ADVERTISEMENT

ಚನ್ನಪಟ್ಟಣ ನಗರಸಭೆಯಲ್ಲಿ ನಕಲಿ ಖಾತೆ ಆರೋಪ: ಏಳು ಮಂದಿಯ ಸಮಿತಿ ರಚನೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2024, 7:38 IST
Last Updated 10 ಫೆಬ್ರುವರಿ 2024, 7:38 IST
ಚನ್ನಪಟ್ಟಣದ ನಗರಸಭೆ ಕಚೇರಿಯಲ್ಲಿ ಕಡತ ಪರಿಶೀಲಿಸಿದ ಅಧಿಕಾರಿಗಳ ತಂಡ
ಚನ್ನಪಟ್ಟಣದ ನಗರಸಭೆ ಕಚೇರಿಯಲ್ಲಿ ಕಡತ ಪರಿಶೀಲಿಸಿದ ಅಧಿಕಾರಿಗಳ ತಂಡ   

ಚನ್ನಪಟ್ಟಣ: ನಗರಸಭೆಯಲ್ಲಿ ಅಕ್ರಮ ಹಾಗೂ ನಕಲಿ ಖಾತೆ ನಡೆಯುತ್ತಿವೆ. ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂಬ ದೂರು ಕೇಳಿ ಬಂದಿದ್ದರಿಂದ ಪರಿಶೀಲನೆ ನಡೆಸಿ ವರದಿ ಒಪ್ಪಿಸುವಂತೆ ಜಿಲ್ಲಾಧಿಕಾರಿ ರಚಿಸಿರುವ ಏಳು ಮಂದಿಯ ಅಧಿಕಾರಿಗಳ ತಂಡ ಗುರುವಾರ ನಗರಸಭೆ ಕಚೇರಿಗೆ ತೆರಳಿ ಕಡತ ಪರಿಶೀಲಿಸಿತು.

ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶಿವನಂಕಾರಿಗೌಡ ನೇತೃತ್ವದ ತಂಡ ಬೆಳಿಗ್ಗೆ 10 ಗಂಟೆಗೆ ನಗರಸಭೆ ಕಚೇರಿಗೆ ತೆರಳಿ ಸಂಜೆವರೆಗೆ ಕಡತ ಪರಿಶೀಲಿಸಿತು. ಪೌರಾಯುಕ್ತ ಪುಟ್ಟಸ್ವಾಮಿ ಸೇರಿದಂತೆ ಅಲ್ಲಿನ ಅಧಿಕಾರಿಗಳು, ಸಿಬ್ಬಂದಿ ಜೊತೆ ಚರ್ಚೆ ನಡೆಸಿದ ತಂಡ ಹಲವು ಮಾಹಿತಿ ಕಲೆಹಾಕಿತು.

ಸಂಜೆ ನಂತರ ಕಚೇರಿಯಿಂದ ತೆರಳಿದರು. ಆದರೆ ಪರಿಶೀಲನೆ ಬಗ್ಗೆ ಯಾವುದೇ ಮಾಹಿತಿ ಹಂಚಿಕೊಳ್ಳಲು ತಂಡ ನಿರಾಕರಿಸಿತು.

ADVERTISEMENT

ನಗರಸಭೆಯಲ್ಲಿ ಪೌರಾಯುಕ್ತರು ಸೇರಿದಂತೆ ಇತರೆ ಅಧಿಕಾರಿಗಳು, ನೌಕರರು ಅಕ್ರಮ ಖಾತೆ ಮಾಡುತ್ತಿದ್ದಾರೆ. ಕೆಲವು ನಕಲಿ ಖಾತೆಗಳು ನಡೆಯುತ್ತಿವೆ. ನಗರಸಭೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ನಗರಸಭೆ ಅಧ್ಯಕ್ಷ ಪಿ.ಪ್ರಶಾಂತ್, ಸದಸ್ಯರಾದ ಅಭಿದಾಭಾನು, ಕೆ.ಮಂಜುನಾಥ್, ವಾಸಿಲ್ ಆಲಿಖಾನ್, ಸಾರ್ವಜನಿಕರು ಜಿಲ್ಲಾಧಿಕಾರಿಗೆ ಪ್ರತ್ಯೇಕವಾಗಿ ದೂರು ಸಲ್ಲಿಸಿದ್ದರು. ಹಾಗಾಗಿ ಜಿಲ್ಲಾಧಿಕಾರಿ ಏಳು ಮಂದಿಯ ಸಮಿತಿ ರಚಿಸಿದ್ದು, ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.