ADVERTISEMENT

‘ಸೊರಗುತ್ತಿರುವ ಸದಭಿರುಚಿಯ ಹವ್ಯಾಸ’

ರಾಮನಗರ ತಾಲ್ಲೂಕು ಗಮಕ ಕಲಾ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2014, 10:34 IST
Last Updated 3 ಮಾರ್ಚ್ 2014, 10:34 IST

ರಾಮನಗರ: ‘ಆಧುನಿಕತೆಯ ಭರಾಟೆಯಲ್ಲಿ ಸದಭಿರುಚಿಯ ಹವ್ಯಾಸ­ಗಳು ಸೊರಗುತ್ತಿವೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ­ನಿರ್ದೇಶಕ ಪ್ರಹ್ಲಾದ್‌ಗೌಡ ವಿಷಾದ ವ್ಯಕ್ತಪಡಿಸಿದರು.

ತಾಲ್ಲೂಕಿನ ಅವ್ವೇರಹಳ್ಳಿ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ನಡೆದ ತಾಲ್ಲೂಕು ಗಮಕ ಕಲಾ ಸಮ್ಮೇಳನ­ವನ್ನು ಉದ್ಘಾಟಿಸಿ ಅವರು ಮಾತನಾಡಿ­ದರು. ‘ಕನ್ನಡದ ಶ್ರೇಷ್ಠ ಕೃತಿಗಳ ವಾಚನ, ವ್ಯಾಖ್ಯಾನವನ್ನು ಆಲಿಸುವವರ ಸಂಖ್ಯೆ ಹೆಚ್ಚಾಗಬೇಕು.

ಪಠ್ಯಕ್ರಮಗಳಲ್ಲಿ ಇರುವ ಹಳಗನ್ನಡದ ಷಟ್ಪದಿಗಳನ್ನು ವಿದ್ಯಾರ್ಥಿ­ಗಳಿಗೆ ಅರ್ಥವಾಗುವ ರೀತಿಯಲ್ಲಿ ಶಿಕ್ಷಕರು ಬೋಧಿಸಬೇಕು’ ಎಂದು ತಿಳಿಸಿದರು.

ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ವಿ.ಎಸ್. ನಾರಾ­ಯಣ ಮಾತನಾಡಿ, ‘ಗಮಕ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಇಂದಿನ ಜನಾಂಗಕ್ಕೆ ಪರಿ­ಚಯಿಸ­ಬೇಕಾಗಿದೆ. ಪುರಾತನ ಕಲೆಯಾದ ಗಮಕ ಸಾಹಿತ್ಯ ಇಂದಿನ ಜನಾಂಗಕ್ಕೆ ಅಗತ್ಯವಿದೆ. ಸಂಸ್ಕೃತಿ­ಯನ್ನು ಉಳಿಸುವ ನಿಟ್ಟಿನಲ್ಲಿ ಗಮಕಿಗಳು ನಿಸ್ವಾ­ರ್ಥತೆ­ಯಿಂದ ಕೆಲಸ ಮಾಡುತ್ತಿರುವುದು ಶ್ಲಾಘ­­ನೀಯ ಎಂದು ಅವರು ಹೇಳಿದರು.

ಗಮಕ ಕಲಾ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷೆ ಎಸ್. ಸುಮಂಗಳಾ ಮಾತನಾಡಿ, ‘ಹೆಚ್ಚು ಪ್ರೋತ್ಸಾ­ಹವಿಲ್ಲದೆ ಸೊರಗುತ್ತಿರುವ ಕಲೆಗಳಲ್ಲಿ ಗಮಕವೂ ಒಂದಾಗಿದೆ. ಭವಿಷ್ಯದ ಪ್ರಜೆಗಳಾಗುವ ವಿದ್ಯಾ­ರ್ಥಿಗಳು ಕೇವಲ ಮನರಂಜನೆಗೆ ಆದ್ಯತೆ ನೀಡದೆ ಜ್ಞಾನಾಭಿವೃದ್ಧಿಯ ಕಡೆಗೂ ಗಮನ ನೀಡಬೇಕು’ ಎಂದು ಅವರು ತಿಳಿಸಿದರು.

ಸಾಹಿತಿ ಇಂದಿರಾ ಶರಣ್ ಮಾತ­ನಾಡಿ, ‘ಪ್ರಾಚೀನ ಕಾವ್ಯವನ್ನು ಲಯ­ಬದ್ಧ­­ವಾಗಿ ಓದುವ ಕಲೆಯೆ ಗಮಕ ಕಲೆಯಾಗಿದೆ. ಪುರಾಣಗಳನ್ನು ವಾಚನ ಮಾಡುವುದು ಮಾನವೀಯತೆಯ ಪ್ರತಿ­ಬಿಂಬವಾಗಿದೆ. ಹಿಂದೆ ಕೇವಲ ಪಂಡಿತರಿಗೆ ಮೀಸ­ಲಾಗಿದ್ದ ಧಾರ್ಮಿಕ ಪಠ್ಯದ ಗಮಕ ವಾಚನಗಳು ಇಂದು ಎಲ್ಲರ ಕೈಗೆಟುಕುತ್ತಿವೆ’ ಎಂದು ತಿಳಿಸಿದರು.

ಕನ್ನಡ ಕಾವ್ಯ ವೈಭವದಲ್ಲಿ ಪಂಪ, ರನ್ನ, ಷಡಕ್ಷರದೇವ, ಕುಮಾರವ್ಯಾಸ, ರಾಘವಾಂಕ, ರತ್ನಾಕರವರ್ಣಿ, ಕುಮಾರ ವಾಲ್ಮೀಕಿ ಅವರು ರಚಿ­ಸಿರುವ ಕಾವ್ಯ ಭಾಗಗಳ ವ್ಯಾಖ್ಯಾನವನ್ನು ತೆಕ್ಕೆರೆ ಸುಬ್ರಹ್ಮಣ್ಯಭಟ್ಟ, ಜಿ.ಎಸ್. ನಾರಾಯಣ, ರೇಣುಕಾ ರಾಮರಾವ್, ರತ್ನಮೂರ್ತಿ, ಹುಲಿಗೆರೆ ಸೋಮನಾಥ ಕವಿಯ ಸೋಮೇಶ್ವರ ಶತಕ, ಡಿ.ವಿ.ಜಿ ಅವರ ಮಂಕುತಿಮ್ಮನ ಕಗ್ಗಗಳ ಭಾಗ­ವನ್ನು ಹಾಗೂ ಗಮಕ ಕಲಾ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಎಲ್ಲೇಗೌಡ ಬೆಸಗರಹಳ್ಳಿ ವ್ಯಾಖ್ಯಾನಿಸಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯೆ ಸುಜಾತ ಶಿವಲಿಂಗಪ್ಪ, ಮುಖ್ಯ ಶಿಕ್ಷಕಿ ಜಿ.ಎಸ್. ಸವಿತಾ ಕುಮಾರಿ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಪಿ. ಮಹಾಲಿಂಗಯ್ಯ, ಉರ್ದು ಸರ್ಕಾರಿ ಪ್ರೌಢ_ಶಾಲೆಯ ಮುಖ್ಯಶಿಕ್ಷಕ ಸಿದ್ದರಾಜು, ಗುತ್ತಿಗೆದಾರ ಕೆ.ತಮ್ಮಣ್ಣ, ವೇಣು­ಗೋಪಾಲ್, ಎಸ್‌ಡಿಎಂಸಿ ಅಧ್ಯಕ್ಷ ರೇಣುಕಪ್ಪ, ಗಮಕ ಕಲಾ ಪರಿಷತ್ತಿನ ಪದಾಧಿಕಾರಿಗಳಾದ ನಾಗಮಣಿ, ಕೆ. ಶಿವಹೊಂಬಯ್ಯ, ಎಚ್.ಕೆ. ಶೈಲಾ, ಮಂಜುಳಾ ಪ್ರಕಾಶ್, ಶಶಿಕುಮಾರ್  ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.