ADVERTISEMENT

10ಕ್ಕೂ ಹೆಚ್ಚು ಸೀಮೆ ಹಸು ಸಾವು

ಚಕ್ಕರೆ ಗ್ರಾಮದಲ್ಲಿ ಕಾಲುಬಾಯಿ ಜ್ವರದ ಭೀತಿ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2013, 10:36 IST
Last Updated 19 ಸೆಪ್ಟೆಂಬರ್ 2013, 10:36 IST

ಚನ್ನಪಟ್ಟಣ:- ತಾಲ್ಲೂಕಿನ ಚಕ್ಕರೆ ಗ್ರಾಮದಲ್ಲಿ ಕಾಲುಬಾಯಿ ಜ್ವರದಿಂದಾಗಿ ಕಳೆದ ಒಂದು ವಾರದಲ್ಲಿ 10ಕ್ಕೂ ಹೆಚ್ಚು ಸೀಮೆ ಹಸುಗಳು ಮೃತಪಟ್ಟಿರುವ ಘಟನೆ ನಡೆದಿದೆ.

ಗ್ರಾಮದ ಮರಿಗೌಡ, ವೀರಭದ್ರ, ಪುಟ್ಟಸ್ವಾಮಿ, ಅಂಕೂಗೌಡ, ಮಾಧು, ಜಯರಾಮು, ಮೋಟೇ ಗೌಡ, ಮಲ್ಲೇಶ್ ಮುಂತಾದ ಹಲವು ರೈತರ ಹಸು ಕಾಲುಬಾಯಿ ಜ್ವರಕ್ಕೆ ತುತ್ತಾಗಿರುವುದು ಗ್ರಾಮದ  ರೈತರಲ್ಲಿ ಆತಂಕ ಹುಟ್ಟಿಸಿದೆ.

‘ಗ್ರಾಮದ ಸುಮಾರು 60ಕ್ಕೂ ಹೆಚ್ಚು ಸೀಮೆಹಸುಗಳಿಗೆ ಕಾಲುಬಾಯಿ ಜ್ವರ ತಗುಲಿದೆ ಎಂದು ಹೇಳಲಾಗಿದ್ದು, ಈ ಬಗ್ಗೆ ಪಶುಸಂಗೋಪನಾ ಇಲಾಖೆಗೆ ವಿಷಯ ತಿಳಿಸಿದ್ದರೂ ಯಾವುದೇ ಪ್ರಯೋ ಜನವಾಗಿಲ್ಲ. ನೆಪ ಮಾತ್ರಕ್ಕೆ ಬಂದು ಹೋಗುತ್ತಿದ್ದಾರೆ. ಜ್ವರಕ್ಕೆ ಸೂಕ್ತ ಔಷಧ ಹಾಗೂ ಚಿಕಿತ್ಸೆ ನೀಡುವ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಗ್ರಾಮದ ರೈತ  ಜಯರಾಮು ಆರೋಪಿಸಿದ್ದಾರೆ.

ಭೇಟಿ: ತಾಲ್ಲೂಕಿನ ಚಕ್ಕರೆ ಗ್ರಾಮಕ್ಕೆ ಬುಧವಾರ ತಾಲ್ಲೂಕು ಪಶು ವೈದ್ಯಾಧಿಕಾರಿ ಡಾ.ದ್ವಾರಕನಾಥ್ ಭೇಟಿ ನೀಡಿ ಕಾಲುಬಾಯಿ ಜ್ವರದಿಂದ ಬಳಲುತ್ತಿ ರುವ ಸೀಮೆ ಹಸುಗಳ ಪರಿಶೀಲನೆ ನಡೆಸಿದರು.

ತಾಲೂಕಿನ ಎಚ್.ಬ್ಯಾಡರಹಳ್ಳಿ, ತಿಮ್ಮಸಂದ್ರ, ತಗಚಗೆರೆ, ಹೊಡಿಕೆ ಹೊಸ ಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಜಾನುವಾರುಗಳು ಮೃತಪಡುತ್ತಿರು ವುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಇದರಿಂದಾಗಿ ತಾಲ್ಲೂಕಿನಲ್ಲಿ ಪ್ರಮುಖ ವಾಣಿಜ್ಯವಾಗಿರುವ ಹಾಲು ಉತ್ಪಾದಕ ರೈತರು ಸಹಜವಾಗಿಯೇ ಆತಂಕ ಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.