿಂದ ಹಾಲು ಉತ್ಪಾದಕರಿಗೆ ಪ್ರಾಮಾಣಿಕವಾಗಿ ಲಾಭ ಹಂಚಲಾಗುತ್ತಿದೆ.ಯಾವುದೇ ಲಾಭದ ನಿರೀಕ್ಷೆಯಿಲ್ಲದೆ ಉತ್ಪಾದಕರಿಗೆ 21ರೂಪಾಯಿಯನ್ನು ಲೀಟರ್‌ಗೆ ನೀಡುತ್ತಿರುವುದು ರಾಜ್ಯದಲ್ಲಿ ಬಮೂಲ್ ಮಾಡಿರುವ ಪ್ರಮುಖ ಸಾಧನೆ ಎಂದು ಅವರು ತಿಳಿಸಿದರು.

ಬಮೂಲ್ ಹಾಗೂ ನಂದಿನಿ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್‌ನ ಅಧ್ಯಕ್ಷ ಎಸ್. ಲಿಂಗೇಶ್‌ಕುಮಾರ್ ಮಾತನಾಡಿ,  ಬ್ಯಾಂಕ್ ಈಗಾಗಲೇ 425 ಷೇರುದಾರರನ್ನು ಹೊಂದಿದ್ದು, 25ಲಕ್ಷ ರೂಪಾಯಿ ಠೇವಣಿ ಸಂಗ್ರಹಿಸಿದೆ. ಎಂ.ಪಿ.ಸಿ.ಎಸ್‌ಗಳ ವಿಶ್ವಾಸದ ಮೇಲೆ ಹಾಲು ಉತ್ಪಾದಕರಿಗೆ ಹಸು ಖರೀದಿಸಲು ಯಾವುದೇ ಆಧಾರವನ್ನು ಪಡೆಯದೆ ಸಾಲ ವಿತರಿಸುತ್ತಿದೆ ಎಂದು ತಿಳಿಸಿದರು.

ಹಾಲು ಉತ್ಪಾದಕರ ಪ್ರತಿಭಾವಂತ ಮಕ್ಕಳನ್ನು ಪ್ರೋತ್ಸಾಹಿಸುವ ಸಲುವಾಗಿ 7 ಲಕ್ಷ ರೂಪಾಯಿಯನ್ನು 164 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರದ ರೂಪದಲ್ಲಿ ವಿತರಿಸಲಾಗಿದೆ ಎಂದು ತಿಳಿಸಿದರು.ನಗರಸಭಾಧ್ಯಕ್ಷೆ ರೇಷ್ಮಾಭಾನು, ಸದಸ್ಯ ಎಂ.ರಾಜು, ಬಿ.ಬಿ.ಆರ್. ಮತ್ತು ಆರ್.ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಬಿ.ರಾಮಕೃಷ್ಣಯ್ಯ, ಉಪಾಧ್ಯಕ್ಷ ಎನ್.ಬಿ.ರವೀಶ್, ತಾ.ಪಂ. ಸದಸ್ಯ ಬಿ.ಪಿ.ಭಾನುಪ್ರಸಾದ್, ಚಿತ್ರಾ ಲಿಂಗೇಶ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

ಸಹಕಾರ ರತ್ನ ಪುರಸ್ಕೃತ ಸಿ.ಮಂಜುನಾಥ್, ಬಮೂಲ್‌ನ ಚನ್ನಪಟ್ಟಣ ಶಿಬಿರದ ಉಪ ವ್ಯವಸ್ಥಾಪಕ ಎಚ್.ಕೆ.ರಂಗಸ್ವಾಮಿ, ಡಾ. ಪಿ.ಆರ್. ಮಂಜೇಶ್, ಪಿ.ಎಚ್.ಡಿ ಪುರಸ್ಕೃತ ಡಾ.ಮಲ್ಲೇಶ್ ದ್ಯಾವಾಪಟ್ಣ ಅವರನ್ನು ಸನ್ಮಾನಿಸಲಾಯಿತು. ಪುಟ್ಟರಾಜು ಸ್ವಾಗತಿಸಿ, ಸಿ.ರಾಜಶೇಖರ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.