ADVERTISEMENT

ಅಂಬೇಡ್ಕರ್‌ ಸಮಾಜ ಸುಧಾರಕ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2021, 3:11 IST
Last Updated 15 ಏಪ್ರಿಲ್ 2021, 3:11 IST
ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮದಲ್ಲಿ ಕೊರೊನಾ ವಾರಿಯರ್ಸ್‌ಗಳನ್ನು ಸನ್ಮಾನಿಸಲಾಯಿತು
ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮದಲ್ಲಿ ಕೊರೊನಾ ವಾರಿಯರ್ಸ್‌ಗಳನ್ನು ಸನ್ಮಾನಿಸಲಾಯಿತು   

ಕನಕಪುರ: ‘ಅಂಬೇಡ್ಕರ್‌ ಅವರು ಈ ದೇಶದಲ್ಲಿ ಜನ್ಮ ತಾಳದಿದ್ದರೆ ಶೋಷಿತ ಸಮುದಾಯಗಳ ಸ್ಥಿತಿ ಇಂದಿಗೂ ಭೀಕರವಾಗಿರುತ್ತಿತ್ತು. ಸಮಾಜದಲ್ಲಿ ದೊಡ್ಡ ಕಂದಕವೇ ಸೃಷ್ಟಿಯಾಗಿರುತ್ತಿತ್ತು. ಅದನ್ನು ಊಹಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ’ ಎಂದು ವಿಧಾನ ಪರಿಷತ್‌ ಸದಸ್ಯ ಎಸ್‌. ರವಿ ಹೇಳಿದರು.

ಇಲ್ಲಿನ ಅರ್ಕಾವತಿ ನದಿ ದಡದಲ್ಲಿರುವ ನೂತನ ಅಂಬೇಡ್ಕರ್‌ ಭವನದಲ್ಲಿ ತಾಲ್ಲೂಕು ಆಡಳಿತದಿಂದ ನಡೆದ ಡಾ.ಬಿ.ಆರ್‌. ಅಂಬೇಡ್ಕರ್‌ ಜಯಂತಿಯಲ್ಲಿ ಮಾತನಾಡಿದರು.

ಸಮಾಜದ ಬದಲಾವಣೆಗಾಗಿ ಹಲವಾರು ಮಹನೀಯರು ಶ್ರಮಿಸಿದ್ದಾರೆ. ಬುದ್ಧ, ಬಸವ ಸಮಾಜದಲ್ಲಿ ಸಮಾನತೆ ಮೂಡಿಸಲು ಹೊಸ ಕ್ರಾಂತಿಯನ್ನೇ ಮಾಡಿದ್ದಾರೆ. ಅಂಬೇಡ್ಕರ್‌ ಅವರು ಸಂವಿಧಾನಬದ್ಧವಾಗಿ ಕಾನೂನಿನ ಚೌಕಟ್ಟಿನಲ್ಲಿ ಸಮಾಜದಲ್ಲಿ ಸಮಾನತೆ ಮೂಡಿಸಿದ್ದಾರೆ. ತುಳಿತಕ್ಕೆ ಒಳಗಾದವರ ಉದ್ಧಾರಕ್ಕಾಗಿಯೇ ಈ ದೇಶದಲ್ಲಿ ಜನಿಸಿದ್ದಾರೆ ಎಂದು ತಿಳಿಸಿದರು.

ADVERTISEMENT

ಅಂಬೇಡ್ಕರ್‌ ತಮ್ಮ ಜ್ಞಾನ ಚಿಂತನೆಯಿಂದ ಭಾರತ ದೇಶದಲ್ಲಿ ಮಾತ್ರವಲ್ಲದೆ ವಿಶ್ವಮಟ್ಟದ ನಾಯಕರಾಗಿದ್ದಾರೆ. ಸಮಾಜ ಸುಧಾರಕರಾಗಿದ್ದಾರೆ. ಅಂತಹ ವ್ಯಕ್ತಿಯನ್ನು ಪಡೆದ ನಾವೇ ಧನ್ಯರಾಗಿದ್ದು, ಅವರು ತೋರಿರುವ ದಾರಿಯಲ್ಲಿ ಸಾಗಿ ಅವರು ಕಂಡ ಕನಸನ್ನು ನನಸು ಮಾಡೋಣ ಎಂದರು.

ತಹಶೀಲ್ದಾರ್‌ ವಿ.ಆರ್‌. ವಿಶ್ವನಾಥ್‌ ಮಾತನಾಡಿ, ಸಮಾಜದಲ್ಲಿ ಹಿಂದೆ ಇದ್ದ ಕಟ್ಟುಪಾಡುಗಳು, ಅನಿಷ್ಟ ಆಚರಣೆ, ಜಾತಿ ಹೆಸರಿನಲ್ಲಿ ನಡೆಯುತ್ತಿದ್ದ ದೌರ್ಜನ್ಯಗಳನ್ನೆಲ್ಲಾ ತೊಲಗಿಸಿ ಸಮ ಸಮಾಜ ಮಾಡಬೇಕೆಂದು ಅಂಬೇಡ್ಕರ್‌ ಅವರು ಸಂವಿಧಾನದಡಿ ಪ್ರತಿಯೊಬ್ಬರಿಗೂ ನ್ಯಾಯ ದೊರಕಿಸಿಕೊಡುವ ಪ್ರಯತ್ನ ಮಾಡಿದ್ದಾರೆ ಎಂದು ಹೇಳಿದರು.

ವಿಶ್ವದಲ್ಲೇ ಶ್ರೇಷ್ಠವಾದ ಸಂವಿಧಾನ ಕೊಟ್ಟಿದ್ದಾರೆ. ಅದರಡಿ ನಾವೆಲ್ಲಾ ಒಟ್ಟಾಗಿ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕಿದೆ ಎಂದು ತಿಳಿಸಿದರು.

ಕೊರೊನಾ ವಾರಿಯರ್ಸ್‌ ಆಗಿ ಕೆಲಸ ಮಾಡಿದ ಹಾಗೂ ಸಮಾಜದ ಕಟ್ಟಕಡೆಯ ವ್ಯಕ್ತಿಗಳನ್ನು ಗುರುತಿಸಿ ಸನ್ಮಾನಿಸಲಾಯಿತು. ತಾಲ್ಲೂಕು ಪಂಚಾಯಿತಿ ಇಒ ಮಧು ಎಲ್.‌, ಬಿಇಒ ಜೆ.ಎಂ. ಜಯಲಕ್ಷ್ಮಿ, ಸಿಡಿಪಿಒ ಮಂಜುನಾಥ್‌, ಸಮಾಜ ಕಲ್ಯಾನ ಇಲಾಖೆ ಅಧಿಕಾರಿ ಜೈ ಪ್ರಕಾಶ್‌, ನಗರಸಭೆ ಅಧ್ಯಕ್ಷ ಮಕ್ಬುಲ್‌, ಉಪಾಧ್ಯಕ್ಷ ಗುಂಡಪ್ಪ, ಪೌರಾಯುಕ್ತ ರಾಘವೇಂದ್ರ, ಸರ್ಕಲ್‌ ಇನ್‌ಸ್ಪೆಕ್ಟರ್‌ ಟಿ.ಟಿ. ಕೃಷ್ಣ, ನಗರಸಭೆ ಸದಸ್ಯರು, ಕನ್ನಡ ಪರ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.