ರಾಮನಗರ: ‘ಸಮಾಜದಲ್ಲಿನ ಅವ್ಯವಸ್ಥೆಗಳನ್ನು ಎತ್ತಿಹಿಡಿದು ಅವುಗಳಿಗೆ ಪರಿಹಾರ ಮಾರ್ಗ ಸೂಚಿಸುವ ಸಾಹಿತ್ಯ ರಚನೆಗೆ ಯುವ ಸಾಹಿತಿಗಳು ಮುಂದಾಗಬೇಕು’ ಎಂದು ಸಂಗೀತ ವಿದ್ವಾನ್ ಶಿವಾಜಿರಾವ್ ತಿಳಿಸಿದರು.
ಜಿಲ್ಲಾ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಜಂಟಿಯಾಗಿ ನಗರದ ರಾಮದುರ್ಗ ಪ್ರೌಢಶಾಲೆಯಲ್ಲಿ ಏರ್ಪಡಿಸಿದ ಶಿವರಾತ್ರಿ ಕವಿಗೋಷ್ಠಿ ಮತ್ತು ಗೀತಗಾಯನ ಕಾರ್ಯಕ್ರಮದ ಅಧ್ಯಕ್ಷತೆ ಅವರು ಮಾತನಾಡಿದರು.
‘ಒಂದು ವಸ್ತು ಅಥವಾ ಪ್ರಕೃತಿಯ ವರ್ಣನೆ ಮಾಡುವ ಕಾವ್ಯ, ಸಾಹಿತ್ಯದ ಜೊತಗೆ ಸಮಾಜದ ಸಮಸ್ಯೆಗಳನ್ನು ಬೆಳಕಿಗೆ ತರುವಲ್ಲಿ ಪ್ರಯತ್ನಿಸಬೇಕು ಎಂದರು. ಸಾಹಿತ್ಯ ಪರಿಷತ್ತು ಇಂತಹ ಕಾರ್ಯಕ್ರಮಗಳನ್ನು ಶಾಲಾ ಕಾಲೇಜುಗಳಲ್ಲಿಯೂ ಹಮ್ಮಿಕೊಳ್ಳಬೇಕು’ ಎಂದು ಅವರು ಸಲಹೆ ನೀಡಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಟಿ. ನಾಗೇಶ್ ಮಾತನಾಡಿ, ‘ಶಾಲೆಗಳಲ್ಲಿ ಜಾನಪದ ಸಾಹಿತ್ಯವನ್ನು ಪರಿಚಯಿಸಬೇಕು. ಮಕ್ಕಳಲ್ಲಿ ಸಂಗೀತಾಭಿರುಚಿಯನ್ನು ಬೆಳೆಸಬೇಕು ಈ ನಿಟ್ಟಿನಲ್ಲಿ ಶಿಕ್ಷಕರು ಮತ್ತು ಪೋಷಕರ ನಡುವೆ ಪರಸ್ಪರ ಸಹಕಾರ ಮುಖ್ಯ’ ಎಂದರು.
‘ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಸಾಹಿತ್ಯ ಪರಿಷತ್ತು ಕಾರ್ಯಕ್ರಮಗಳನ್ನು ಹೆಚ್ಚಾಗಿ ಏರ್ಪಡಿಸುವ ಮೂಲಕ ನಾಡಿನ ಜಾನಪದ ಸಮಗ್ರ ಸಾಹಿತ್ಯ ಜ್ಞಾನದ ಬಗ್ಗೆ ಅರಿವು ಮೂಡಿಸುತ್ತಿದೆ’ ಎಂದು ಅವರು ಹೇಳಿದರು.
ಶಾಲೆಯ ಮುಖ್ಯ ಶಿಕ್ಷಕ ಕೃಷ್ಣಪ್ಪ, ನಗರಸಭೆ ಮಾಜಿ ಸದಸ್ಯರಾದ ದೊಡ್ಡಿ ಸೂರಿ, ಚಂದ್ರು ಮಾತನಾಡಿದರು.
ನಗರ ಸಭೆ ಸದಸ್ಯ ಡಿ.ಕೆ.ಶಿವಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ರಾಮನಗರ ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಟಿ.ದಿನೇಶ್, ಕಾರ್ಯದರ್ಶಿ ಜಿ.ಟಿ.ಕೃಷ್ಣಪ್ಪ, ಖಜಾಂಚಿ ರಾಜೇಶ್, ಸಮಿತಿ ಸದಸ್ಯ ಡೈರಿ ವೆಂಕಟೇಶ್, ಗಿರೀಶ್, ಅನಂತ್, ಶಾಲೆ ಶಿಕ್ಷಕರು ಹಾಗೂ ಸಿಬ್ಬಂದಿ ಹಾಜರಿದ್ದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಾಂಸ್ಕೃತಿಕ ಘಟಕದ ಸಂಚಾಲಕ ಚೌ.ಪು.ಸ್ವಾಮಿ, ವಿನಯ್ ಕುಮಾರ್ ಗೀತಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಕವಿಗಳಾದ ಶೈಲಜಾ ಶ್ರೀನಿವಾಸ್, ಕೆ.ಶಿವಹೊಂಬಯ್ಯ, ನಂ. ಶಿವಲಿಂಗಯ್ಯ, ಮಂಜುಳಾ ಪ್ರಕಾಶ್, ಚನ್ನಮಾನಹಳ್ಳಿ ಮಲ್ಲೇಶ್ ಮುಂತಾದವರು ಗೀತಗಾಯನ ನಡೆಸಿಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.