ADVERTISEMENT

200 ದಿನ ಪೂರೈಸಿದ ಧರಣಿ

ಹಂದಿಗೊಂದಿ ಅರಣ್ಯದಲ್ಲಿ ಇರುಳಿಗ ಸಮುದಾಯದ ಹೋರಾಟ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2021, 3:40 IST
Last Updated 13 ಸೆಪ್ಟೆಂಬರ್ 2021, 3:40 IST
ಪ್ರತಿಭಟನೆಯಲ್ಲಿ ಪಾಲ್ಗೊಂಡ ಬುಡಕಟ್ಟು ಸಮುದಾಯದ ಜನರು
ಪ್ರತಿಭಟನೆಯಲ್ಲಿ ಪಾಲ್ಗೊಂಡ ಬುಡಕಟ್ಟು ಸಮುದಾಯದ ಜನರು   

ರಾಮನಗರ: ತಾಲ್ಲೂಕಿನ ವಡ್ಡರಹಳ್ಳಿ ಗೊಲ್ಲರದೊಡ್ಡಿ ಗ್ರಾಮದ ಹಂದಿಗೊಂದಿ ಅರಣ್ಯ ಪ್ರದೇಶದಲ್ಲಿ ಇರುಳಿಗ ಬುಡಕಟ್ಟು ಸಮುದಾಯದವರು ನಡೆಸುತ್ತಿರುವ ಧರಣಿ ಭಾನುವಾರ 203ನೇ ದಿನಕ್ಕೆ ಕಾಲಿಟ್ಟಿತು.

ಒಕ್ಕಲೆಬ್ಬಿಸಿದ ಜಾಗದಲ್ಲಿ ಭೂಮಿ ನೀಡಬೇಕು ಎಂದು ಒತ್ತಾಯಿಸಿ ಇರುಳಿಗ ಸಮುದಾಯದ 24 ಕುಟುಂಬಗಳು ಹಂದಿಗೊಂದಿ ಅರಣ್ಯದಲ್ಲೇ ಟೆಂಟ್ ಹಾಕಿ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದು, ಭೂಮಿ ಹಕ್ಕುಪತ್ರಕ್ಕಾಗಿ ಒತ್ತಾಯಿಸಿದ್ದಾರೆ. 2006ರ ಅರಣ್ಯ ಹಕ್ಕು ಕಾಯ್ದೆ ಪ್ರಕಾರ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ 8 ವರ್ಷಗಳಿಂದ ನಿರಂತರ ಹೋರಾಟ ನಡೆಸುತ್ತಿದ್ದರೂ ಜಿಲ್ಲಾಡಳಿತ ನಮ್ಮ ಹೋರಾಟಕ್ಕೆ ಸ್ಪಂದಿಸಿಲ್ಲ ಎಂದು ಇರುಳಿಗ ಸಮುದಾಯದ ಮುಖಂಡರು ಆರೋಪಿಸಿದರು.

1980ರ ಅರಣ್ಯ ಸಂರಕ್ಷಣಾ ಕಾಯ್ದೆ ಬಳಸಿಕೊಂಡು ಅರಣ್ಯ ಇಲಾಖೆ ರಾಜ್ಯ ಮತ್ತು ಸಾಮಾನ್ಯ ಅರಣ್ಯ ಪ್ರದೇಶದಿಂದ ಬುಡಕಟ್ಟು ಜನಾಂಗದವರನ್ನು ಒಕ್ಕಲೆಬಿಸಲಾಗಿತ್ತು. ನಂತರ 2008ರಲ್ಲಿ 2006 ರ ಅರಣ್ಯ ಹಕ್ಕು ಕಾಯ್ದೆ ಜಾರಿಗೆ ಬಂದಿತು. ಈ ಕಾಯ್ದೆ ಸೆಕ್ಷನ್ 3(1)ಎಂ ಪ್ರಕಾರ ಹಿಂದೆ ಅರಣ್ಯ ಪ್ರದೇಶದಿಂದ ಒಕ್ಕಲೆಬಿಸಿರುವ ಜಾಗದಲ್ಲಿಯೇ ಅರಣ್ಯ ಭೂಮಿಯನ್ನು ಒಳಗೊಂಡಂತೆ ಅಲ್ಲಿಯೇ ಪುನರ್ ವಸತಿಯನ್ನು ಕಲ್ಪಿಸಲು
ಅವಕಾಶವಿದೆ. ಹೀಗಿದ್ದೂ ಅರಣ್ಯ ಇಲಾಖೆ ನಮಗೆ ನ್ಯಾಯ ಒದಗಿಸುತ್ತಿಲ್ಲ. ಅಗತ್ಯ ಸಾಕ್ಷ್ಯಗಳಿಗಳಿದ್ದರೂ ರಾಮನಗರ ವಲಯ ಅರಣ್ಯಾಧಿಕಾರಿಗಳು ಇದಕ್ಕೆ ಒಪ್ಪದೇ ಕಾನೂನುಬಾಹಿರ ಹಿಂಬರಹ ನೀಡಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು. ಕೃಷ್ಣಮೂರ್ತಿ, ಲಕ್ಷ್ಮಮ್ಮ, ದೇವಯ್ಯ, ನವಣಯ್ಯ, ಈರಮ್ಮ, ಮಾದಮ್ಮ, ಮಹದೇವಮ್ಮ, ಜೆ.ಎನ್. ಶಿವರಾಜು, ಶಿವಮಾದಮ್ಮ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.