ADVERTISEMENT

ಕನಕಪುರ: ಅಂಗನವಾಡಿ ಸಿಬ್ಬಂದಿ ಸೇವೆಗೆ ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2021, 5:00 IST
Last Updated 29 ಜುಲೈ 2021, 5:00 IST
ಚಿಕ್ಕಮುದುವಾಡಿ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷೆ ಪಿರ್ದೋಷ್‌ ಫಾತಿಮಾ ಹೈದರ್‌ ಷರೀಪ್‌ ಅಂಗನವಾಡಿ ಕಾರ್ಯಕರ್ತೆಯರಿಗೆ ರೇಷನ್‌ ಕಿಟ್‌‌ ವಿತರಿಸಿದರು
ಚಿಕ್ಕಮುದುವಾಡಿ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷೆ ಪಿರ್ದೋಷ್‌ ಫಾತಿಮಾ ಹೈದರ್‌ ಷರೀಪ್‌ ಅಂಗನವಾಡಿ ಕಾರ್ಯಕರ್ತೆಯರಿಗೆ ರೇಷನ್‌ ಕಿಟ್‌‌ ವಿತರಿಸಿದರು   

ಕನಕಪುರ: ಕೊರೊನಾ ಸಂದರ್ಭದಲ್ಲಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಸಹಕಾರ ಮತ್ತು ಬೆಂಬಲದಿಂದ ಗ್ರಾಮಗಳಲ್ಲಿ ಸೋಂಕು ನಿಯಂತ್ರಣ ಮಾಡಲು ಸಾಧ್ಯವಾಯಿತು ಎಂದು ಚಿಕ್ಕಮುದುವಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಿರ್ದೋಷ್‌ ಫಾತಿಮಾ ಹೈದರ್‌ ಷರೀಪ್‌ ಹೇಳಿದರು.

ತಾಲ್ಲೂಕಿನ ಕಸಬಾ ಹೋಬಳಿಯ ಚಿಕ್ಕಮುದುವಾಡಿ ಗ್ರಾಮ ಪಂಚಾಯಿತಿಯಲ್ಲಿ ಕೊರೊನಾ ವಾರಿಯರ್ಸ್‌ ಆಗಿ ಶ್ರಮಿಸಿದ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ವೈಯಕ್ತಿಕವಾಗಿ ಬುಧವಾರ ರೇಷನ್‌ ಕಿಟ್‌ ವಿತರಿಸಿ ಅವರು ಮಾತನಾಡಿದರು.

ಕೊರೊನಾ ಸೋಂಕು ಹಳ್ಳಿಗಳಿಗೂ ವ್ಯಾಪಿಸಿ ಜನರ ನೆಮ್ಮದಿ ಕೆಡಿಸಿತು. ಎರಡನೇ ಅಲೆಯಲ್ಲಿ ಜನರು ಮನೆಯಿಂದ ಹೊರಗೆ ಬರಲು ಹೆದರಿ ಮನೆ ಸೇರಿದ್ದರು. ಎಷ್ಟೇ ಸುರಕ್ಷತೆ ವಹಿಸಿದ್ದರೂ ಸಾಕಷ್ಟು ಮಂದಿ ಸೋಂಕಿಗೆ ತುತ್ತಾಗಿದ್ದಾರೆ. ಹಲವಾರು ಮಂದಿ ಬಲಿಯಾಗಿದ್ದಾರೆ. ಕಾಯಿಲೆಯಿಂದ ಜನರು ಭಯಭೀತರಾಗಿದ್ದರು ಎಂದು ತಿಳಿಸಿದರು.

ADVERTISEMENT

ಇಂತಹ ಕಠಿಣ ಮತ್ತು ವಿಷಮ ಪರಿಸ್ಥಿತಿಯಲ್ಲೂ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಹೆದರದೆ ಜೀವದ ಹಂಗು ತೊರೆದು ಸೈನಿಕರಂತೆ ಮನೆ ಮನೆಗೆ ಹೋಗಿ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸಿದರು. ಸೋಂಕಿತರಿಂದ ಮಾಹಿತಿ ಪಡೆದು ಅವರ ಸುರಕ್ಷತೆಗೆ ಶ್ರಮಿಸಿದ್ದಾರೆ. ಸೋಂಕು ಹರಡದಂತೆ ಎಚ್ಚರವಹಿಸಿದ್ದಾರೆ. ಅವರ ಕಾರ್ಯ ಅನನ್ಯವಾದುದು ಎಂದರು.

ಸೋಂಕು ಸಂಪೂರ್ಣವಾಗಿ ನಿಯಂತ್ರಣವಾಗಿಲ್ಲ. ಮುಂದೆ ಮೂರನೇ ಅಲೆ ಬರುವ ಸಾಧ್ಯತೆಯಿದೆ. ನಾಗರಿಕರು ಇದನ್ನು ನಿರ್ಲಕ್ಷಿಸಬಾರದು. ಈಗಿನಿಂದಲೇ ಸೋಂಕು ಬರದಂತೆ ಅಗತ್ಯ ಕ್ರಮ ಮತ್ತು ಎಚ್ಚರವಹಿಸಬೇಕು. ಎರಡನೇ ಅಲೆಯಲ್ಲಿ ಆರೋಗ್ಯ ಇಲಾಖೆ ಮತ್ತು ಗ್ರಾಮ ಪಂಚಾಯಿತಿಗೆ ಸಹಕರಿಸಿ ಸೇವೆ ಮಾಡಿದ ರೀತಿಯಲ್ಲೇ ಮುಂದೆಯೂ ಸಹಕರಿಸಬೇಕು ಎಂದು ಮನವಿ ಮಾಡಿದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎ.ವಿ. ಪುಟ್ಟರಾಮು ಮಾತನಾಡಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಪಂಚಾಯಿತಿ, ಆರೋಗ್ಯ ಇಲಾಖೆ ಹಾಗೂ ಸಾರ್ವಜನಿಕರ ನಡುವೆ ಸಂಪರ್ಕ ಕೊಂಡಿಯಾಗಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರದ ಹಲವು ಕಾರ್ಯಕ್ರಮಗಳು ಅವರಿಂದ ಜನರಿಗೆ ತಿಳಿಯುತ್ತಿವೆ. ಅವರ ಕೆಲಸವನ್ನು ಮೆಚ್ಚಿ ಪಂಚಾಯಿತಿ ಅಧ್ಯಕ್ಷರು ರೇಷನ್‌ ಕಿಟ್‌ ನೀಡುತ್ತಿದ್ದಾರೆ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮುನೇಂದ್ರ, ಸದಸ್ಯರು, ಸಿಬ್ಬಂದಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.