
ಕನಕಪುರ: ‘ಪಟ್ಟಣದ ಪೇಟೆಕೆರೆಯನ್ನು ಉಳಿಸಿ ಅಭಿವೃದ್ಧಿಗೊಳಿಸುವಂತೆ ಹೈಕೋರ್ಟ್ ಆದೇಶ ಇದ್ದರೂ ಅದನ್ನು ಉಲ್ಲಂಘನೆ ಮಾಡಿ ನಿರ್ಮಿಸುತ್ತಿರುವ ಅಕ್ರಮವಾಗಿ ಕಟ್ಟಡ ರಚನೆ ತಡೆಯುವಲ್ಲಿ ಸ್ಥಳೀಯ ಆಡಳಿತ ಮೌನ ವಹಿಸಿದೆ. ಇದು ತಾಲ್ಲೂಕಿನಲ್ಲಿ ಆಡಳಿತ ಯಂತ್ರ ಕುಸಿದಿದೆ ಎಂಬುದಕ್ಕೆ ಸ್ಪಷ್ಟ ನಿರ್ದಶನವಾಗಿದೆ’ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಎ.ಎ.ಪಿ. ಅಭ್ಯರ್ಥಿ ರವಿಕೃಷ್ಣಾ ರೆಡ್ಡಿ ಆರೋಪಿಸಿದರು.
 
 ಇಲ್ಲಿನ ಪೇಟೆಕೆರೆಯಂಗಳ ಮತ್ತು ಈ ಪ್ರದೇಶದಲ್ಲಿ ನಿರ್ಮಾಣ ಮಾಡುತ್ತಿರುವ ಕಟ್ಟಡಗಳು ಅಕ್ರಮ ಎಂಬ ಆರೋಪದ ಹಿನ್ನೆಲೆಯಲ್ಲಿ ಸ್ಥಳ ವೀಕ್ಷಣೆ ಮಾಡಿದ ನಂತರ ಅವರು ಎ.ಪಿ.ಎಂ.ಸಿ ಆವರಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
 
 ‘ಪಟ್ಟಣದ ಹೃದಯಭಾಗದಲ್ಲಿ ಸರ್ವೇ ನಂಬರ್ 505ರಲ್ಲಿರುವ ಪೇಟೆಕೆರೆಯನ್ನು ಮುಚ್ಚದಂತೆ ಮತ್ತು ಮತ್ತು ಇದನ್ನು ಪುನರುಜ್ಜೀವನಗೊಳಿಸುವಂತೆ ಸಾರ್ವಜನಿಕರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಅನ್ವಯ ಹೈಕೋರ್ಟ್ ಕೆರೆಯನ್ನು ಉಳಿಸಿ ಪುನರುಜ್ಜೀವನಗೊಳಿಸುವಂತೆ ಆದೇಶ ನೀಡಿದೆ. ಆದರೆ ಕೆಲವು ಪ್ರಭಾವಿ ವ್ಯಕ್ತಿಗಳು ಇದನ್ನು ಉಲ್ಲಂಘಿಸಿ ಕಾನೂನು ಬಾಹಿರವಾಗಿ ಕೆರೆಯಂಗಳದಲ್ಲಿ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ’ ಆದರೆ ಇದನ್ನು ತಾಲ್ಲೂಕು ಆಡಳಿತ ಪ್ರಶ್ನಿಸುತ್ತಿಲ್ಲ ಎಂದು ಅವರು ಆರೋಪಿಸಿದರು.
 
 ‘ಯಾವುದೆ ಕಟ್ಟಡ ನಿರ್ಮಾಣಕ್ಕೂ ಮೊದಲು ಸಂಬಂಧಪಟ್ಟ ಇಲಾಖೆಯಿಂದ ಅನುಮೋದನೆ ಮತ್ತು ಪರವಾನಗಿ ಪಡೆಯಬೇಕು. ಆದರೆ ಇಲ್ಲಿ ನಿರ್ಮಾಣಗೊಳ್ಳುತ್ತಿರುವ ಕಟ್ಟಡಗಳಿಗೆ ಯಾವುದೇ ರೀತಿಯ ಕಾನೂನು ನಿಯಮ ಪಾಲನೆಯಾಗಿಲ್ಲ. ಆದರೂ ತಾಲ್ಲೂಕು ಮತ್ತು ಜಿಲ್ಲಾಡಳಿತವು ಇವುಗಳ ನಿರ್ಮಾಣ ಕಾರ್ಯದ ವಿರುದ್ಧ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತಾಳಿದೆ. ಅಕ್ರಮ ಚಟುವಟಿಕೆ ವಿರುದ್ಧ ಹೋರಾಟ ಮಾಡುವವರನ್ನು ದಮನ ಮಾಡಲು ಹೊರಟಿದೆ. ಇದು ಸಂವಿಧಾನದ ಕಗ್ಗೊಲೆಯಾಗಿದೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
 
 ‘ನಮ್ಮ ನಿಸರ್ಗವನ್ನು ಉಳಿಸಲು ಈ ಹೋರಾಟದ ಅನಿವಾರ್ಯವಿದೆ. ಕೆರೆಯನ್ನು ಉಳಿಸುವಲ್ಲಿ ಪೇಟೆಕೆರೆ ರಕ್ಷಣಾ ಹೋರಾಟ ಸಮಿತಿ ಮತ್ತು ವರ್ತಕರ ಸಂಘವು ಮುಂಚೂಣಿಯಲ್ಲಿದೆ. ಇದಕ್ಕಾಗಿ ತಾಲ್ಲೂಕಿನ ಪ್ರತಿಯೊಬ್ಬ ನಾಗರಿಕರೂ ಕೈ ಜೋಡಿಸಬೇಕು. ಸಮಿತಿಯ ಸಂಪತ್‌ಕುಮಾರ್ ಮತ್ತು ಗೋವಿಂದಪ್ಪ ಜೀವದ ಹಂಗು ತೊರೆದು ಹೋರಾಟ ನಡೆಸುತ್ತಿದ್ದು ಅವರ ಈ ಹೋರಾಟಗಳಿಗೆ ಸಾಥ್ ನೀಡಬೇಕು’ ಎಂದು ಅವರು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.
 
 ಪೇಟೆಕೆರೆ ರಕ್ಷಣಾ ಹೋರಾಟ ಸಮಿತಿಯ ಮುಖಂಡರಾದ ಬೂದಗುಪ್ಪೆ ಸಂಪತ್ ಕುಮಾರ್ ಮತ್ತು ಗೋವಿಂದಪ್ಪ ಮಾತನಾಡಿ, ‘ಎಪಿಎಂಸಿ ಆಸ್ತಿ ಉಳಿಸಿಕೊಳ್ಳಲು ಕಾನೂನಾತ್ಮಕ ಹೋರಾಟ ನಡೆಸುತ್ತಿದ್ದೇವೆ. ನ್ಯಾಯಾಲಯದಲ್ಲಿ ತಡೆಯಾಜ್ಞೆ ದೊರೆತಿದೆ. ಆದರೂ ತಾಲ್ಲೂಕು ಆಡಳಿತ ಮತ್ತು ಪುರಸಭೆಯು ತಡೆಯಾಜ್ಞೆ ಧಿಕ್ಕರಿಸಿ ಅಕ್ರಮ ಕಟ್ಟಡಕ್ಕೆ ಸಹಕಾರ ನೀಡುತ್ತಿವೆ’ ಎಂದು ಅವರು ಆರೋಪಿಸಿದರು.
 
 ‘ನ್ಯಾಯ ಕೇಳಲು ಹೋದರೆ ನಮ್ಮ ಬಟ್ಟೆಯನ್ನೇ ಬಿಚ್ಚಿಸುವುದಾಗಿ ಪೋಲಿಸ್ ಅಧಿಕಾರಿ ಹೇಮಂತ್ ಕುಮಾರ್ ನಮಗೆ ಬೆದರಿಕೆ ಹಾಕುತ್ತಾರೆ. ತಾಲ್ಲೂಕಿನ ಜನತೆ ಈ ದೌರ್ಜನ್ಯವನ್ನು ಖಂಡಿಸಿ ಪರಿಸರದ ಉಳಿವಿನ ಹೋರಾಟಕ್ಕೆ ಬೆಂಬಲಿಸಬೇಕು’ ಎಂದು ಅವರು ಮನವಿ ಮಾಡಿದರು.
 
 ಕರ್ನಾಟಕ ಚಳವಳಿ ಹೋರಾಟ ಸಮಿತಿ ಅಧ್ಯಕ್ಷ ಕೆ.ಮಧುಗೌಡ ಇತರರು ಮಾತನಾಡಿದರು. ಮುಖಂಡರಾದ ರೈಲ್ವೆ ಹೋರಾಟ ಸಮಿತಿ ನಾಗರಾಜು, ಮಂಡಿ ವರ್ತಕ ವೆಂಕಟರಮಣಯ್ಯ, ರವೀಗೌಡ, ದೇವೇಗೌಡ, ವಸಂತರಾಜು ಅರಸ್ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.