ರಾಮನಗರ: ‘ರಸಗೊಬ್ಬರ ಕುರಿತಂತೆ ಯಾವುದೇ ದೂರುಗಳು ಬಾರದಂತೆ ಹಾಗೂ ಕಳಪೆ ಗುಣಮಟ್ಟದ ಪರಿಕರಗಳು ವಿತರಣೆಯಾಗದಂತೆ ಕ್ರಮ ವಹಿಸಬೇಕು. ಪಿಒಎಸ್ ಮೆಷಿನ್‌ಗಳ ಮೂಲಕವೇ ಸರಬರಾಜು ಮಾಡಬೇಕು. ಡಿಎಪಿ ಹಾಗೂ ಯೂರಿಯಾ ರಸಗೊಬ್ಬರ ಬಳಕೆ ಕುರಿತಂತೆ ಪರ್ಯಾಯ ರಸಗೊಬ್ಬರಗಳ ಬಳಕೆ ಬಗ್ಗೆಯೂ ಪ್ರಚಾರ ನೀಡಿ, ರೈತರಲ್ಲಿ ಅರಿವು ಮೂಡಿಸಬೇಕು’ ಎಂದು ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ‘ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಗೆ ಸಂಬಂಧಿಸಿದಂತೆ ಪ್ರಚಾರ ಕೈಗೊಂಡು ರೈತರಿಗೆ ಅರಿವು ಮೂಡಿಸಿ ಹೆಚ್ಚಿನ ರೈತರು ನೋಂದಾಯಿಸುವಂತೆ ಕ್ರಮ ಕೈಗೊಳ್ಳಬೇಕು’ ಎಂದರು.
‘ಬೆಳೆ ಸಮೀಕ್ಷೆ ಯೋಜನೆಯಡಿ ತರಬೇತಿಗಳನ್ನು ಆಯೋಜಿಸಿ ಎಲ್ಲಾ ತಾಲ್ಲೂಕುಗಳಲ್ಲಿ ಬೆಳೆ ಸಮೀಕ್ಷೆಯನ್ನು ಕಡ್ಡಾಯವಾಗಿ ಕೈಗೊಳ್ಳಬೇಕು. ಪ್ರಧಾನಮಂತ್ರಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ನೀರಿನ ಸದ್ಭಳಕೆಗಾಗಿ ಉತ್ತಮ ಗುಣಮಟ್ಟದ ತುಂತುರು/ಹನಿ ನೀರಾವರಿ ಘಟಕಗಳನ್ನು ಪಾರದರ್ಶಕವಾಗಿ ರೈತರಿಗೆ ವಿತರಿಸಬೇಕು’ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
‘ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ-ಜಲಾನಯನ ಅಭಿವೃದ್ಧಿ ಘಟಕ 2.0 ಯೋಜನೆಯಡಿ ಮಣ್ಣು ಮತ್ತು ನೀರು ಸಂಗ್ರಹಣಾ ಕಾಮಗಾರಿಗಳನ್ನು ಕೈಗೊಳ್ಳಲು ಹೆಚ್ಚಿನ ಪ್ರಚಾರ ನೀಡಿ ಕಾರ್ಯಕ್ರಮ ಅನುಷ್ಠಾನ ಮಾಡಬೇಕು. ಇದರಿಂದಾಗಿ ಯೋಜನೆ ಕುರಿತು ರೈತರಲ್ಲಿ ಜಾಗೃತಿ ಮೂಡಲಿದ್ದು, ಸೌಲಭ್ಯ ಪಡೆಯು ಮುಂದೆ ಬರುತ್ತಾರೆ’ ಎಂದರು.
ಡಿಎಪಿ ಪರ್ಯಾಯ ರಸಗೊಬ್ಬರ ಬಳಕೆ ಕುರಿತು, ಬೆಳೆ ಸಮೀಕ್ಷೆ, ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಗಳ ಮಾಹಿತಿ ಒಳಗೊಂಡ ಪೋಸ್ಟರ್‌ಗಳನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನ್ಮೋಲ್ ಜೈನ್, ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ, ಜಂಟಿ ಕೃಷಿ ನಿರ್ದೇಶಕಿ ಅಂಬಿಕಾ ಎನ್., ಉಪ ನಿರ್ದೇಶಕರು, ಎಲ್ಲಾ ಅಭಿವೃದ್ಧಿ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು, ಜಿಲ್ಲೆಯ ರಸಗೊಬ್ಬರ ಮಾರಾಟಗಾರರು, ಸಣ್ಣ ನೀರಾವರಿ ಮತ್ತು ಜಲಸಂಪನ್ಮೂಲ ಇಲಾಖೆ ಮುಖ್ಯಸ್ಥರು, ನಬಾರ್ಡ್ ಸಂಸ್ಥೆಯ ಮುಖ್ಯಸ್ಥರು, ಕೃಷಿ ಪರಿಕರ ಸರಬರಾಜುದಾರರು, ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಹಾಗೂ ಇತರ ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.