ADVERTISEMENT

ರಾಮನಗರ | ಕನ್ನಡ ಜ್ಯೋತಿ ರಥಯಾತ್ರೆ ಅದ್ದೂರಿ ಸ್ವಾಗತಕ್ಕೆ ಸೂಚನೆ

ಆ. 13ರಿಂದ ಸಂಚರಿಸುವ ರಥಯಾತ್ರೆ: ತಹಶೀಲ್ದಾರರು, ಕನ್ನಡಪರ ಮುಖಂಡರೊಂದಿಗೆ ಎಡಿಸಿ ಸಭೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 15:12 IST
Last Updated 25 ಜುಲೈ 2024, 15:12 IST
ರಾಮನಗರದ ಹೆಚ್ಚುವರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕನ್ನಡ ಜ್ಯೋತಿ ರಥಯಾತ್ರೆ ಕುರಿತು, ಎಡಿಸಿ ಚಂದ್ರಯ್ಯ ಅವರು ಕನ್ನಡಪರ ಸಂಘಟನೆಗಳ ಮುಖಂಡರೊಂದಿಗೆ ಚರ್ಚಿಸಿದರು
ರಾಮನಗರದ ಹೆಚ್ಚುವರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕನ್ನಡ ಜ್ಯೋತಿ ರಥಯಾತ್ರೆ ಕುರಿತು, ಎಡಿಸಿ ಚಂದ್ರಯ್ಯ ಅವರು ಕನ್ನಡಪರ ಸಂಘಟನೆಗಳ ಮುಖಂಡರೊಂದಿಗೆ ಚರ್ಚಿಸಿದರು   

ರಾಮನಗರ: ‘ಕನ್ನಡ ಜ್ಯೋತಿ ರಥಯಾತ್ರೆಯು ಜಿಲ್ಲೆಯಲ್ಲಿ ಆ. 13ರಿಂದ 17ರವರೆಗೆ ಸಂಚರಿಸಲಿದೆ. ಆ ಸಂದರ್ಭದಲ್ಲಿ ರಥಯಾತ್ರೆಗೆ ಅದ್ದೂರಿ ಸ್ವಾಗತ ಕೋರಬೇಕಿದೆ. ಹಾಗಾಗಿ, ರಥಯಾತ್ರೆ ಸಂಚರಿಸುವ ಮಾರ್ಗಗಳಲ್ಲಿ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಚಂದ್ರಯ್ಯ ಅವರು ತಹಶೀಲ್ದಾರರಿಗೆ ಸೂಚನೆ ನೀಡಿದರು.

ರಥಯಾತ್ರೆ ಸ್ವಾಗತಿಸುವ ಕುರಿತು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಮೈಸೂರು ರಾಜ್ಯವು ಕರ್ನಾಟಕ ಎಂದು ಮರುನಾಮಕರಣವಾಗಿ 2023ರ ನ. 1ಕ್ಕೆ ಐವತ್ತು ವರ್ಷ ಪೂರ್ಣಗೊಂಡಿದೆ. ಈ ಶುಭ ಸಂದರ್ಭದ ಪ್ರಯುಕ್ತ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿದೆ’ ಎಂದರು.

‘ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಎಂಬ ಘೋಷವಾಕ್ಯದಡಿ ರಾಜ್ಯದ ಇತಿಹಾಸ, ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ನಾಡು-ನುಡಿಯ ಹಿರಿಮೆಯನ್ನು ಜನರಿಗೆ ತಿಳಿಸುವ ಕೆಲಸವಾಗಬೇಕು. ಯುವಜನರಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕದ ಕುರಿತು ಅಭಿಮಾನ ಮತ್ತು ಅರಿವು ಮೂಡಿಸುವ ಯೋಜನೆಗಳನ್ನು ರೂಪಿಸಬೇಕು’ ಎಂದು ಹೇಳಿದರು.

ADVERTISEMENT

‘ರಥಯಾತ್ರೆಯು ಆ. 13ರಂದು ಮಾಗಡಿ, 14ಕ್ಕೆ ರಾಮನಗರ, 15ಕ್ಕೆ ಹಾರೋಹಳ್ಳಿ, 16ಕ್ಕೆ ಕನಕಪುರ ಹಾಗೂ 17ರಂದು ಚನ್ನಪಟ್ಟಣಕ್ಕೆ ಬರಲಿದೆ. ಆ ನಿಟ್ಟಿನಲ್ಲಿ ಜನಪ್ರತಿನಿಧಿಗಳು, ಶಾಲಾ ಶಿಕ್ಷಣ ಇಲಾಖೆ ಹಾಗೂ ಕನ್ನಡಪರ ಸಂಘಟನೆಗಳ ಸಹಯೋಗದಲ್ಲಿ ಪೂರ್ವಭಾವಿ ಸಭೆ ನಡೆಸಬೇಕು. ರಥಯಾತ್ರೆಗೆ ಯಾವುದೇ ಸಮಸ್ಯೆಗಳು ಅಡ್ಡಿಯಾಗದಂತೆ ತಹಶೀಲ್ದಾರರು ಎಚ್ಚರಿಕೆ ವಹಿಸಬೇಕು’ ಎಂದು ತಿಳಿಸಿದರು.

‘ರಥವು ನಗರದಲ್ಲಿ ಸಂಚರಿಸುವ ಮಾರ್ಗವನ್ನು ಮೊದಲೇ ಸಿದ್ಧಪಡಿಸಿ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ರಥಯಾತ್ರೆ ಬಂದಾಗ ಅದ್ದೂರಿಯಾಗಿ ಬರ ಮಾಡಿಕೊಂಡು ಬೀಳ್ಕೋಡಬೇಕು. ಈ ವೇಳೆ ಖುದ್ದು ತಹಶೀಲ್ದಾರರು ಹಾಜರಿದ್ದು, ಯಾವುದೇ ಲೋಪದೋಷಗಳು ಆಗದಂತೆ ನೋಡಿಕೊಳ್ಳಬೇಕು. ನಂತರ ಜಿಲ್ಲಾಧಿಕಾರಿ ಕಚೇರಿಗೆ ವರದಿ ಸಲ್ಲಿಸಬೇಕು’ ಎಂದು ನಿರ್ದೇಶನ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್ ಬಾಬು, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗೇಶ್ ಬಿ.ಟಿ, ಕನ್ನಡ ಪರ ಸಂಘಟನೆಗಳ ಮುಖ್ಯಸ್ಥರಾದ ರಾಜು, ರವಿ, ಶಿವು, ಜಗದೀಶ್, ಮಾದೇಗೌಡ, ಕಿರಣ್, ಜಯಕುಮಾರ್ ಹಾಗೂ ಇತರರು ಸಭೆಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.