ADVERTISEMENT

ಚನ್ನಪಟ್ಟಣದಲ್ಲಿ 500 ಜನರಿಗೆ ಚಿಕಿತ್ಸೆಗೆ ವ್ಯವಸ್ಥೆ: ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 3 ಜುಲೈ 2020, 9:24 IST
Last Updated 3 ಜುಲೈ 2020, 9:24 IST
   

ರಾಮನಗರ: ಚನ್ನಪಟ್ಟಣದಲ್ಲಿ 500 ಜನರಿಗೆ ಚಿಕಿತ್ಸೆ ನೀಡುವ ಸಾಮರ್ಥ್ಯದ ಕೋವಿಡ್ ಕೇರ್ ಅನ್ನು ಪ್ರಾರಂಭಿಸಲು ಎಲ್ಲಾವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಆರ್. ಅಶ್ವತ್ಥ ನಾರಾಯಣ ತಿಳಿಸಿದರು.

ಚನ್ನಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಅವರು ಪತ್ರಕರ್ತರ ಜೊತೆ ಮಾತನಾಡಿದರು. ಜಿಲ್ಲೆಯಲ್ಲಿ ಎಷ್ಟೇ ಸಂಖ್ಯೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾದರು ಅದನ್ನು ನಿರ್ವಹಿಸಲು ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಉನ್ನತ ದರ್ಜೆಗೆ: ಚನ್ನಪಟ್ಟಣದ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಇನ್ನು ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಿ ಉನ್ನತ ದರ್ಜೆಗೆ ಏರಿಸಲಾಗುವುದು. ಈ ಆಸ್ಪತ್ರೆಯಲ್ಲಿ ಅಗತ್ಯ ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ಸೌಕರ್ಯ ಮತ್ತು ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಅವರು ತಿಳಿಸಿದರು.

ADVERTISEMENT

ರಾಜ್ಯದಾದ್ಯಂತ ಖಾಸಗಿ ಆಸ್ಪತ್ರೆಗಳಲ್ಲೂ ಕೋವಿಡ್‌ನ ಚಿಕಿತ್ಸೆಗಾಗಿ ಇಂತಿಷ್ಟೆ ಪ್ರಮಾಣದ ಹಾಸಿಗೆಗಳನ್ನು ಮೀಸಲಿಟ್ಟು ಚಿಕಿತ್ಸೆ ನೀಡುವಂತೆ ಸೂಚಿಸಲಾಗಿದೆ. ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರದ ವತಿಯಿಂದಲೇ ರೋಗಿಗಳನ್ನು ದಾಖಲಿಸಲಾಗುವುದು. ಸ್ಥಳೀಯ ಆಡಳಿತದ ವತಿಯಿಂದ ಆಸ್ಪತ್ರೆಗೆ ದಾಖಲಿಸಲು ಕ್ರಮ ವಹಿಸಲಾಗುವುದರ ಜೊತೆಗೆ, ಬಡವರು ಶ್ರೀಮಂತರು ಎನ್ನದೆ ಎಲ್ಲರಿಗೂ ಸರ್ಕಾರದಿಂದಲೇ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು ಎಂದರು.

ನೇರವಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗುವವರು ಅವರೇ ಆ ಆಸ್ಪತ್ರೆಯ ಖರ್ಚು ವೆಚ್ಚವನ್ನು ಭರಿಸಬೇಕಾಗುತ್ತದೆ. ಸರ್ಕಾರದ ಮೀಸಲು ಖೋಟಾದ ಹಾಸಿಗೆಗಳನ್ನು ಹೊರತು ಪಡಿಸಿ, ಖಾಸಗಿ ಆಸ್ಪತ್ರೆಯ ವೆಚ್ಚದ ಹಾಸಿಗೆಗಳನ್ನು ಚಿಕಿತ್ಸೆಗೆ ಬಳಸಿಕೊಂಡಲ್ಲಿ ಅದರ ವೆಚ್ಚವನ್ನು ಸಂಬಂಧಿಸಿದ ರೋಗಿಯೇ ಭರಿಸಬೇಕಾಗುತ್ತದೆ. ಎಲ್ಲರಿಗೂ ಚಿಕಿತ್ಸೆ ದೊರೆಯಬೇಕು ಎನ್ನುವ ಸದುದ್ದೇಶದಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ.

ಮನೆಯಲ್ಲೇ ಚಿಕಿತ್ಸೆ: ಕೋವಿಡ್-19 ರೋಗ ಲಕ್ಷಣವಿಲ್ಲದವರಿಗೆ ಆಸ್ಪತ್ರೆಯ ಬದಲು ಮನೆಯಲ್ಲೇ ಚಿಕಿತ್ಸೆ ನೀಡಲು ನಿಯಮ ರೂಪಿಸಲಾಗಿದೆ. ಮನೆಯಲ್ಲಿಯೇ ಸೌಲಭ್ಯಗಳಿದ್ದರೆ ಇಂತಹವರು ಅವರ ಮನೆಯಿಂದಲೇ ಚಿಕಿತ್ಸೆ ಪಡೆದುಕೊಳ್ಳಬಹುದು ಎಂದು ಮಾಹಿತಿ ನೀಡಿದರು.

ಕೋವಿಡ್-19 ರಾಜ್ಯದಲ್ಲಿ ನಿಯಂತ್ರಣದಲ್ಲಿದೆ. ಹೀಗಾಗಿ ಜನರು ಆತಂಕ ಪಡುವ ಅಗತ್ಯವಿಲ್ಲ. ಎಲ್ಲರಿಗೂ ಚಿಕಿತ್ಸೆ ಲಭ್ಯವಾಗಲಿದೆ. ಕೋವಿಡ್ ಅನ್ನು ನಿಯಂತ್ರಿಸಲು ಸರ್ಕಾರ ಅಗತ್ಯವಿರುವ ಕ್ರಮ ಕೈಗೊಂಡಿದೆ. ಹಾಗೆಯೇ ಶಕ್ತಿಮೀರಿ ಪ್ರಯತ್ನಿಸುತ್ತಿದೆ ಎಂದು ಅಶ್ವತ್ಥ ನಾರಾಯಣ ತಿಳಿಸಿದರು.

ಪರೀಕ್ಷಾ ಸಂಖ್ಯೆ ಹೆಚ್ಚಳ: ಶಂಕೆ ಇರುವವರಿಗೆಲ್ಲರಿಗೂ ಕೋವಿಡ್ ಪರೀಕ್ಷೆ ಮಾಡಲಾಗುತ್ತದೆ. ವಿದೇಶದಿಂದ ಬಂದವರು, ಹೊರರಾಜ್ಯದಿಂದ ಬಂದವರಿಗೂ ಪರೀಕ್ಷೆ ಮಾಡಲಾಗುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಕೋವಿಡ್ ಮಾದರಿಗಳ ಪರೀಕ್ಷೆಯ ಪ್ರಮಾಣದಲ್ಲಿ ಹೆಚ್ಚಳವಾಗಲಿದೆ ಎಂದರು.

ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ, ಜಿ.ಪಂ. ಸಿಇಒ ಇಕ್ರಂ ಈ ಸಂದರ್ಭ ಜೊತೆಗಿದ್ದರು‌. ನಂತರ ಸಚಿವರು ಮಾಗಡಿ ತಾಲ್ಲೂಕು ಆಸ್ಪತ್ರೆಗೆ ಭೇಟಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.