ಕನಕಪುರ (ರಾಮನಗರ): ತೀರಾ ಹಳೆಯದಾದ ಕಟ್ಟಡ, ಗುಣಮಟ್ಟದ ಕೊರತೆ, ಸಕಾಲಕ್ಕೆ ನಡೆಯದ ದುರಸ್ತಿ ಕಾರಣಕ್ಕೆ ತಾಲ್ಲೂಕಿನ 75 ಶಾಲೆಗಳ ಸುಮಾರು 144 ಕೊಠಡಿಗಳು ಶಿಥಿಲಾವಸ್ಥೆಯಲ್ಲಿವೆ. ಒಡೆದ ಹೆಂಚು, ಮಳೆಗೆ ಚಾವಣಿಯಿಂದ ಸೋರುವ ನೀರು, ಶಿಥಿಲ ಗೋಡೆ ಸೇರಿದಂತೆ ವಿವಿಧ ರೀತಿಯ ಸಮಸ್ಯೆಗಳಿದ್ದರೂ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇಂತಹ ಕೊಠಡಿಗಳಲ್ಲೇ ಕಳೆಯಬೇಕಿದೆ.
ಜಿಲ್ಲೆಯ ತಾಲ್ಲೂಕುಗಳ ಪೈಕಿ, ಕನಕಪುರದಲ್ಲೇ ಅತಿ ಹೆಚ್ಚು ಶಾಲೆಗಳಿವೆ. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಸೇರಿದಂತೆ ವಿವಿಧ ರೀತಿಯ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಯೂ ಇಲ್ಲಿ ಹೆಚ್ಚಾಗಿದ್ದು, ಗ್ರಾಮೀಣ ಭಾಗದ ಬಹುತೇಕರು ತಮ್ಮ ಮಕ್ಕಳನ್ನು ಇಲ್ಲಿರುವ ಸರ್ಕಾರಿ ಶಾಲೆಗಳಿಗೆ ಕಳಿಸುತ್ತಾರೆ.
8 ಶಾಲೆಗಳಿಗಷ್ಟೇ ದುರಸ್ತಿ ಭಾಗ್ಯ: ತಾಲ್ಲೂಕಿನಲ್ಲಿ 75 ಶಾಲೆಗಳು ದುರಸ್ತಿ ನಿರೀಕ್ಷೆಯಲ್ಲಿವೆ. ಈ ಪೈಕಿ 32 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳು, 26 ಕಿರಿಯ ಪ್ರಾಥಮಿಕ ಶಾಲೆಗಳು, 13 ಪ್ರೌಢಶಾಲೆಗಳು ಹಾಗೂ 4 ಉರ್ದು ಶಾಲೆಗಳು ಸಹ ಸೇರಿವೆ. ಈ ಪೈಕಿ, 8 ಶಾಲೆಗಳ ದುರಸ್ತಿಗೆ ಮಾತ್ರ ಶಿಕ್ಷಣ ಇಲಾಖೆ ಪ್ರಸಕ್ತ ಸಾಲಿನಲ್ಲಿ ಕ್ರಿಯಾಯೋಜನೆ ತಯಾರಿಸಿದೆ.
‘ದುರಸ್ತಿಗೆ ಸೇರಿಸಿರುವ ಶಾಲೆಗಳಲ್ಲಿರುವ 42 ಕೊಠಡಿಗಳ ಪೈಕಿ, 23 ಕೊಠಡಿಗಳ ದುರಸ್ತಿಗೆ ₹40.47 ಲಕ್ಷ ಮೊತ್ತದ ಕ್ರಿಯಾಯೋಜನೆ ತಯಾರಿಸಿ ಮೇಲಧಿಕಾರಿಗಳಿಗೆ ಕಳಿಸಲಾಗಿದೆ. ಈ ಶಾಲೆಗಳಲ್ಲಿ ಸುಮಾರು 675 ವಿದ್ಯಾರ್ಥಿಗಳು ಓದುತ್ತಿದ್ದಾರೆ’ ಎಂದು ತಾಲ್ಲೂಕು ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಸ್ವರೂಪ ‘ಪ್ರಜಾವಾಣಿ’ಗೆ ತಿಳಿಸಿದರು.
‘ಚಾವಣಿ ಕುಸಿತ, ಕಿಟಕಿ ಮತ್ತು ಬಾಗಿಲು ಮುರಿದಿರುವುದು, ಶೀಟು ಒಡೆದಿರುವುದು, ಹೆಂಚು ಬಿದ್ದಿರುವುದು, ಸೀಲಿಂಗ್ ಕಿತ್ತು ಹೋಗಿರುವುದು, ಗೋಡೆ ಬಿರುಕು, ಪೇಂಟಿಂಗ್, ಟೈಲ್ಸ್ ಕಿತ್ತು ಹೋಗಿರುವುದು ಸೇರಿದಂತೆ ವಿವಿಧ ರೀತಿಯ ದುರಸ್ತಿ ಕೆಲಸಗಳನ್ನು ಪಟ್ಟಿ ಮಾಡಿ, ಅದಕ್ಕೆ ತಗುಲುವ ವೆಚ್ಚವನ್ನು ಅಂದಾಜು ಮಾಡಲಾಗಿದೆ’ ಎಂದು ಹೇಳಿದರು.
ಹೊಸ ಕಟ್ಟಡಕ್ಕಿಲ್ಲ ಪ್ರಸ್ತಾವ: ‘ತಾಲ್ಲೂಕಿನಲ್ಲಿರುವ ಕೆಲ ಶಾಲಾ ಕಟ್ಟಡಗಳು ಸುಮಾರು ಐದು ದಶಕಕ್ಕೂ ಹೆಚ್ಚು ಹಳೆಯದಾಗಿವೆ. ಇನ್ನುಳಿದ ಕೆಲವು ಮಳೆಗಾಲದಲ್ಲಿ ತರಗತಿ ನಡೆಸಲು ಕಷ್ಟವೆನ್ನುವ ಸ್ಥಿತಿಯಲ್ಲಿವೆ. ಅಂತಹ ಶಾಲೆಗಳನ್ನು ಕೆಡವಿ ಹೊಸ ಕಟ್ಟಡಗಳನ್ನು ನಿರ್ಮಿಸಬೇಕಿದೆ. ಆದರೆ, ಶಿಕ್ಷಣ ಇಲಾಖೆ ಇದುವರೆಗೆ ಹೊಸ ಕಟ್ಟಡಗಳ ನಿರ್ಮಾಣಕ್ಕೆ ಮುಂದಾಗಿಲ್ಲ’ ಎಂದು ಕನಕಪುರದ ಶಾಲೆಯೊಂದರ ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ ಸದಸ್ಯರೊಬ್ಬರು ಹೇಳಿದರು.
‘ಇದೀಗ ಕರ್ನಾಟಕ ಪಬ್ಲಿಕ್ ಶಾಲೆಗಳ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಇದೇ ಕಾರಣಕ್ಕಾಗಿ, ಗ್ರಾಮಗಳಲ್ಲಿರುವ ಹಳೆ ಶಾಲೆಗಳ ದುರಸ್ತಿಗೆ ಶಿಕ್ಷಣ ಇಲಾಖೆ ನಿರ್ಲಕ್ಷ್ಯ ವಹಿಸುತ್ತಿದೆ. ಪಂಚಾಯಿತಿ ಮಟ್ಟದಲ್ಲಿ ತಲೆ ಎತ್ತಲಿರುವ ಪಬ್ಲಿಕ್ ಶಾಲೆಗಳ ಜೊತೆಗೆ ಗ್ರಾಮದ ಒಳಗೇ ಇರುವ, ಊರಿನ ಮಕ್ಕಳಿಗೆ ನಡೆದುಕೊಂಡು ಹೋಗುವಷ್ಟು ದೂರವಿರುವ ಶಾಲೆಗಳನ್ನು ಸಹ ದುರಸ್ತಿ ಮಾಡಿ ಅಭಿವೃದ್ಧಿಪಡಿಸಬೇಕು’ ಎಂದು ಒತ್ತಾಯಿಸಿದರು.
ಶಿಥಿಲವಾಗಿರುವ ಹಳೆಯ ಶಾಲೆಗಳ ದುರಸ್ತಿ ಬದಲು ಹೊಸ ಕಟ್ಟಡಗಳನ್ನು ನಿರ್ಮಿಸಿ ಎಂದು ಎಸ್‌ಡಿಎಂಸಿ ಸದಸ್ಯರು ಮತ್ತು ಗ್ರಾಮಸ್ಥರು ಒತ್ತಾಯಿಸುತ್ತಾರೆ. ಹಾಗಾಗಿ ಕೆಲ ಶಾಲೆಗಳ ದುರಸ್ತಿ ನಡೆದಿಲ್ಲ- ಕೆಎಸ್ ಸ್ವರೂಪ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಕನಕಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.