ADVERTISEMENT

‘ದೌರ್ಜನ್ಯ ತಡೆ ಪ್ರತಿಯೊಬ್ಬರ ಹೊಣೆ’

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2018, 4:48 IST
Last Updated 3 ಫೆಬ್ರುವರಿ 2018, 4:48 IST

ರಾಮನಗರ: ಮಕ್ಕಳ ಮೇಲೆ ನಡೆಯುವ ದೌರ್ಜನ್ಯ, ದಬ್ಬಾಳಿಕೆಯನ್ನು ನಿರ್ಮೂಲನೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಬೇಕು ಎಂದು ಕೊಪ್ಪಳ ಜಿಲ್ಲೆಯ ಮಕ್ಕಳ ಸಂರಕ್ಷಣಾ ಕಾರ್ಯಕ್ರಮಗಳ ಘಟಕದ ಪ್ರಾದೇಶಿಕ ಸಂಯೋಜಕ ಕೊಣಿಲ ರಾಘವೇಂದ್ರ ಭಟ್ ಹೇಳಿದರು.

ಇಲ್ಲಿನ ಜಿಲ್ಲಾ ಪೊಲೀಸ್ ಭವನದ ಸಭಾಂಗಣದಲ್ಲಿ ಮಕ್ಕಳ ಹಕ್ಕುಗಳು ಮತ್ತು ರಕ್ಷಣಾ ಕಾನೂನುಗಳು ಹಾಗೂ ಪುನರ್ವಸತಿ ಯೋಜನೆ ಕುರಿತು ಪೊಲೀಸ್ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗೆ ಶುಕ್ರವಾರ ನಡೆದ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಈಗಲೂ ಮಕ್ಕಳ ಮೇಲಿನ ದೌರ್ಜನ್ಯ, ಬಾಲ್ಯ ವಿವಾಹ, ಬಾಲಕಾರ್ಮಿಕ ಪದ್ಧತಿ ಹೆಚ್ಚಾಗುತ್ತಿವೆ. ಇವುಗಳ ತಡೆಗೆ ಜಾಗೃತಿ ಅವಶ್ಯ. ಇಂಥ ಕೃತ್ಯಗಳ ನಿಯಂತ್ರಣಕ್ಕೆ ಸಂಘ ಸಂಸ್ಥೆಗಳ ಸಹಕಾರ ಅಗತ್ಯವಿದೆ ಎಂದರು.

ADVERTISEMENT

ಹೆಣ್ಣು ಈ ಸಮಾಜದ ಕಣ್ಣು, ಹೆಣ್ಣಿನ ನಿರ್ಲಕ್ಷ್ಯ ಬೇಡ. ಯಾವುದೇ ಸಮಾಜ ಮಹಿಳೆಯರನ್ನು ಗೌರವಿಸದ ಹೊರತು ಆ ಸಮಾಜದ ಅಭಿವೃದ್ಧಿ ಅಸಾಧ್ಯ. ಇಂಥ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಪಡೆಯುವುದರಿಂದ ಅಪರಾಧ ಕೃತ್ಯಗಳನ್ನು ಸ್ವಲ್ಪ ಮಟ್ಟಿಗಾದರೂ ಕಡಿಮೆ ಮಾಡಬಹುದು ಎಂದರು.

ಪೊಲೀಸ್ ತರಬೇತುದಾರ ಎಚ್.ಎಸ್. ಸೋಮಶೇಖರ್ ಮಾತನಾಡಿ, ಮಕ್ಕಳ ಹಕ್ಕುಗಳ ಬಗ್ಗೆ ಮಕ್ಕಳಲ್ಲೇ ಅರಿವು ಮೂಡುವ ಅಗತ್ಯವಿದೆ. ಮಹಿಳೆ ಮತ್ತು ಮಕ್ಕಳ ದೌರ್ಜನ್ಯ ಹಾಗೂ ಹಕ್ಕು ಸಂರಕ್ಷಣೆ ಕೇವಲ ಒಂದು ಇಲಾಖೆಯ ಕರ್ತವ್ಯ ಮಾತ್ರವಲ್ಲ. ಎಲ್ಲ ಇಲಾಖೆಗಳು ಪರಸ್ಪರ ಒಗ್ಗೂಡಿ ಕೆಲಸ ಮಾಡಿದರೆ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಸಾಧ್ಯವಿದೆ ಎಂದರು.

ಕಾರ್ಯಾಗಾರವನ್ನು ಉದ್ಘಾಟಿಸಿದ ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ಬಿ. ಎಸ್. ಹೊನ್ನಸ್ವಾಮಿ ಮಾತನಾಡಿ ಸರ್ಕಾರಿ ನೌಕರಿಯಲ್ಲಿ ಕೆಲಸ ಮಾಡುವಾಗ ಕಾನೂನುಗಳು, ಯೋಜನೆಗಳ ಅರಿವನ್ನು ಪಡೆಯಬೇಕು. ಈ ಮಾಹಿತಿ ಪಡೆಯಲು ತರಬೇತಿ ತುಂಬಾ ಮುಖ್ಯವಾಗುತ್ತವೆ. ಮಕ್ಕಳ ಸಂರಕ್ಷಕರಾಗಿ ವಿವಿಧ ಹಂತಗಳಲ್ಲಿರುವ ನೌಕರರು ಮತ್ತು ಅಧಿಕಾರಿಗಳು ಅಲ್ಲಿನ ಮಕ್ಕಳನ್ನು ತಮ್ಮ ಮಕ್ಕಳಂತೆಯೇ ಕಾಣಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ರಮೇಶ್ ಮಾತನಾಡಿ ಮಕ್ಕಳ ಮೇಲಿನ ದೌರ್ಜನ್ಯಗಳು ಹಲವು ರೀತಿಯಲ್ಲಿವೆ. ಅವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲರ ಪಾತ್ರ ಮುಖ್ಯವಾಗಿರುತ್ತದೆ. ಸರ್ಕಾರದ ಭಾಗವಾಗಿರುವ ಎಲ್ಲರೂ ತಮ್ಮ ಜವಾಬ್ದಾರಿಗಳನ್ನು ಅರಿತು ಕೆಲಸ ಮಾಡಬೇಕು. ಕಾಲಕಾಲಕ್ಕೆ ಕಾನೂನಿನಲ್ಲಾಗುವ ಮಾರ್ಪಾಡುಗಳನ್ನು ತಿಳಿದುಕೊಳ್ಳಬೇಕು ಎಂದು ತಿಳಿಸಿದರು.

ಮಕ್ಕಳ ವಿಶೇಷ ಪೊಲೀಸ್ ಘಟಕದ ಅಧಿಕಾರಿ ವಿ. ರಘುಕುಮಾರ್ ಇದ್ದರು. ಸುಚಿತ್ರಾ ಪ್ರಾರ್ಥಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಎಚ್.ಕೆ. ರೇವಣೇಶ್‌ ಸ್ವಾಗತಿಸಿದರು. ಮಕ್ಕಳ ರಕ್ಷಣಾಧಿಕಾರಿ ತಾಜುದ್ದೀನ್‌ ಖಾನ್‌ ನಿರೂಪಿಸಿದರು. ಕಾನೂನು ಪತ್ತೆ ಪರಿವೀಕ್ಷಣಾಧಿಕಾರಿ ಸವಿತಾ ವಂದಿಸಿದರು.

ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.