ಚನ್ನಪಟ್ಟಣ: ಅಬ್ಬೂರು ಗ್ರಾಮದ ವ್ಯಾಸರಾಜ ಮಠ ಐತಿಹಾಸಿಕ ಸ್ಥಳಗಳಲ್ಲಿ ಒಂದು. ಬ್ರಾಹ್ಮಣ ಸಮುದಾಯದ ಆಧ್ಯಾತ್ಮಿಕ ಸ್ಥಳಗಳಲ್ಲಿ ಇದಕ್ಕೊಂದು ವಿಶೇಷ ಸ್ಥಾನಮಾನವಿದೆ. ವಿಜಯನಗರ ಸಾಮ್ರಾಜ್ಯದ ರಾಜಗುರು ವ್ಯಾಸರಾಜರ (ವ್ಯಾಸರಾಯ) ಗುರುವಾಗಿದ್ದ ಬ್ರಾಹ್ಮಣ್ಯತೀರ್ಥರು ಸುಮಾರು 600ಕ್ಕೂ ಹೆಚ್ಚು ವರ್ಷಗಳ ಹಿಂದೆ ಸ್ಥಾಪನೆ ಮಾಡಿರುವ ಈ ಮಠಕ್ಕೆ ಬೃಂದಾವನ ಮಠ ಎಂಬ ಹೆಸರೂ ಇದೆ.
ಈ ಮಠಕ್ಕೆ ಸಂಬಂಧಿಸಿದ ಆಸ್ತಿ ಕುಂದಾಪುರ ಬಳಿ ಇರುವುದರಿಂದ ಇದಕ್ಕೆ ಕುಂದಾಪುರ ವ್ಯಾಸರಾಜಮಠ ಎಂತಲೂ ಕರೆಯಲಾಗುತ್ತದೆ. ಈ ಗ್ರಾಮ ಚನ್ನಪಟ್ಟಣ ತಾಲ್ಲೂಕು ಕೇಂದ್ರದಿಂದ 6 ಕಿಲೋ ಮೀಟರ್ ದೂರದಲ್ಲಿದೆ. ಗ್ರಾಮದ ಬಳಿ ಕಣ್ವ ನದಿ ಹರಿಯುವುದರಿಂದ ಈ ಗ್ರಾಮಕ್ಕೆ ಪ್ರಾಕೃತಿಕ ಸೌಂದರ್ಯ ತಂದುಕೊಟ್ಟಿದೆ.
ಅಬ್ಬೂರಿನವರೆ ಆದ ಬ್ರಾಹ್ಮಣ್ಯತೀರ್ಥರು ಇಲ್ಲಿ ಜೀವಂತ ಸಮಾಧಿಯಾಗಿರುವ ಬೃಂದಾವನ ಇದೆ. ಅವರು ಜೀವಂತ ಸಮಾಧಿಯಾಗಿ 552ವರ್ಷ ಕಳೆದಿದೆ. ಅಲ್ಲಿಂದ ಇಲ್ಲಿಯವರೆಗೂ ಈ ಬೃಂದಾವನಕ್ಕೆ ಪೂಜೆ ಕೈಂಕರ್ಯ ನಡೆಸಿಕೊಂಡು ಬರಲಾಗುತ್ತಿದೆ. ಇದು ಬ್ರಾಹ್ಮಣ ಸಮುದಾಯದರು ಮಾತ್ರ ಪೂಜೆ ಸಲ್ಲಿಸುವ ಸ್ಥಳವಾಗಿರುವುದು ವಿಶೇಷ.
ವ್ಯಾಸರಾಜರು ಹುಟ್ಟಿದ್ದು ಬನ್ನೂರು ಗ್ರಾಮದಲ್ಲಿ. ಅವರ ಬಾಲ್ಯ, ಅಕ್ಷರಭ್ಯಾಸ ಎಲ್ಲವೂ ನಡೆದಿದ್ದು ಬ್ರಾಹ್ಮಣ್ಯತೀರ್ಥರ ಬಳಿ. ವ್ಯಾಸರಾಜರನ್ನು ಚಿಕ್ಕವಯಸ್ಸಿನಲ್ಲಿಯೇ ಮಠಕ್ಕೆ ಕರೆತಂದ ಬ್ರಾಹ್ಮಣ್ಯತೀರ್ಥರು ಅವರಿಗೆ ಎಲ್ಲ ವಿದ್ಯೆ ಧಾರೆ ಎರೆದರು. ಇದಕ್ಕೆ ಬ್ರಾಹ್ಮಣತೀರ್ಥರ ಸಹೋದರ ಕೀರ್ತನಾಕಾರ ಶ್ರೀಪಾದರಾಜರು ಸಹ ಕೈಜೋಡಿಸಿದ್ದರು.
ಮಠವನ್ನು ಬ್ರಾಹ್ಮಣ್ಯತೀರ್ಥರು ಸ್ಥಾಪನೆ ಮಾಡಿದ್ದರೂ ವ್ಯಾಸರಾಜರ ಹೆಸರು ವಿಜಯನಗರ ರಾಜವಂಶದ ಜತೆ ಚಾಲ್ತಿಗೆ ಬಂದಿದ್ದರಿಂದ ಈ ಮಠಕ್ಕೆ ವ್ಯಾಸರಾಜ ಮಠ ಎಂತಲೇ ಹೆಸರು ಪ್ರಸಿದ್ಧಿಗೆ ಬಂದಿದೆ ಎನ್ನುವುದು ಇಲ್ಲಿಯ ಪ್ರಧಾನ ಅರ್ಚಕ ಬದ್ರೀನಾಥಾಚಾರ್ಯ ಅವರ ಅಭಿಪ್ರಾಯ.
ವ್ಯಾಸರಾಜರು ವಿಜಯನಗರ ಸಾಮ್ರಾಜ್ಯ ಸಮಯದಲ್ಲಿ ದಾಸಕೂಟ ಆರಂಭಿಸಿದ್ದರು. ದಾಸಕೂಟದ ಪ್ರಮುಖ ಕೀರ್ತನಾಕಾರರಾದ ಪುರಂದರದಾಸ, ಕನಕದಾಸ ಸೇರಿದಂತೆ ಹಲವು ದಾಸರು ಆ ಕಾಲದಲ್ಲಿ ವ್ಯಾಸರಾಜರ ಜತೆ ಈ ಮಠಕ್ಕೆ ಭೇಟಿ ನೀಡಿದ್ದರು ಎನ್ನುವ ಪ್ರತೀತಿ ಇದೆ. ಪುರಂದರದಾಸರು ಈ ಮಠಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ತಾಲ್ಲೂಕಿನ ಮಳೂರು ಅಪ್ರಮೇಯಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿರುವ ನವನೀತ ಕೃಷ್ಣನಮೂರ್ತಿಯಿಂದ ಪ್ರಭಾವಿತರಾಗಿ ‘ಆಡಿಸಿದಳೆ ಶೋಧೆ ಜಗದೋದ್ಧಾರನ....'ಎನ್ನುವ ಕೀರ್ತನೆ ಬರೆದರು.
ವಿಜಯನಗರ ಸಾಮ್ರಾಜ್ಯದ ಕಾಲದಿಂದಲೂ ಪ್ರಸಿದ್ಧಿಯಾಗಿರುವ ಈ ಮಠದಲ್ಲಿ ಬ್ರಾಹ್ಮಣ್ಯತೀರ್ಥರ ಸಮಾಧಿಸ್ಥ ಬೃಂದಾವನವಿದೆ. ಅವರ ನಂತರ ತೀರ್ಥರಾಗಿ ಬಂದ ಕೆಲ ಗುರುಗಳ ಸಮಾಧಿಸ್ಥ ಬೃಂದಾವನಗಳಿವೆ. ಇವರಲ್ಲಿ ಲಕ್ಷೀಪತಿ ತೀರ್ಥರು, ಲಕ್ಷ್ಮಿನಾರಾಯಣ ತೀರ್ಥರು, ರಘುನಾಥ ತೀರ್ಥರು, ಲಕ್ಷ್ಮಿ ಮುನೇಶ್ವರ ತೀರ್ಥರು, ಲಕ್ಷೀಧರ ತೀರ್ಥರು, ಲಕ್ಷ್ಮಿರಮಣ ತೀರ್ಥರು, ಲಕ್ಷ್ಮಿಪ್ರಿಯ ತೀರ್ಥರು, ಲಕ್ಷ್ಮೀಶ ತೀರ್ಥರು, ಲಕ್ಷ್ಮಿನರಸಿಂಹ ತೀರ್ಥರ ಬೃಂದಾವನಗಳಿವೆ. ಇವರೆಲ್ಲರೂ ಜೀವಂತ ಸಮಾಧಿಯಾಗಿದ್ದಾರೆ ಎನ್ನುತ್ತಾರೆ ಎಂದು ಅರ್ಚಕ ಬದ್ರೀನಾಥಾಚಾರ್ಯ.
ಪ್ರತಿವರ್ಷ ಮೇ ತಿಂಗಳಿನಲ್ಲಿ ಇಲ್ಲಿ ಬ್ರಾಹ್ಮಣ್ಯತೀರ್ಥರ ಆರಾಧನಾ ಮಹೋತ್ಸವ ನಡೆಯುತ್ತದೆ. ಮೂರು ದಿನಗಳ ಕಾಲ ನಡೆಯುವ ಮಹೋತ್ಸವದಲ್ಲಿ ಪಂಚಾಮೃತ ಅಭಿಷೇಕ, ಪ್ರವಚನ, ಜಾಗರಣೆ, ಅಲಂಕಾರ ಪಂಕ್ತಿ, ತೀರ್ಥ ಪ್ರಸಾದ ವಿತರಣೆ ನಡೆಯುತ್ತದೆ. ಈ ಕಾರ್ಯಕ್ರಮಕ್ಕೆ ತಮಿಳುನಾಡು, ಆಂಧ್ರಪ್ರದೇಶ, ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳು, ಬೆಂಗಳೂರು, ಮೈಸೂರುಗಳಿಂದ ಬ್ರಾಹ್ಮಣರು ಬರುತ್ತಾರೆ. ಮಾರ್ಚ್ ತಿಂಗಳಿನಲ್ಲಿ ವ್ಯಾಸರಾಜ ಆರಾಧನೆ ನಡೆಯುತ್ತದೆ. ಬ್ರಾಹ್ಮಣ್ಯತೀರ್ಥರಿಗೆ ಪೂರ್ವಾರಾಧನೆ, ಮಧ್ಯಾರಾಧನೆ, ಉತ್ತರಾರಾಧನೆ ನಡೆಯಲಿದೆ ಎಂದು ಅರ್ಚಕ ವಾಸುದೇವ ತಿಳಿಸಿದರು.
ವಿಜಯನಗರ ಸಾಮ್ರಾಜ್ಯಕ್ಕೆ ವ್ಯಾಸರಾಜರನ್ನು ರಾಜಗುರುವನ್ನಾಗಿ ಕೊಡುಗೆ ನೀಡಿದ ಕೀರ್ತಿ ಅಬ್ಬೂರು ಗ್ರಾಮಕ್ಕಿದೆ. ಇದು ಚನ್ನಪಟ್ಟಣ ತಾಲ್ಲೂಕಿನ ಕಳಸವಿದ್ದಂತೆ. ಈ ಗ್ರಾಮದ ಬಗ್ಗೆ ಸಂಶೋಧನೆ ನಡೆದರೆ ಮತ್ತಷ್ಟು ಐತಿಹಾಸಿಕ ವಿಷಯ ಬೆಳಕಿಗೆ ಬರಲಿದೆ ಎನ್ನುವುದು ಉಪನ್ಯಾಸಕರಾದ ಎ.ಎಂ.ಮಹೇಶ್, ವಿಜಯ್ ರಾಂಪುರ, ಅಬ್ಬೂರು ಶ್ರೀನಿವಾಸ, ಸ್ವಯಂಸೇವಕ ರಾಜೀವ್, ಯುವ ಮುಖಂಡ ಚೇತನ್ ಅವರ ಅಭಿಪ್ರಾಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.