ADVERTISEMENT

ರಾಮನಗರ | ಪಶುಪಾಲನಾ ಇಲಾಖೆ: ಶೇ 56 ಸಿಬ್ಬಂದಿ ಕೊರತೆ!

ಚರ್ಮಗಂಟು ರೋಗ ಉಲ್ಬಣ: ಲಸಿಕೆ ಕಾರ್ಯ ಚುರುಕು

ಆರ್.ಜಿತೇಂದ್ರ
Published 12 ಅಕ್ಟೋಬರ್ 2022, 4:06 IST
Last Updated 12 ಅಕ್ಟೋಬರ್ 2022, 4:06 IST

ರಾಮನಗರ: ಜಿಲ್ಲೆಯಲ್ಲಿ ಜಾನುವಾರುಗಳಿಗೆ ಚರ್ಮಗಂಟು ರೋಗಬಾಧೆಯು ಕ್ರಮೇಣ ಹೆಚ್ಚುತ್ತಿದ್ದು, ಲಸಿಕೆ ಕಾರ್ಯ ನಡೆದಿದೆ. ಆದರೆ ಸಕಾಲಕ್ಕೆ ಚಿಕಿತ್ಸೆ–ಲಸಿಕೆ ನೀಡಲು ಪಶುಪಾಲನಾ ಇಲಾಖೆಗೆ ಸಿಬ್ಬಂದಿಯದ್ದೇ ಕೊರತೆಯಾಗಿದೆ.

ಇಲಾಖೆಯಲ್ಲಿ ಜಿಲ್ಲೆಗೆ ಒಟ್ಟು 470 ಅಧಿಕಾರಿ– ಸಿಬ್ಬಂದಿ ಹುದ್ದೆಗಳು ಮಂಜೂರಾಗಿವೆ. ಈ ಪೈಕಿ ಸದ್ಯ 212 ಮಂದಿಯಷ್ಟೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಅದರಲ್ಲಿಯೂ ಪಶುವೈದ್ಯರ ಕೊರತೆ ಹೆಚ್ಚಿದ್ದು, 2–3 ಆಸ್ಪತ್ರೆಗೆ ಒಬ್ಬರು ವೈದ್ಯರಂತೆ ಪಾಳಿ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಕನಕಪುರ ತಾಲ್ಲೂಕು ಒಂದರಲ್ಲಿಯೇ 12 ಪಶುವೈದ್ಯ ಹುದ್ದೆಗಳು ಖಾಲಿ ಇವೆ. ಹೀಗಾಗಿ ಸಕಾಲಕ್ಕೆ ಸೇವೆ ತಲುಪಿಸುವುದು ಅವರಿಗೂ ಸವಾಲಾಗಿದೆ. ಡಿ ಗ್ರೂಪ್‌ ನೌಕರರು ಸೇರಿದಂತೆ ಇಲಾಖೆಯ ಎಲ್ಲ ಹಂತಗಳಲ್ಲಿಯೂ ಸಿಬ್ಬಂದಿ ಕೊರತೆ ಕಾಡುತ್ತಿದೆ.

‘ಕೆಲವು ಕಡೆ ನಾವೇ ಆಸ್ಪತ್ರೆಯ ಬಾಗಿಲು ತೆರೆದು, ಕಸ ಗುಡಿಸಿ ಸ್ವಚ್ಛಗೊಳಿಸಿ ಚಿಕಿತ್ಸೆ ನೀಡುತ್ತಿದ್ದೇವೆ. ಒಂದೇ ದಿನ 2–3 ಆಸ್ಪತ್ರೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸಬೇಕಿದೆ. ರೈತರಿಗೆ ಇದೆಲ್ಲ ಮನವರಿಕೆ ಆಗದು. ಸಕಾಲಕ್ಕೆ ಸೇವೆ ನೀಡದಿದ್ದರೆ ಸಿಟ್ಟಾಗುತ್ತಾರೆ. ನಮ್ಮ ಮಿತಿಯಲ್ಲಿ ಶಕ್ತಿಮೀರಿ ಸೇವೆ ನೀಡುತ್ತಿದ್ದೇವೆ’ ಎಂದು ಇಲಾಖೆಯ ವೈದ್ಯರೊಬ್ಬರು ಅಳಲು ತೋಡಿಕೊಂಡರು.

ADVERTISEMENT

ಚರ್ಮಗಂಟು ರೋಗದ ಭೀತಿ: ಜಿಲ್ಲೆಯಲ್ಲಿ ಚರ್ಮಗಂಟು ರೋಗ ಬಾಧೆಯು ದಿನದಿಂದ ದಿನಕ್ಕೆ ಉಲ್ಬಣ ಆಗುತ್ತಿದೆ. ಮಂಗಳವಾರದ ಅಂತ್ಯಕ್ಕೆ ಜಿಲ್ಲೆಯಲ್ಲಿ ನಾಲ್ಕು ಜಾನುವಾರುಗಳು ಈ ರೋಗದಿಂದ ಪ್ರಾಣ ಕಳೆದುಕೊಂಡಿವೆ. ಒಟ್ಟು 24 ಗ್ರಾಮಗಳಲ್ಲಿ ಈ ರೋಗ ಹಬ್ಬಿದ್ದು, 69 ರಾಸುಗಳಲ್ಲಿ ರೋಗ ಕಾಣಿಸಿಕೊಂಡಿವೆ. ಇದರಲ್ಲಿ 14 ಜಾನುವಾರುಗಳು ಈಗಾಗಲೇ ಚೇತರಿಸಿಕೊಂಡಿವೆ.

ಇಲಾಖೆ ವತಿಯಿಂದ ಈಗಾಗಲೇ ಲಸಿಕೆ ಕಾರ್ಯ ಆರಂಭಿಸಲಾಗಿದ್ದು, ಈವರೆಗೆ 5800 ಡೋಸ್‌ನಷ್ಟು ಲಸಿಕೆ ನೀಡಲಾಗಿದೆ. ಇದೇ 15ರ ವೇಳೆಗೆ 20 ಸಾವಿರ ಡೋಸ್‌ನಷ್ಟು ಲಸಿಕೆ ಪೂರೈಕೆ ಆಗುವ ನಿರೀಕ್ಷೆ ಇದೆ.

ಒಟ್ಟು 2.87 ಲಕ್ಷ ಡೋಸ್‌ಗೆ ಬೇಡಿಕೆ ಇದ್ದು, ಹಂತಹಂತವಾಗಿ ಪೂರೈಕೆ ಆಗಲಿದೆ.

ನವೆಂಬರ್‌ನಲ್ಲಿ ಕಾಲುಬಾಯಿ ಜ್ವರ ಲಸಿಕೆ ಕಾರ್ಯಕ್ರಮ
ಕಾಲುಬಾಯಿ ಜ್ವರ ಲಸಿಕೆ ಕಾರ್ಯಕ್ರಮವು ಈಗಾಗಲೇ ಆರಂಭ ಆಗಬೇಕಿತ್ತು. ಆದರೆ ಕೇಂದ್ರದಿಂದ ಲಸಿಕೆ ಪೂರೈಕೆಯಲ್ಲಿ ಆಗುತ್ತಿರುವ ವಿಳಂಬದಿಂದಾಗಿ ಕೊಂಚ ತಡವಾಗಿದೆ. ನವೆಂಬರ್ ಮೊದಲ ವಾರದಲ್ಲಿ ಈ ಲಸಿಕೆ ಸಿಗುವ ನಿರೀಕ್ಷೆ ಇದ್ದು, ಲಸಿಕಾ ಕಾರ್ಯಕ್ರಮಕ್ಕೆ ಇಲಾಖೆ ಸಿದ್ಧತೆ ನಡೆಸಿದೆ. 3 ಲಕ್ಷ ಯುನಿಟ್‌ನಷ್ಟು ಲಸಿಕೆಗೆ ಬೇಡಿಕೆ ಸಲ್ಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.