ರಾಮನಗರ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬದಲಿಸುವುದು ಅಷ್ಟು ಸುಲಭವಲ್ಲ. ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಕ್ಕಿಳಿಸಬೇಕಾದರೆ ಒಂದು ಕ್ರಾಂತಿಯೇ ಆಗಬೇಕು’ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅಭಿಪ್ರಾಯಪಟ್ಟರು.
ಪೊಲೀಸರಿಗೆ ಗೌರವಯುತವಾದ ಟೋಪಿಗಳನ್ನು ನೀಡಬೇಕು ಎಂದು ಒತ್ತಾಯಿಸಿ, ನಗರದ ಐಜೂರು ವೃತ್ತದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಟನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಿದ್ದರಾಮಯ್ಯ ಅವರಷ್ಟು ಮುತ್ಸದ್ದಿ ರಾಜಕಾರಣಿ ಯಾವ ಪಕ್ಷದಲ್ಲೂ ಇಲ್ಲ. ಕೆಲವರು ಅವರನ್ನು ಬದಲಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ. ಅದು ಸಾಧ್ಯವಾಗದ ಮಾತು’ ಎಂದರು.
‘ರಾಜ್ಯದಲ್ಲಿ ಪೊಲೀಸರು ಧರಿಸುವ ಟೋಪಿಯನ್ನು ಬದಲಾಯಿಸಿ, ಸುಧಾರಿತ ಹಾಗೂ ಗೌರವಯುತವಾಗಿ ಕಾಣುವ ಟೋಪಿಯನ್ನು ಅವರಿಗೆ ಕೊಡಬೇಕು. ಈಗಿರುವ ಟೋಪಿ ಭಾರವಾಗಿದೆ. ಅದನ್ನು ಧರಿಸಿದಾಗ ಕಿರಿಕಿರಿ ಜೊತೆಗೆ ಇತರ ಸಮಸ್ಯೆಗಳು ಎದುರಾಗುತ್ತವೆ. ಹಿಂದೆ ಪೊಲೀಸರು ಚಡ್ಡಿ ಧರಿಸುತ್ತಿದ್ದರು. ನಾನು ಶಾಸಕನಾಗಿದ್ದಾಗ, ಚಡ್ಡಿ ಬದಲು ಪ್ಯಾಂಟ್ ನೀಡುವಂತೆ ಒತ್ತಾಯಿಸಿದೆ. ಬಳಿಕ, ಪ್ಯಾಂಟ್ ಚಾಲ್ತಿಗೆ ಬಂತು’ ಎಂದು ನೆನೆದರು.
‘ಪೊಲೀಸರಿಗೆ ಅನುಕೂಲವಾಗುವಂತೆ ಸರ್ಕಾರ ವರ್ಗಾವಣೆ ನೀತಿ ರೂಪಿಸಬೇಕು. ಹತ್ತಾರು ವರ್ಷಗಳಿಂದ ಒಂದೇ ಕಡೆ ಇರುವ ಪೊಲೀಸರು, ತಮ್ಮ ಕುಟುಂಬಗಳನ್ನು ಆಗಾಗ ಭೇಟಿ ಮಾಡಲಾಗದ ಸ್ಥಿತಿ ಇದೆ. ಹಾಗಾಗಿ, ಐದು ವರ್ಷ ಒಂದು ಕಡೆ ಸೇವೆ ಸಲ್ಲಿಸಿದ ಬಳಿಕ, ತವರು ಜಿಲ್ಲೆಗೆ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.
ಹಿಂದಿಗೆ ಅವಕಾಶ ಬೇಡ: ‘ನೆರೆಯ ಮಹಾರಾಷ್ಟ್ರ ಸರ್ಕಾರ ಮರಾಠಿ ಭಾಷೆಗೆ ಆದ್ಯತೆ ನೀಡುವ ಮೂಲಕ, ಹಿಂದಿ ಹೇರಿಕೆಗೆ ವಿರೋಧ ವ್ಯಕ್ತಪಡಿಸಿದೆ. ನಮ್ಮ ರಾಜ್ಯದಲ್ಲೂ ಹಿಂದಿ ಹೇರಿಕೆಗೆ ಅವಕಾಶ ನೀಡಬಾರದು. ಉದ್ಯೋಗದ ವಿಷಯದಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ ನೀಡಬೇಕು’ ಎಂದು ಒತ್ತಾಯಿಸಿದರು.
ಕರುನಾಡ ಸೇನೆ ರಾಜ್ಯ ಉಪಾಧ್ಯಕ್ಷ ಎಂ. ಜಗದೀಶ್ ಐಜೂರು, ಜಿಲ್ಲಾಧ್ಯಕ್ಷ ಸಿ.ಎಸ್. ಜಯಕುಮಾರ್, ತಾಲ್ಲೂಕು ಅಧ್ಯಕ್ಷ ಗಂಗಾಧರ್, ಪದಾಧಿಕಾರಿಗಳಾದ ಕೆ. ಜಯರಾಮ, ಮಂಜುನಾಥ್, ಕೃಷ್ಣಮೂರ್ತಿ, ಭಾಗ್ಯಸುಧಾ, ಕುಮಾರ್, ಪ್ರಸನ್ನ, ಯತೀಶ್, ವಿಜಯಲಕ್ಷ್ಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.