ADVERTISEMENT

ರಸ್ತೆ ಬದಿ ಹಣ್ಣಿನ ವ್ಯಾಪಾರ ಜೋರು

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2018, 6:46 IST
Last Updated 19 ಫೆಬ್ರುವರಿ 2018, 6:46 IST
ಬೆಂಗಳೂರು–ಮೈಸೂರು ಹೆದ್ದಾರಿಯ ಬದಿ ಹಣ್ಣಿನ ಅಂಗಡಿ ತೆರೆದಿರುವುದು
ಬೆಂಗಳೂರು–ಮೈಸೂರು ಹೆದ್ದಾರಿಯ ಬದಿ ಹಣ್ಣಿನ ಅಂಗಡಿ ತೆರೆದಿರುವುದು   

ರಾಮನಗರ: ಶಿವರಾತ್ರಿಯ ನಂತರ ಜಿಲ್ಲೆಯಲ್ಲಿ ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ಜನ ದಾಹ ತೀರಿಸಿಕೊಳ್ಳಲು ಕಲ್ಲಂಗಡಿ, ಎಳನೀರು ಹಾಗೂ ಹಣ್ಣಿನ ಪಾನೀಯಗಳ ಮೊರೆ ಹೋಗುತ್ತಿದ್ದಾರೆ.

ಜಿಲ್ಲೆಯಲ್ಲಿ ಭಾನುವಾರ ಗರಿಷ್ಠ ಉಷ್ಣಾಂಶ 32 ಡಿಗ್ರಿಗೆ ತಲುಪಿದ್ದು, ಧಗೆ ಹೆಚ್ಚಾಗಿತ್ತು. ಮನೆಗಳಲ್ಲಿ ಕೂರಲು ಆಗದಷ್ಟು ಸೆಕೆ ಆವರಿಸಿದೆ. ಫ್ಯಾನ್‌ ಹಾಕಿಕೊಂಡು ಇರಬೇಕಾದ ಪರಿಸ್ಥಿತಿ ಇದೆ. ಹೊರಗೆ ಕಾಲಿಟ್ಟರೆ ಬಿಸಿಲು ಮೈ ಸುಡುತ್ತಿದೆ.

ಇಲ್ಲಿನ ಪ್ರಮುಖ ರಸ್ತೆಯ ಬದಿಗಳಲ್ಲಿ ಹಾಗೂ ಬೆಂಗಳೂರು–ಮೈಸೂರು ಹೆದ್ದಾರಿಯ ಅಕ್ಕಪಕ್ಕ ಹಣ್ಣಿನ ಅಂಗಡಿಗಳನ್ನು ತೆರೆಯಲಾಗಿದ್ದು, ವ್ಯಾಪಾರ ವಹಿವಾಟು ಬಿರುಸಿನಿಂದ ನಡೆಯುತ್ತಿದೆ. ವಿಶೇಷವಾಗಿ ಮಧ್ಯಾಹ್ನದ ಸಮಯದಲ್ಲಿ ಜನರು ಕಲ್ಲಂಗಡಿ ಸೇವಿಸಿ ಬಿಸಿಲಿನ ಬೇಗುದಿಯಿಂದ ಸುಧಾರಿಸಿಕೊಳ್ಳುತ್ತಿದ್ದಾರೆ.

ADVERTISEMENT

ಇಲ್ಲಿಗೆ ಬಹುತೇಕ ಆಂಧ್ರಪ್ರದೇಶದಿಂದ ಕಲ್ಲಗಂಡಿ ಹಣ್ಣುಗಳು ಸರಬರಾಜಾಗುತ್ತಿವೆ. ಒಂದು ಕೆ.ಜಿ.ಗೆ ₨15 ರಿಂದ 20 ರವರೆಗೆ ಬೆಲೆ ಇದೆ. ಅಂಗಡಿಯಲ್ಲಿ ಹಣ್ಣನ್ನು ಕತ್ತರಿಸಿ ಹೋಳುಗಳನ್ನಾಗಿ ಮಾಡಿ ಮಾರುತ್ತಾರೆ. ಒಂದು ಹೋಳು ₨10ಕ್ಕೆ ಮಾರಾಟವಾಗುತ್ತಿದೆ. ಎಳನೀರು ಒಂದಕ್ಕೆ ₹20 ರಿಂದ 25, ಕರಬೂಜ ಕೆ.ಜಿಗೆ ₹20, ಸೌತೆಕಾಯಿ ಒಂದಕ್ಕೆ ₹5ಕ್ಕೆ ಮಾರಾಟವಾಗುತ್ತಿದೆ.

‘ಬಿಸಿಲಿಗೆ ಪದೇ ಪದೇ ನೀರು ಕುಡಿಯುವುದು ಸಾಮಾನ್ಯ. ಕುಡಿದ ನೀರು ಬೆವರಿನ ಮೂಲಕ ಹೊರಹೋಗುತ್ತದೆ. ಬೆವರು ಹೊರ ಹೋದಂತೆ ಶರೀರ ಒಣಗುತ್ತದೆ. ದೇಹ ಬಳಲಿ ಬೆಂಡಾಗಿ ಸುಸ್ತು ಮಾಡಿಬಿಡುತ್ತದೆ. ದಣಿದ ಶರೀರ ಮತ್ತು ಮನಸ್ಸುಗಳಿಗೆ ಊಟ ಬೇಡವಾಗಿ ತಂಪು ಪಾನೀಯಗಳ ಕಡೆಗೆ ಗಮನ ಹರಿಯುತ್ತದೆ’ ಎನ್ನುತ್ತಾರೆ ಹಿರಿಯರಾದ ತ್ಯಾಗರಾಜ್‌.

ಎಳನೀರು, ಮಜ್ಜಿಗೆ ಹಾಗೂ ವಿವಿಧ ಹಣ್ಣಿನ ರಸಗಳ ಸೇವನೆಯು ಈ ಅವಧಿಯಲ್ಲಿ ಸಾಮಾನ್ಯ. ಇವು ಶರೀರಕ್ಕೆ ತಂಪು ಕೊಡುವುದರ ಜತೆಗೆ ಸ್ವಲ್ಪ ಮಟ್ಟಿಗೆ ಶಕ್ತಿಯನ್ನು ನೀಡುತ್ತವೆ. ಇದರಿಂದಾಗಿ ಹೆಚ್ಚಿನ ಜನರು ಹಣ್ಣಿನ ರಸ ಸೇವಿಸುತ್ತಾರೆ. ಕಲ್ಲಂಗಡಿ ಹಣ್ಣು ಹೆಚ್ಚಿನ ತಂಪು ಮತ್ತು ನೀರಿನ ಅಂಶವನ್ನು ಒದಗಿಸುವುದರಿಂದ ಜನರು ಮುಗಿ ಬೀಳುತ್ತಾರೆ ಎಂದು ಅವರು ಹೇಳುತ್ತಾರೆ.

‘ಹಣ್ಣುಗಳ ದುಬಾರಿಯಾದರೂ ಜನರು ಕಲ್ಲಂಗಡಿ ತಿನ್ನುವುದು ಸಾಮಾನ್ಯವಾಗಿದೆ. ಬಿಸಿಲು ಏರಿದಂತೆ ಬೇಡಿಕೆಯೂ ಹೆಚ್ಚುತ್ತಿದೆ. ಆಂಧ್ರಪ್ರದೇಶದಿಂದ ಹಣ್ಣುಗಳನ್ನು ತರಿಸಿಕೊಳ್ಳುತ್ತೇವೆ. ದಿನೇ ದಿನೇ ವ್ಯಾಪಾರ ಕುದುರುತ್ತಿದೆ’ ಎಂದು ಹಣ್ಣಿನ ವ್ಯಾಪಾರಿ ಅಕ್ಬರ್‌ ಹೇಳುತ್ತಾರೆ.

‘ಅಂಗಡಿಗಳಲ್ಲಿ ರಾಸಾಯನಿಕ ಮಿಶ್ರಣವಾಗಿರುವ ತಂಪು ಪಾನೀಯಗಳನ್ನು ಸೇವಿಸುವುದಕ್ಕಿಂತ ತಾಜಾ ಹಣ್ಣನ್ನು ಸೇವಿಸುವುದು ಉತ್ತಮ. ರಸ್ತೆ ಬದಿಯಲ್ಲಿ ಸ್ನೇಹಿತರೊಂದಿಗೆ ಹರಟೆ ಹೊಡೆಯುತ್ತ ಕಲ್ಲಂಗಡಿ ಹಣ್ಣು ತಿನ್ನುವುದು ಚೆನ್ನಾಗಿರುತ್ತದೆ’ ಎಂಬುದು ಗ್ರಾಹಕ ಚಂದ್ರಮೌಳಿ ಅನಿಸಿಕೆ.

ದುಷ್ಪರಿಣಾಮ ಸಾಧ್ಯತೆ

ರಸ್ತೆ ಬದಿಯಲ್ಲಿ ಕತ್ತರಿಸಿ ಮಾರುವ ಹಣ್ಣುಗಳಲ್ಲಿ ದೂಳು, ನೊಣ ಮೊದಲಾದ ಕೀಟಬಾಧೆ ಇರುವ ಕಾರಣ ದುಷ್ಪರಿಣಾಮ ಹೆಚ್ಚು. ಇಂತಹ ಹಣ್ಣನ್ನು ತಿನ್ನುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಕತ್ತರಿಸಿದ ಹಣ್ಣುಗಳನ್ನು ಮುಚ್ಚಿಟ್ಟ ಬಾಕ್ಸ್‌ಗಳಲ್ಲಿ ಮಾರಾಟ ಮಾಡುವುದು ಸೂಕ್ತ ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೆ.ವಿ. ಶಿವರಾಜ್‌ ಹೇಳುತ್ತಾರೆ.

ಅತಿಯಾಗಿ ಬೆವರುವುದರಿಂದ ದೇಹದಲ್ಲಿ ಲವಣಾಂಶ ಕೊರತೆ ಉಂಟಾಗಿ ನಿತ್ರಾಣ, ಬಾಯಾರಿಕೆ, ವಾಂತಿ ಭೇದಿ ಕಾಣಿಸಿಕೊಳ್ಳಲಿದೆ. ಸೊಳ್ಳೆಗಳಿಂದ ಮಲೇರಿಯಾ, ಡೆಂಗೆ ಜ್ವರ ಕಾಣಿಸಿಕೊಳ್ಳುತ್ತವೆ. ಹಾಗಾಗಿ ಆರೋಗ್ಯ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸುವುದು ಅಗತ್ಯ ಎಂಬುದು ಅವರ ಸಲಹೆಯಾಗಿದೆ.

ಎಸ್. ರುದ್ರೇಶ್ವರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.