ADVERTISEMENT

ರಾಮನಗರ: ರೆಸಾರ್ಟ್‌ ಸಿಬ್ಬಂದಿ ಮೇಲೆ ಲಾಂಗ್‌ನಿಂದ ಹಲ್ಲೆ

ಮಧ್ಯರಾತ್ರಿ ಮನೆಗೆ ನುಗ್ಗಿದ ಮುಸುಕುಧಾರಿ ರೌಡಿಗಳಿಂದ ಕೃತ್ಯ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2024, 6:14 IST
Last Updated 23 ಫೆಬ್ರುವರಿ 2024, 6:14 IST

ರಾಮನಗರ: ರೌಡಿಗಳ ಗುಂಪೊಂದು ನಗರದ ಹೊರವಲಯದ ರೆಸಾರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಲಾಂಗ್‌ನಿಂದ ಹಲ್ಲೆ ನಡೆಸಿರುವ ಘಟನೆ ನಗರದ ಎಂ.ಎಚ್. ಶಾಲೆ ರಸ್ತೆಯ ಮನೆಯೊಂದರಲ್ಲಿ ಗುರುವಾರ ರಾತ್ರಿ ನಡೆದಿದೆ.

ರೆಸಾರ್ಟ್‌ನಲ್ಲಿ ಕೆಲಸ ಮಾಡುವುದಕ್ಕಾಗಿ ತಮಿಳುನಾಡಿನಿಂದ ನಾಲ್ವರು ಬಂದಿದ್ದರು. ಅವರಿಗೆ ಉಳಿದುಕೊಳ್ಳಲು ಮನೆಯಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಮಧ್ಯರಾತ್ರಿ ಮೂವರು ಸೆಕೆ ತಡೆಯಲಾಗದೆ ಮನೆಯ ಮಹಡಿ ಮೇಲೆ ಮಲಗಲು ಹೋಗಿದ್ದರು. ರಾತ್ರಿ 1.30 ಸುಮಾರಿಗೆ ಚಳಿ ತಡೆಯಲಾಗದ ಇಬ್ಬರು ಕೊಠಡಿಗೆ ಬೆಡ್‌ಶೀಟ್ ತರಲು ಹೋಗಿದ್ದರು.

ಇದೇ ವೇಳೆ ಮೂರು ಕಾರುಗಳಲ್ಲಿ ಮಾರಕಾಸ್ತ್ರಗಳೊಂದಿಗೆ ಮುಖಕ್ಕೆ ಮಾಸ್ಕ್ ಧರಿಸಿಕೊಂಡು ಬಂದಿದ್ದ ಆರೇಳು ರೌಡಿಗಳು, ನೇರವಾಗಿ ಮಹಡಿಗೆ ಹೋಗಿ ಅಲ್ಲಿದ್ದ ಆದರ್ಶನ ಎಂಬಾತನ ಮೇಲೆ ಲಾಂಗ್ ಬೀಸಿದ್ದಾರೆ. ತಪ್ಪಿಸಿಕೊಳ್ಳಲು ಕೈ ಅಡ್ಡ ಕೊಟ್ಟಿದ್ದರಿಂದ ಕೈಗೆ ಪೆಟ್ಟು ಬಿದ್ದಿದೆ. ಆತ ನೋವಿನಿಂದ ಚೀರಿಕೊಂಡಾಗ, ರೌಡಿಗಳು ಆತನ ಮುಖಕ್ಕೆ ಮೊಬೈಲ್‌ ಟಾರ್ಚ್ ಬಿಟ್ಟು ನೋಡಿದ್ದಾರೆ ಎಂದು ಐಜೂರು ಠಾಣೆ ಪೊಲೀಸರು ತಿಳಿಸಿದರು.

ADVERTISEMENT

ಆಗ ‘ನಾವು ಹುಡುಕಿಕೊಂಡು ಬಂದ ವ್ಯಕ್ತಿ ನೀನಲ್ಲ. ಘಟನೆಯನ್ನು ಯಾರಿಗೂ ಹೇಳಬೇಡ’ ಎಂದು ಕನ್ನಡದಲ್ಲಿ ಹೇಳಿ ಅಲ್ಲಿಂದ ಹೊರಡಲು ಮುಂದಾಗಿದ್ದಾರೆ. ಸ್ನೇಹಿತನ ಚೀರಾಟ ಕೇಳಿ ಮೇಲಕ್ಕೆ ಬರುತ್ತಿದ್ದ ಉಳಿದಿಬ್ಬರು, ಮಾರಾಕಾಸ್ತ್ರದೊಂದಿಗೆ ಇದ್ದ ರೌಡಿಗಳನ್ನು ನೋಡಿ ಹೆದರಿದ್ದಾರೆ. ನಮ್ಮ ಮೇಲೂ ಹಲ್ಲೆ ನಡೆಸುತ್ತಾರೆ ಎಂದುಕೊಂಡು, ಸ್ಥಳದಿಂದ ತಪ್ಪಿಸಿಕೊಳ್ಳಲು ಮಹಡಿಯಿಂದ ಕೆಳಕ್ಕೆ ಜಿಗಿದಿದ್ದಾರೆ ಎಂದು ಹೇಳಿದರು.

ಈ ವೇಳೆ, ಒಬ್ಬನ ಸೊಂಟ ಮತ್ತು ಮತ್ತೊಬ್ಬನ ಕಾಲಿಗೆ ತೀವ್ರ ಪೆಟ್ಟಾಗಿದೆ. ಕೈಗೆ ಗಂಭೀರವಾಗಿ ಗಾಯಗೊಂಡಿರುವ ಆದರ್ಶ್ ಮತ್ತು ಸೊಂಟಕ್ಕೆ ಪೆಟ್ಟಾಗಿರುವ ಮತ್ತೊಬ್ಬನಿಗೆ ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕಳಿಸಿ ಕೊಡಲಾಗಿದೆ ಎಂದರು.

ನಗರದ ಸಿದ್ದ ಎಂಬಾತನನ್ನು ರೌಡಿಗಳು ಹುಡುಕಿಕೊಂಡು ಬಂದಿದ್ದರು ಎನ್ನಲಾಗಿದೆ. ಆತ ಈ ಮನೆಯಲ್ಲಿ ರಾತ್ರಿ ಬಂದು ಮಲಗುತ್ತಾನೆ ಎಂಬ ಮಾಹಿತಿ ಮೇರೆಗೆ ಬಂದಿದ್ದ ಅವರು, ಅಮಾಯಕನ ಮೇಲೆ ಹಲ್ಲೆ ನಡೆಸಿದ್ದಾರೆ. ಆರೋಪಿಗಳ ಬಂಧನಕ್ಕಾಗಿ ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.