ADVERTISEMENT

ರಾಮನಗರ | 150 ವರ್ಷ ಹಳೆ ದಾಖಲೆಗಳಿಗೆ ಡಿಜಿಟಲ್ ಸ್ಪರ್ಶ: ನಕ್ಷೆ ಸಹಿತ ಪಹಣಿ

ಡಿಸಿಎಂ ತವರಲ್ಲಿ ಮರು ಭೂಮಾಪನ ಪ್ರಾಯೋಗಿಕ ಯೋಜನೆಯ ಪಹಣಿ ವಿತರಣೆ ಇಂದು

ಓದೇಶ ಸಕಲೇಶಪುರ
Published 12 ಜನವರಿ 2025, 5:02 IST
Last Updated 12 ಜನವರಿ 2025, 5:02 IST
ಮರು ಭೂಮಾಪನ ಯೋಜನೆಯಡಿ ಸೃಜಿಸಿರುವ ನಕ್ಷೆ ಸಹಿತ ಡಿಜಿಟಲ್ ಪಹಣಿ
ಮರು ಭೂಮಾಪನ ಯೋಜನೆಯಡಿ ಸೃಜಿಸಿರುವ ನಕ್ಷೆ ಸಹಿತ ಡಿಜಿಟಲ್ ಪಹಣಿ   

ರಾಮನಗರ: ಭೂ ದಾಖಲೆಗಳಿಗೆ ಆಧುನಿಕ ಸ್ಪರ್ಶ ನೀಡಲು ಮುಂದಾಗಿರುವ ಕಂದಾಯ ಇಲಾಖೆಯು ಕನಕಪುರ ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿಯಲ್ಲಿ ಪ್ರಾಯೋಗಿಕವಾಗಿ ಕೈಗೊಂಡಿದ್ದ ಡ್ರೋನ್ ಆಧಾರಿತ ಮರು ಭೂಮಾಪನ ಯೋಜನೆ ಪೂರ್ಣಗೊಂಡಿದೆ.

ಈ ಯೋಜನೆ ಅಡಿ ಜಮೀನಿನ ನಕ್ಷೆ, ಅಳತೆ, ಮಾಲೀಕತ್ವದ ವಿವರ ಸೇರಿ ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್) ಇರುವ ಡಿಜಿಟಲ್ ಪಹಣಿ ವಿತರಣೆಗೆ ಸಿದ್ಧವಾಗಿವೆ.

ಹೋಬಳಿ ವ್ಯಾಪ್ತಿಯ 35 ಕಂದಾಯ ಗ್ರಾಮಗಳಲ್ಲಿ ಮರು ಭೂಮಾಪನಕ್ಕೆ 2023ರ ಆಗಸ್ಟ್‌ 14ರಂದು ಅಂದಿನ ಸಂಸದ ಡಿ.ಕೆ. ಸುರೇಶ್ ಅವರು ಚಾಲನೆ ನೀಡಿದ್ದರು.

ADVERTISEMENT

ಯೋಜನೆಯ ನೋಡಲ್ ಅಧಿಕಾರಿಯಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಕಾರ್ಯದರ್ಶಿ ಮನೀಷ್ ಮೌದ್ಗಿಲ್, ಯೋಜನಾ ನಿರ್ದೇಶಕರಾಗಿ ರಾಮನಗರ ಜಿಲ್ಲಾ ಭೂ ದಾಖಲೆಗಳ ಇಲಾಖೆ ಉಪ ನಿರ್ದೇಶಕ ಬಿ.ಆರ್. ಹನುಮೇಗೌಡ ಹಾಗೂ ಹಾಸನ ಜಿಲ್ಲೆಯ ಉ‍ಪ ನಿರ್ದೇಶಕ ಸುಜಯ್‌ ಕುಮಾರ್ ಭೂ ಮರುಮಾಪನದ ವಿಶೇಷ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.

23,469 ಪಹಣಿ: ‘ಜಿಲ್ಲೆಯ ನಾಲ್ಕು ತಾಲ್ಲೂಕುಗಳ ಭೂ ದಾಖಲೆಗಳ ಸಹಾಯಕ ನಿರ್ದೇಶಕರು, ಇಬ್ಬರು ಅಧೀಕ್ಷಕರು, ನಾಲ್ವರು ಪರ್ಯಾವೇಕ್ಷಕರು, 26 ಸರ್ಕಾರಿ ಭೂ ಮಾಪಕರು, 34 ಪರವಾನಗಿ ಭೂ ಮಾಪಕರು ಹಾಗೂ 16 ಬಾಂದು ಜವಾನರನ್ನು ಒಳಗೊಂಡ  89 ಸಿಬ್ಬಂದಿ ತಂಡ ಸತತ ನಾಲ್ಕು ತಿಂಗಳು ಒಟ್ಟು 5,706 ಸರ್ವೇ ನಂಬರ್‌ಗಳ ಮರು ಭೂಮಾಪನ ಮಾಡಿತ್ತು’ ಎಂದು ಬಿ.ಆರ್. ಹನುಮೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಮೀನು ಮಾಲೀಕರು ಕೊಟ್ಟ ದಾಖಲೆ ಪರಿಶೀಲಿಸಿ ಅವರ ಸಮ್ಮುಖದಲ್ಲೇ ಡ್ರೋನ್ ಸರ್ವೇ ಮಾಡಲಾಗಿತ್ತು. ನಂತರ ಎಲ್ಲಾ ಮಾಹಿತಿ ಕ್ರೋಡೀಕರಿಸಿ ಮರು ಪರಿಶೀಲಿಸಿ ಅಂತಿಮವಾಗಿ 23,469 ಡಿಜಿಟಲ್‌ ಪಹಣಿ ಸೃಜಿಸಲಾಗಿದೆ. ಇದರಿಂದಾಗಿ, ಸುಮಾರು 150 ವರ್ಷ ಹಳೆಯ ದಾಖಲೆಗಳಿಗೆ ಡಿಜಿಟಲ್ ಸ್ಪರ್ಶ ಸಿಕ್ಕಿದೆ’ ಎಂದು ಹೇಳಿದರು.

ಕ್ಯೂ–ಜಿಐಎಸ್ ತಂತ್ರಾಂಶದ ನಕ್ಷೆ: ‘ಭಾರತೀಯ ಸರ್ವೆ ಇಲಾಖೆ ರಾಜ್ಯದ 49 ಕಡೆ ನಿರಂತರ ಕಾರ್ಯಾಚರಣೆ ಉಲ್ಲೇಖ ವ್ಯವಸ್ಥೆಯ (ಸಿಒಆರ್‌ಎಸ್) ಬಿಂದುಗಳನ್ನು ಸ್ಥಾಪಿಸಿದೆ. ಅದರಲ್ಲಿ ಕನಕಪುರ ತಾಲ್ಲೂಕು ಕಚೇರಿ ಆವರಣವೂ ಇದೆ. ಇದರ ಆಧಾರದಲ್ಲಿ ಸುಮಾರು 100 ಮೀಟರ್ ಎತ್ತರದಲ್ಲಿ ಡ್ರೋನ್ ಹಾರಿಸಿ ಭೂಮಿ ಚಿತ್ರ ಸೆರೆ ಹಿಡಿಯಲಾಗಿದೆ’ ಎಂದು ತಿಳಿಸಿದರು.

‘ಚಿತ್ರವನ್ನು ಆರ್ಥೊರೆಕ್ಟಿಫೈಡ್ ಇಮೇಜ್ ಆಗಿ ಪರಿವರ್ತಿಸಿ ರೋವರ್ ಉಪಕರಣದ ನೆರವಿನಿಂದ ಜಮೀನಿನ ಬಿಂದುಗಳನ್ನು ಅಳತೆ ಮಾಡಲಾಗುತ್ತದೆ. ನಂತರ, ಬಿಂದುಗಳ ದತ್ತಾಂಶ ಬಳಸಿಕೊಂಡು ಕ್ಯೂ–ಜಿಐಎಸ್ ತಂತ್ರಾಂಶದಲ್ಲಿ ಪ್ರತಿ ಜಮೀನಿನ ನಕ್ಷೆ ತಯಾರಿಸಿ, ಹೊಸ ಮಾದರಿಯ ಭೂ ನಕ್ಷೆ ಸೃಜಿಸಲಾಗಿದೆ’ ಎಂದು ಮಾಹಿತಿ ನೀಡಿದರು

ಡಿ.ಕೆ. ಶಿವಕುಮಾರ್ ಉಪ ಮುಖ್ಯಮಂತ್ರಿ
ಹಳೆಯ ಭೂ ದಾಖಲೆಗಳಿಗೆ ಆಧುನಿಕ ಸ್ಪರ್ಶ ಯೋಜನೆಯಡಿ 23,469 ಡಿಜಿಟಲ್ ಪಹಣಿ ಸೃಜನೆ 35 ಗ್ರಾಮಗಳಲ್ಲಿ ಸತತ 4 ತಿಂಗಳು ಭೂಮಾಪನ
ಡಿಜಿಟಲ್‌ ಪಹಣಿ ಇಂದು ವಿತರಣೆ
ಕನಕಪುರ ತಾಲ್ಲೂಕಿನ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ವಗ್ರಾಮ ದೊಡ್ಡಆಲಹಳ್ಳಿ ಭಾನುವಾರ (ಜ. 12) ಜಮೀನು ಮಾಲೀಕರಿಗೆ ಯೋಜ ಅಡಿ ಸೃಜಿಸಿರುವ ಪಹಣಿಗಳನ್ನು ವಿತರಿಸುವ ಕಾರ್ಯಕ್ರಮ ನಡೆಯಲಿದೆ.  ಕಂದಾಯ ಸಚಿವ ಕೃಷ್ಣ ಭೈರೇಗೌಡ ಸೇರಿದಂತೆ ಇಲಾಖೆಯ ಅಧಿಕಾರಿಗಳು ಭಾಗವಹಿಸಲಿದ್ದಾರೆ. ‘ರಾಜ್ಯದಾದ್ಯಂತ ವಿಸ್ತರಣೆ’ ‘ಜಮೀನಿನ ದಾಖಲೆಗಳಿಗೆ ಸಂಬಂಧಿಸಿದ ದೋಷ ಸರಿಪಡಿಸಿ ಜಮೀನಿನ ನಿಖರ ಮಾಹಿತಿ ಒಳಗೊಂಡ ನಕ್ಷೆ ಸಹಿತ ಪಹಣಿ ವಿತರಿಸಲು ತಂತ್ರಜ್ಞಾನ ಆಧಾರಿತ ಮರು ಭೂಮಾಪನ ಯೋಜನೆಯನ್ನು ಪ್ರಾಯೋಗಿಕ ಯೋಜನೆ ಯಶಸ್ವಿಯಾಗಿದೆ. ನನ್ನ ಕ್ಷೇತ್ರದ ಉಯ್ಯಂಬಳ್ಳಿ ಕ್ಷೇತ್ರದಲ್ಲಿ ಯಶಸ್ವಿಯಾಗಿರುವ ಈ ಯೋಜನೆಯನ್ನು ಮುಂದೆ ರಾಜ್ಯದಾದ್ಯಂತ ವಿಸ್ತರಿಸಲಾಗುವುದು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು. ತಕರಾರಿಗೆ 30 ದಿನ ಅವಕಾಶ ಜಮೀನು ಮಾಲೀಕರಿಗೆ ವಿತರಿಸುವ ಡಿಜಿಟಲ್ ಪಹಣಿಯಲ್ಲಿ ನಮೂದಿಸಿರುವ ಜಮೀನಿನ ಅಳತೆ ನಕ್ಷೆ ಮಾಲೀಕತ್ವದ ವಿವರ ಸೇರಿದಂತೆ ಇತರ ಯಾವುದೇ ನಮೂದಿತ ವಿವರದ ಕುರಿತು ಮಾಲೀಕರು 30 ದಿನದೊಳಗೆ ಅಗತ್ಯ ದಾಖಲೆಗಳೊಂದಿಗೆ ಲಿಖಿತ ರೂಪದಲ್ಲಿ ಆಕ್ಷೇಪಣೆಗಳನ್ನು ಸಲ್ಲಿಸಬೇಕು. ಅದಕ್ಕಾಗಿ ಉಯ್ಯಂಬಳ್ಳಿ ಹೋಬಳಿ ವ್ಯಾಪ್ತಿಯು ಗ್ರಾಮ ಪಂಚಾಯಿತಿಗಳಲ್ಲಿ ತಕರಾರು ಸ್ವೀಕರಣ ಕೇಂದ್ರ ತೆರೆಯಲಾಗುವುದು ಎಂದು ಬಿ.ಆರ್. ಹನುಮೇಗೌಡ ತಿಳಿಸಿದರು.
ಅನುಕೂಲಗಳೇನು?
ಹಳೆ ಭೂ ದಾಖಲೆಗಳಲ್ಲಿನ ತಾಂತ್ರಿಕ ದೋಷ ಜಮೀನಿನ ಗಡಿ ವಿವಾದ ತಿದ್ದುಪಡಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಮುಕ್ತಿ. ಡ್ರೋನ್ ಚಿತ್ರ ಸಹಿತ ನಕ್ಷೆ ಮತ್ತು ಅಳತೆಯ ಮಾಹಿತಿ ನಿಖರ ಮಾಹಿತಿ ಸಿಗಲಿದೆ. ಆರ್‌.ಟಿ.ಸಿ ತಿದ್ದುಪಡಿ ಆಕಾರಬಂದ್ ದಾಖಲೆಗಳ ಪುನರ್‌ಸೃಷ್ಟಿ ಸ್ಕೇಲ್ ಸಂಖ್ಯೆ ಟಿಪ್ಪಣಿ ತಯಾರಿಸುವುದು ಹಿಸ್ಸಾ ದಾಖಲೆಗಳ ರದ್ಧತೆ ಹಾಗೂ ಸರ್ವೇ ದಾಖಲೆಗಳ ತಿದ್ದುಪಡಿಗೆ ಮುಕ್ತಿ. ಜನವಸತಿ ಪ್ರದೇಶದ ಆಸ್ತಿಗಳನ್ನು ಸ್ವಾಮಿತ್ವ ಯೋಜನೆಯಡಿ ಅಳತೆ ಮಾಡಿ ಕರಡು ಆಸ್ತಿಪತ್ರಗಳನ್ನು ಹಕ್ಕುದಾರರಿಗೆ ವಿತರಿಸಿ ಸದರಿ ದಾಖಲೆಗಳನ್ನು ಮರು ಭೂಮಾಪನ ದಾಖಲೆಯೊಂದಿಗೆ ಸಂಯೋಜಿಸಲಾಗಿದೆ. ನಿಖರ ಭೂ ದಾಖೆಗಳಿಂದ ಕೃಷಿ ನೀತಿಗಳ ಅನುಷ್ಠಾನ ಸಬ್ಸಿಡಿ ಹಂಚಿಕೆ ನಿರ್ದಿಷ್ಟ ಬೆಳೆಗಳ ಭೂಮಿ ಗುರುತಿಸಲು ಸಹಕಾರಿ. ವಸತಿ ವಾಣಿಜ್ಯ ಕೈಗಾರಿಕೆ ಹಾಗೂ ಕೃಷಿ ಉದ್ದೇಶಕ್ಕೆ ಭೂ ಪ್ರದೇಶ ಗುರುತಿಸುವುದು ಸರಳವಾಗಲಿದೆ. ಬಹು ಮಾಲೀಕತ್ವದ ಪಹಣಿಗಳನ್ನು ಅಳತೆ ಮಾಡಿ ಏಕ ಮಾಲೀಕತ್ವದ ಪಹಣಿ ಸೃಜನೆ. ಸರ್ಕಾರದಿಂದ ಮಂಜೂರಾದ ಜಮೀನಿಗೆ ಪೋಡಿ ಭಾಗ್ಯ. ಜಮೀನು ದಾಖಲೆ ಮತ್ತು ಹಕ್ಕು ದಾಖಲೆಯ ನಿಖರ ಮಾಹಿತಿ ಲಭ್ಯ. ಜಂಟಿ ಖಾತೆ ಪಹಣಿಗಳನ್ನು ಪೋಡಿ ಮಾಡಿ ಪ್ರತ್ಯೇಕಗೊಳಿಸಲಾಗಿದೆ. ಹಕ್ಕುದಾರರು ಮರಣ ಹೊಂದಿದ್ದರೆ ವಾರಸುದಾರರ ಹೆಸರಿಗೆ ಪೋಡಿ ಮಾಡಿ ಪ್ರತ್ಯೇಕ ಪಹಣಿ ವಿತರಣೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.