ADVERTISEMENT

ನಗರಸಭೆ ಚುನಾವಣೆಗೆ 12 ನಾಮಪತ್ರ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2019, 14:09 IST
Last Updated 30 ಅಕ್ಟೋಬರ್ 2019, 14:09 IST
ನಗರದ 22ನೇ ವಾರ್ಡಿನಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ವಿ.ಚಂದ್ರು (ಸ್ಟುಡಿಯೋ ಚಂದ್ರು) ನಾಮ ಪತ್ರ ಸಲ್ಲಿಸುತ್ತಿರುವುದು
ನಗರದ 22ನೇ ವಾರ್ಡಿನಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ವಿ.ಚಂದ್ರು (ಸ್ಟುಡಿಯೋ ಚಂದ್ರು) ನಾಮ ಪತ್ರ ಸಲ್ಲಿಸುತ್ತಿರುವುದು   

ಕನಕಪುರ: ಇಲ್ಲಿನ ನಗರಸಭೆ ಚುನಾವಣೆಗೆ ಸ್ಪರ್ಧಿಸಲು ವಿವಿಧ ವಾರ್ಡ್‌ಗಳಿಂದ ಬಿಜೆಪಿ, ಜೆಡಿಎಸ್‌ ಮತ್ತು ಪಕ್ಷೇತರ ಅಭ್ಯರ್ಥಿಗಳು ಸೇರಿ ಒಟ್ಟು 12 ನಾಮಪತ್ರಗಳು ಬುಧವಾರ ಸಲ್ಲಿಕೆಯಾದವು.

ಬಿಜೆಪಿಯಿಂದ 7 ನಾಮಪತ್ರ, ಜೆಡಿಎಸ್‌ನಿಂದ 2 ನಾಮಪತ್ರ, ಪಕ್ಷೇತರ ಅಭ್ಯರ್ಥಿಗಳಿಂದ 3 ನಾಮಪತ್ರ ಸಲ್ಲಿಕೆಯಾಗಿವೆ. ಅಭ್ಯರ್ಥಿಗಳು ತಮ್ಮ ಪಕ್ಷದ ಮುಖಂಡರೊಂದಿಗೆ ತೆರಳಿ ತಮ್ಮ ವಾರ್ಡ್‌ಗೆ ಸಂಬಂಧಪಟ್ಟ ಚುನಾವಣಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.

ನಗರಸಭೆ ಚುನಾವಣೆಯಲ್ಲಿ ಸ್ಪರ್ಧಿಸುವವರು ನಾಮಪತ್ರ ಸಲ್ಲಿಕೆಗೆ ಗುರುವಾರ ಕಡೆಯ ದಿನವಾಗಿದ್ದು ಕಾಂಗ್ರೆಸ್‌ ಪಕ್ಷದಿಂದ ಯಾವೊಬ್ಬ ಅಭ್ಯರ್ಥಿಯೂ ಈವರೆಗೂ ನಾಮಪತ್ರ ಸಲ್ಲಿಸಿಲ್ಲ. ಪಕ್ಷದ ವರಿಷ್ಠರ ತೀರ್ಮಾನದಂತೆ ಈಗಾಗಲೆ ಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷಿಗಳು ಕಾಂಗ್ರೆಸ್‌ ಪಕ್ಷಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಅವರಲ್ಲಿ ಸೂಕ್ತವಾದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತೀರ್ಮಾನಿಸಿರುವ ವರಿಷ್ಠರು ಈಗಾಗಲೆ ಪಕ್ಷದ ಅಧಿಕೃತ ಅಭ್ಯರ್ಥಿಯನ್ನು ಅಂತಿಮಗೊಳಿಸಿದ್ದಾರೆ.

ಪಕ್ಷದಿಂದ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಪಕ್ಷದ ಬಿ.ಫಾರಂ ಸಹ ಕೊಟ್ಟಿದ್ದು 31 ವಾರ್ಡಿನ ಅಭ್ಯರ್ಥಿಗಳು ಗುರುವಾರ ವಾರ್ಡ್‌ನಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ.

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವಿದ್ದಾಗ ನಡೆದ ರಾಮನಗರ ಶಾಸಕ ಸ್ಥಾನದ ಉಪ ಚುನಾವಣೆ ಮತ್ತು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಮೈತ್ರಿ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಚುನಾವಣೆಯಲ್ಲಿ ಗೆಲವು ಸಾಧಿಸಿದ್ದವು.

ಅದೇ ರೀತಿ ಸ್ಥಳೀಯ ನಗರಸಭೆ ಚುನಾವಣೆಯಲ್ಲೂ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಎರಡೂ ಪಕ್ಷಗಳ ಸ್ಥಳೀಯ ನಾಯಕರನ್ನು ಕೇಳಿದಾಗ ‘ನಮ್ಮದೇನೂ ಇಲ್ಲ, ಎಲ್ಲವೂ ಪಕ್ಷದ ವರಿಷ್ಠರಿಗೆ ಬಿಟ್ಟಿದ್ದೇವೆ. ಅವರು ಏನು ಹೇಳುತ್ತಾರೋ ಅದರಂತೆ ನಡೆದುಕೊಳ್ಳಲು ನಾವು ಸಿದ್ದರಿದ್ದೇವೆ’ ಎಂದು ಹೇಳುತ್ತಾ ಬಂದಿದ್ದಾರೆ.

ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷದ ವರಿಷ್ಠರು ಈವರೆಗೆ ಹೊಂದಾಣಿಕೆ ಮಾಡಿಕೊಳ್ಳುವ ಅಥವಾ ಸ್ವತಂತ್ರವಾಗಿ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಯಾವುದೆ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ನಾಮ ಪತ್ರ ಸಲ್ಲಿಕೆಗೆ ಗುರುವಾರ ಕೊನೆಯ ದಿನವಾಗಿದ್ದು ಹೊಂದಾಣಿಕೆ ನಿರ್ಧಾರ ಗುರುವಾರ ಪ್ರಕಟವಾಗುವ ಸಾಧ್ಯತೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.