ಚನ್ನಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಅಗ್ನಿ ಬನ್ನಿರಾಯಸ್ವಾಮಿ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ತಹಶೀಲ್ದಾರ್ ನರಸಿಂಹಮೂರ್ತಿ ಪುಷ್ಪನಮನ ಸಲ್ಲಿಸಿದರು. ತಾಲ್ಲೂಕು ತಿಗಳ ಸಮಾಜದ ಅಧ್ಯಕ್ಷ ಹುಣಸನಹಳ್ಳಿ ಕೃಷ್ಣಪ್ಪ, ಇತರರು ಹಾಜರಿದ್ದರು
ಚನ್ನಪಟ್ಟಣ: ತಿಗಳ ಸಮುದಾಯದ ಆರಾಧ್ಯ ದೈವ ಅಗ್ನಿ ಬನ್ನಿ ರಾಯಸ್ವಾಮಿ. ಅವರ ತತ್ವಾದರ್ಶವನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಹಶೀಲ್ದಾರ್ ನರಸಿಂಹಮೂರ್ತಿ ಕಿವಿ ಮಾತು ಹೇಳಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ ವತಿಯಿಂದ ಶುಕ್ರವಾರ ನಡೆದ ಅಗ್ನಿ ಬನ್ನಿ ರಾಯಸ್ವಾಮಿ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಹಿಂದೂ ಧರ್ಮದ 18 ಪುರಾಣಗಳಲ್ಲಿ ಅಗ್ನಿ ಬನ್ನಿರಾಯರ ಮಹಿಮೆಯನ್ನು ವರ್ಣಿಸಲಾಗಿದೆ. ತಿಗಳ ಸಮುದಾಯದ ಮೂಲ ಪುರುಷರಾಗಿರುವ ಅಗ್ನಿ ಬನ್ನಿರಾಯರ ಜೀವನ ಸಂದೇಶಗಳು ಸಮ ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ತಿಗಳ ಸಮುದಾಯದ ಜನರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ತರಬೇಕು ಎಂದರು.
ತಾಲ್ಲೂಕು ತಿಗಳ ಸಮಾಜದ ಅಧ್ಯಕ್ಷ ಹುಣಸನಹಳ್ಳಿ ಕೃಷ್ಣಪ್ಪ ಮಾತನಾಡಿ, ತಿಗಳ ಸಮಾಜದ ಜನ ಸಂಘಟಿತರಾಗಬೇಕಾಗಿದೆ. ಕೃಷಿಯನ್ನೇ ನಂಬಿ ಬದುಕುತ್ತಿರುವ ತಿಗಳ ಸಮುದಾಯ ರಾಜಕೀಯ, ಶೈಕ್ಷಣಿಕವಾಗಿ ಬಹಳಷ್ಟು ಹಿಂದೆ ಉಳಿದಿದೆ. ಈ ಕ್ಷೇತ್ರಗಳಲ್ಲಿ ಮುಂದೆ ಬರಲು ಒಗ್ಗಟ್ಟು ಅತಿ ಮುಖ್ಯವಾಗಿದೆ. ಸಮುದಾಯದ ಆರಾಧ್ಯ ದೈವ ಅಗ್ನಿ ಬನ್ನಿ ರಾಯಸ್ವಾಮಿ ಜಯಂತಿಯನ್ನು ತಾಲ್ಲೂಕು ಆಡಳಿತದ ವತಿಯಿಂದ ಆಚರಿಸುತ್ತಿರುವುದು ಸಂತಸದ ವಿಷಯ ಎಂದು ತಿಳಿಸಿದರು.
ಶಿಕ್ಷಣ ಸಂಯೋಜಕ ಯೋಗೇಶ್ ಚಕ್ಕೆರೆ, ತಿಗಳ ಸಮಾಜದ ಕಾರ್ಯದರ್ಶಿ ತಿಮ್ಮಪ್ಪ, ಗ್ರೇಡ್ 2 ತಹಶೀಲ್ದಾರ್ ಲಕ್ಷ್ಮಿದೇವಮ್ಮ, ಶಿರಸ್ತೇದಾರ್ ಹರೀಶ್ ಕುಮಾರ್, ಸಮುದಾಯದ ಮುಖಂಡರಾದ ಸುಧಾ ರಾಜು, ನಾಗಾಪುರ ನರಸಿಂಹ, ಈಶ್ವರ್, ಹುಣಸನಹಳ್ಳಿ ಶ್ರೀನಿವಾಸ್, ಮೂರ್ತಿ, ಮುತ್ತುರಾಜು, ಶಿವರಾಜು, ಗುರುರಾಜಯ್ಯ, ಅಶೋಕ್, ಕಾವೇರಿ, ಸಿದ್ದರಾಮಯ್ಯ, ವಿವಿಧ ಇಲಾಖೆಗಳ ಅಧಿಕಾರಿ ವರ್ಗ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.