ADVERTISEMENT

ನಗರಾಭಿವೃದ್ಧಿಗೆ ₹10 ಕೋಟಿ ಬಿಡುಗಡೆ: ಜೆಡಿಎಸ್, ಬಿಜೆಪಿ ಕಾರ್ಯಕರ್ತರ ಮಧ್ಯೆ ವಾದ

​ಪ್ರಜಾವಾಣಿ ವಾರ್ತೆ
Published 22 ಜನವರಿ 2023, 5:13 IST
Last Updated 22 ಜನವರಿ 2023, 5:13 IST
ಯೋಗೇಶ್ವರ್
ಯೋಗೇಶ್ವರ್   

ಚನ್ನಪಟ್ಟಣ: ಚನ್ನಪಟ್ಟಣ ನಗರಸಭೆ ಪ್ರದೇಶದ ರಸ್ತೆ ಅಭಿವೃದ್ಧಿ ಮತ್ತು ಚರಂಡಿ ಕಾಮಗಾರಿ ಅಭಿವೃದ್ಧಿಗೆ ನಗರಾಭಿವೃದ್ಧಿ ಇಲಾಖೆಯು ₹10 ಕೋಟಿ ಅನುದಾನ ಬಿಡುಗಡೆ ಮಾಡಿದೆ.

ಇಲಾಖೆಯ ವತಿಯಿಂದ ₹10 ಕೋಟಿ ಎಸ್.ಎಫ್.ಸಿ. ವಿಶೇಷ ಅನುದಾನವನ್ನು ಬಿಡುಗಡೆ ಮಾಡಲು ಆರ್ಥಿಕ ಇಲಾಖೆಯು ಸಮ್ಮತಿಸಿದೆ. ಸದರಿ ಅನುದಾನದಡಿ ಕೈಗೊಳ್ಳುವ ಅಭಿವೃದ್ಧಿ ಕಾಮಗಾರಿಗಳ ಕ್ರಿಯಾ ಯೋಜನೆಯನ್ನು ತಯಾರಿಸಿ ಕ್ರಮಕೈಗೊಳ್ಳುವಂತೆ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎನ್. ಮಂಗಳಗೌರಿ ಸೂಚಿಸಿದ್ದಾರೆ.

ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಅವರು, ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನಗರದ ಪ್ರದೇಶದ ಅಭಿವೃದ್ಧಿಗೆ ₹30 ಕೋಟಿ ಅನುದಾನ ನೀಡುವಂತೆ ಪತ್ರ ಬರೆದಿದ್ದೆ. ಅದರಲ್ಲಿ ಮೊದಲ ಹಂತದಲ್ಲಿ ₹10 ಕೋಟಿ ಬಿಡುಗಡೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಉಳಿದ ₹20 ಕೋಟಿ ಬಿಡುಗಡೆ ಮಾಡುತ್ತಾರೆ’ ಎಂದು ತಿಳಿಸಿದ್ದಾರೆ.

ADVERTISEMENT

ಆದರೆ ಈ ಬಗ್ಗೆ ಜೆಡಿಎಸ್ ವಲಯದಲ್ಲಿ ಚರ್ಚೆ ಆರಂಭವಾಗಿದ್ದು, ನಗರಾಭಿವೃದ್ಧಿ ಇಲಾಖೆ ವತಿಯಿಂದ ಬಿಡುಗಡೆಯಾಗಿರುವ ಅನುದಾನದ ಕ್ರೆಡಿಟ್ ಪಡೆಯಲು ಸಿ.ಪಿ. ಯೋಗೇಶ್ವರ್ ಪ್ರಯತ್ನಿಸುತ್ತಿದ್ದಾರೆ. ಇದರಲ್ಲಿ ಯೋಗೇಶ್ವರ್ ಪಾತ್ರ ಏನೂ ಇಲ್ಲ. ಚನ್ನಪಟ್ಟಣ ಜನತೆಯ ಮೆಚ್ಚುಗೆ ಗಿಟ್ಟಿಸಲು ಯೋಗೇಶ್ವರ್ ಈ ರೀತಿ ಗಿಮಿಕ್ ರಾಜಕಾರಣ ಮಾಡುತ್ತಿದ್ದಾರೆ ಎಂದು ಟೀಕಿಸಲು ಆರಂಭಿಸಿದ್ದಾರೆ.

ಈ ಹಿಂದೆ ಚನ್ನಪಟ್ಟಣ ಅಭಿವೃದ್ಧಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ₹50 ಕೋಟಿ ವಿಶೇಷ ಅನುದಾನ ನೀಡಿದ್ದರು. ಸಿ.ಪಿ. ಯೋಗೇಶ್ವರ್ ಇದನ್ನು ತಂದಿದ್ದು ನಾನು ಎಂದು ಹಲವು ಕಾಮಗಾರಿಗಳ ಶಂಕುಸ್ಥಾಪನೆಗೆ ಮುಂದಾಗಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಸ್ಥಳೀಯ ಶಾಸಕ ಎಚ್.ಡಿ. ಕುಮಾರಸ್ವಾಮಿ ಅವರನ್ನು ಕಾರ್ಯಕ್ರಮದಿಂದ ಹೊರಗಿಟ್ಟು ಶಂಕುಸ್ಥಾಪನೆ ಮಾಡಲಾಗುತ್ತಿದೆ ಎಂದು ಪ್ರತಿಭಟನೆ ನಡೆಸಿದ್ದರು. ಇದು ಜೆಡಿಎಸ್ ಬಿಜೆಪಿ ಕಾರ್ಯಕರ್ತರ ಜಟಾಪಟಿಗೆ ಕಾರಣವಾಗಿತ್ತು.

ಹಾಗೆಯೆ ವಸತಿ ಸಚಿವ ಸೋಮಣ್ಣ 3 ಸಾವಿರ ಮನೆಗಳನ್ನು ಬಿಡುಗಡೆ ಮಾಡಿದ್ದರು. ಇದು ನಮ್ಮ ಪ್ರಯತ್ನದ ಫಲ ಎಂದು ಎಚ್.ಡಿ. ಕುಮಾರಸ್ವಾಮಿ ಹಾಗೂ ಯೋಗೇಶ್ವರ್ ಜಿದ್ದಿಗೆ ಬಿದ್ದಿದ್ದರು. ಜೊತೆಗೆ ಎರಡೂ ಪಕ್ಷಗಳ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಮಾತಿನ ಸಮರ ನಡೆಸಿದ್ದರು.

ಈಗ ಸರ್ಕಾರದ ವತಿಯಿಂದ ₹10 ಕೋಟಿ ಬಿಡುಗಡೆಯಾಗಿರುವುದರಿಂದ ಹಾಗೆಯೆ ಇದು ನನ್ನ ಪತ್ರದ ಫಲ ಎಂದು ಯೋಗೇಶ್ವರ್ ಹೇಳಿಕೊಂಡಿರುವುದರಿಂದ ಅಂಥದ್ದೇ ಮಾತಿನ ಸಮರಕ್ಕೆ ವೇದಿಕೆಯಾಗುವಂತಹ ವಾತಾವರಣ ತಾಲ್ಲೂಕಿನಲ್ಲಿ ನಿರ್ಮಾಣವಾಗುತ್ತಿದೆ ಎಂದು ಪ್ರಜ್ಞಾವಂತರು ಅಭಿಪ್ರಾಯಪಟ್ಟಿದ್ದಾರೆ.

ಕುತೂಹಲ, ಬಿಸಿ ಚರ್ಚೆ

ಚನ್ನಪಟ್ಟಣ ಕ್ಷೇತ್ರದಲ್ಲಿ ಸರ್ಕಾರದ ವತಿಯಿಂದ ಬಿಡುಗಡೆಯಾಗುವ ಅನುದಾನದ ವಿಚಾರದಲ್ಲಿ ಬಿಸಿಬಿಸಿ ಚರ್ಚೆಗಳು ನಡೆಯುವುದು ಸಾಮಾನ್ಯ ಸಂಗತಿ. ಈ ಹಿಂದೆ ಸರ್ಕಾರದ ವತಿಯಿಂದ ಅನುದಾನ ಬಿಡುಗಡೆಯಾದ ವೇಳೆ ಶಾಸಕ ಎಚ್.ಡಿ. ಕುಮಾರಸ್ವಾಮಿ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಅನುದಾನದ ಕ್ರೆಡಿಟ್ ಪಡೆಯಲು ಮಾತಿನ ಸಮರ ನಡೆಸಿದ್ದೂ ಉಂಟು. ಈಗ ಮತ್ತೆ ಸರ್ಕಾರದ ವತಿಯಿಂದ ಬಿಡುಗಡೆಯಾಗಿರುವ ₹10 ಕೋಟಿ ವಿಚಾರ ಕುತೂಹಲಕ್ಕೆ ಕಾರಣವಾಗಿದೆ.

ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಸರ್ಕಾರದ ವತಿಯಿಂದ ಚನ್ನಪಟ್ಟಣ ನಗರ ಅಭಿವೃದ್ಧಿಗೆ ₹10 ಕೋಟಿ ಬಿಡುಗಡೆಯಾಗಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಚನ್ನಪಟ್ಟಣಕ್ಕೆ ಮಾತ್ರ ಮುಖ್ಯಮಂತ್ರಿ ಬೊಮ್ಮಾಯಿ ಅವರು ಅನುದಾನ ನೀಡಿರುವುದರಿಂದ ಇದು ಚುನಾವಣೆಯ ಉಡುಗೊರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.