ADVERTISEMENT

3ನೇ ಹಣಕಾಸು ಯೋಜನೆಯ ಹಣ:ನೀರಿನ ಸಮಸ್ಯೆ ಪರಿಹಾರಕ್ಕೆ ಬಳಸಲು ತಾಕೀತು

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2012, 19:30 IST
Last Updated 15 ಮಾರ್ಚ್ 2012, 19:30 IST

ಚನ್ನಪಟ್ಟಣ: ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳು 13ನೇ ಹಣಕಾಸು ಯೋಜನೆಯ ಹಣವನ್ನು ಬೇಸಿಗೆ ಮುಗಿಯುವವರೆಗೆ ತಾಲ್ಲೂಕಿನ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಉಪಯೋಗಿಸಿಕೊಳ್ಳುವಂತೆ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ರವಿಕುಮಾರ್ ಗ್ರಾ.ಪಂ.ಗಳ ಕಾರ್ಯದರ್ಶಿಗಳಿಗೆ ತಾಕೀತು ಮಾಡಿದರು.

ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ಬುಧವಾರ ಏರ್ಪಾಡಾಗಿದ್ದ ತಾಲ್ಲೂಕಿನ 32 ಗ್ರಾ.ಪಂ.ಗಳ ಕಾರ್ಯದರ್ಶಿ ಮತ್ತು ಎಲ್ಲಾ ಗ್ರಾಮಗಳ ವಾಟರ್‌ಮನ್‌ಗಳ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮುಂಬರುವ ಬೇಸಿಗೆಯಲ್ಲಿ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಮತ್ತಷ್ಟು ಹೆಚ್ಚಲಿದ್ದು, ಇದನ್ನು ಎದುರಿಸಲು ಗ್ರಾಮ ಪಂಚಾಯಿತಿಗಳು ಸಿದ್ಧಗೊಳ್ಳಬೇಕು. ಕುಡಿಯುವ ನೀರಿನ ವಿಷಯದಲ್ಲಿ ತಾತ್ಸಾರ ಮಾಡದಂತೆ ಕಿವಿಮಾತು ಹೇಳಿದರು.

ಗ್ರಾಮೀಣ ಪ್ರದೇಶದಲ್ಲಿರುವ ನೀರಿನ ಸಮಸ್ಯೆ ಬಗ್ಗೆ ಪ್ರತಿ ಗ್ರಾಮದ ವಾಟರ್‌ಮನ್‌ಗಳಿಂದ ವಿವರ ಪಡೆದ ರವಿಕುಮಾರ್, ನೀರನ್ನು ವ್ಯರ್ಥಮಾಡದೆ ಸಮರ್ಪಕವಾಗಿ ಬಳಸಿಕೊಳ್ಳುವಂತೆ ಸೂಚಿಸಿದರು.

ಪ್ರತಿ ಗ್ರಾಮಗಳಲ್ಲೂ ಕಂದಾಯ ವಸೂಲಿ ಮಾಡಿ, ಆ ಹಣವನ್ನು ಕುಡಿಯುವ ನೀರು ಕಾಮಗಾರಿಗಳಿಗೆ ಬಳಸುವಂತೆ ಸೂಚಿಸಿದ ಅವರು, ನೀರಿನ ಅವಶ್ಯಕತೆ ಇರುವ ಕಡೆ ಹಣವನ್ನು ಸಮರ್ಪಕವಾಗಿ ಖರ್ಚು ಮಾಡುವಂತೆ ತಿಳಿಸಿದರು.

ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳ ಪಿಡಿಓಗಳು, ಕಾರ್ಯದರ್ಶಿ, ವಾಟರ್‌ಮನ್‌ಗಳು ಮತ್ತು ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.