ಕುದೂರು: ಮಂಗಳವಾರ ಮಧ್ಯಾಹ್ನ ಕುದೂರು ಪಟ್ಟಣಕ್ಕೆ ಆಗಮಿಸಿದ ಕನ್ನಡ ಜ್ಯೋತಿ ರಥಯಾತ್ರೆಯನ್ನು ಕೆಪಿಎಸ್ ಶಾಲಾ ವಿದ್ಯಾರ್ಥಿಗಳು ಮೆರವಣಿಗೆ ಮೂಲಕ ಕರೆತಂದರು. ಕನ್ನಡ ಪರ ಹೋರಾಟಗಾರರು, ಶಾಲಾ-ಕಾಲೇಜು ಮಕ್ಕಳು, ಕನ್ನಡ ಸಾಹಿತ್ಯ ಪರಿಷತ್ ಮುಖಂಡರು, ಗ್ರಾಮ ಪಂಚಾಯಿತಿ ವತಿಯಿಂದ ಅದ್ದೂರಿಯಾಗಿ ಬರ ಮಾಡಿಕೊಳ್ಳಲಾಯಿತು.
ಪಟ್ಟಣದ ಕೆಂಪೇಗೌಡ ಸರ್ಕಲ್ ಬಳಿ ರಥಕ್ಕೆ ಪೂಜೆ ಸಲ್ಲಿಸಲಾಯಿತು. ಮೆರವಣಿಗೆಯಲ್ಲಿ ಕನ್ನಡದ ಧ್ವಜಗಳು, ಶಾಲುಗಳು ಮಿಂಚಿದವು. ಮೆರವಣಿಗೆಯುದ್ದಕ್ಕೂ ವಿದ್ಯಾರ್ಥಿಗಳು ಪುಷ್ಪ ವೃಷ್ಟಿ ಮಾಡಿದರು. ನೂರಾರು ಸಂಖ್ಯೆಯ ಕನ್ನಡ ಪ್ರೇಮಿಗಳು ಕನ್ನಡದ ಶಾಲು ಹಾಕಿಕೊಂಡು ಕನ್ನಡಮ್ಮನಿಗೆ ಜೈಕಾರ ಕೂಗಿದರು. ಪಟ್ಟಣದ ಆದಿತ್ಯ ಚಿತ್ರಮಂದಿರದಿಂದ ಬಿಜಿಎಸ್ ವೃತ್ತದವರೆಗೂ ರಥ ಸಂಚರಿಸಿತು.
ಗ್ರಾಮ ಪಂಚಾಯಿತಿ ಪಿಡಿಒ ಪುರುಷೋತ್ತಮ್, ಕುದೂರು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪದ್ಮನಾಭ್ ಮಾತನಾಡಿದರು. ತಾಲ್ಲೂಕು ಕಸಾಪ ಕಾರ್ಯದರ್ಶಿ ಮಂಜುನಾಥ್, ಮುಖಂಡರಾದ ಹೊನ್ನರಾಜು ಮಾಡಬಾಳ್ ಜಯರಾಮ್, ಪಾನಿಪುರಿ ಶಂಕರ್, ಜಗದೀಶ್, ಈರಹನುಮಯ್ಯ, ವಿವಿಧ ಶಾಲಾ ಶಿಕ್ಷಕರುಗಳು, ವಿದ್ಯಾರ್ಥಿಗಳು, ನಾಗರಿಕರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.