ADVERTISEMENT

ರಾಮನಗರ | 100 ಮಕ್ಕಳ ಪೋಷಕರ ಕಸಿದ ಕೋವಿಡ್‌: ಮಕ್ಕಳ ರಕ್ಷಣಾ ಘಟಕದ ಮೂಲಕ ನೆರವು

ಕುಟುಂಬಗಳ ಸ್ಥಿತಿಗತಿ ಸಮೀಕ್ಷೆ

ಆರ್.ಜಿತೇಂದ್ರ
Published 19 ಜೂನ್ 2021, 3:17 IST
Last Updated 19 ಜೂನ್ 2021, 3:17 IST
   

ರಾಮನಗರ: ಜಿಲ್ಲೆಯಲ್ಲಿ ಕೋವಿಡ್‌ನಿಂದಾಗಿ ಬರೋಬ್ಬರಿ 100 ಮಕ್ಕಳು ತಮ್ಮ ಪೋಷಕರನ್ನು ಕಳೆದುಕೊಂಡಿದ್ದು, ಸಂಕಷ್ಟದಲ್ಲಿ ಇದ್ದಾರೆ. ಅದರಲ್ಲೂ ಎರಡು ಕುಟುಂಬದಲ್ಲಿ ತಂದೆ–ತಾಯಿ ಇಬ್ಬರೂ ಇಲ್ಲ.

ಕೋವಿಡ್‌ನಿಂದ ಸಂಕಷ್ಟಕ್ಕೆ ಒಳಗಾದ ಮಕ್ಕಳ ಪಾಲನೆ–ಪೋಷಣೆ ಪೋಷಣೆಯೇ ಸವಾಲಾಗಿದೆ. ಕೆಲವು ಕಡೆ ಆರ್ಥಿಕ ಸಂಕಷ್ಟದ ಕಾರಣಕ್ಕೆ ಮಕ್ಕಳು ಶಾಲೆ ಬಿಡುವ ಸ್ಥಿತಿ ತಲುಪಿದ್ದಾರೆ. ಇನ್ನೂ ಕೆಲವು ಕಡೆ ಹಿರಿಯ ಮಕ್ಕಳೇ ಕುಟುಂಬದ ನೊಗ ಹೊರಲು ಸಿದ್ಧರಾಗುತ್ತಿದ್ದಾರೆ. ಇಂತಹವರ ನೆರವಿಗೆ ಸರ್ಕಾರ ಮುಂದಾಗಿದ್ದು, ಅವರನ್ನು ‘ಬಾಲ ಸ್ವರಾಜ್‌’ ಯೋಜನೆಯ ಅಡಿ ನೋಂದಾಯಿಸಿಕೊಳ್ಳಲಾಗುತ್ತಿದೆ. ಇಬ್ಬರೂ ಪೋಷಕರನ್ನು ಕಳೆದುಕೊಂಡ ಮಕ್ಕಳ ಪೋಷಣೆಗೆ ಪ್ರತಿ ತಿಂಗಳು ₹3,500 ಸಹಾಯಧನ ನೀಡುವುದಾಗಿಯೂ ಸರ್ಕಾರ ಈಗಾಗಲೇ ಘೋಷಣೆ ಮಾಡಿದೆ.

ಜಿಲ್ಲೆಯಲ್ಲಿ ಎರಡು ಕುಟುಂಬಗಳು ಕೋವಿಡ್‌ನಿಂದ ತಮ್ಮ ಪೋಷಕರಿಬ್ಬರನ್ನೂ ಕಳೆದುಕೊಂಡಿವೆ. ಈ ಎರಡೂ ಕಡೆ ತಲಾ ಒಬ್ಬ ಬಾಲಕ ಹಾಗೂ ಬಾಲಕಿ ತಂದೆ–ತಾಯಿ ಕಳೆದುಕೊಂಡು ಅನಾಥವಾಗಿದ್ದಾರೆ. ಎರಡೂ ಕುಟುಂಬಗಳು ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿ ಇಲ್ಲ. ಹೀಗಾಗಿ ನೆರವಿನ ನಿರೀಕ್ಷೆಯಲ್ಲಿ ಇವೆ. ಸದ್ಯ ಈ ಎಲ್ಲ ಮಕ್ಕಳನ್ನು ನೋಡಿಕೊಳ್ಳಲು ಅವರ ಸಂಬಂಧಿಕರೇ ಮುಂದಾಗಿದ್ದಾರೆ.

ADVERTISEMENT

‘ಕೋವಿಡ್‌ನಿಂದ ಅನಾಥರಾದ ಮಕ್ಕಳನ್ನು ಅವರ ಸಂಬಂಧಿಕರ ಬಳಿಯೇ ಇರಿಸಿಕೊಳ್ಳುವ ಕೆಲಸ ಮಾಡಲಾಗುತ್ತಿದೆ. ಮಕ್ಕಳ ಮನಸ್ಥಿತಿ ಕುಗ್ಗದಂತೆ ಕೌನ್ಸೆಲಿಂಗ್‌ ನಡೆಸಲಾಗಿದೆ. ಸಂಬಂಧಿಕರು ಮಕ್ಕಳನ್ನು ಸಲಹಲು ಅಶಕ್ತರಾದರೆ, ಮಕ್ಕಳ ದತ್ತು ಸ್ವೀಕಾರ ಕೇಂದ್ರದ ಮೂಲಕ ನಿರ್ವಹಣೆ ಮಾಡಲಾಗುವುದು. ಜತೆಗೆ, ದತ್ತು ಸ್ವೀಕಾರ ಕೇಂದ್ರದ ಮೂಲಕ ಉತ್ತಮ ಕುಟುಂಬಕ್ಕೆ ದತ್ತು ನೀಡಲಾಗುವುದು’ ಎನ್ನುತ್ತಾರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ.

98 ಮಕ್ಕಳು: ಜಿಲ್ಲೆಯ 98 ಮಕ್ಕಳು ಕೋವಿಡ್‌ನಿಂದ ತಮ್ಮ ತಂದೆ–ತಾಯಿ ಇಬ್ಬರಲ್ಲಿ ಒಬ್ಬರನ್ನು ಕಳೆದುಕೊಂಡಿದ್ದಾರೆ. ಈ ಮಕ್ಕಳ ಬದುಕೂ ಸಂಕಷ್ಟದಲ್ಲಿ ಇದೆ. ‘ಜಿಲ್ಲೆಯಲ್ಲಿ ಕೋವಿಡ್‌ನಿಂದ ಪೋಷಕರನ್ನು ಕಳೆದುಕೊಂಡ ಎಲ್ಲ ಮಕ್ಕಳ ಮಾಹಿತಿ ಪಡೆಯಲಾಗಿದ್ದು, ಅವರ ಮನೆಗಳಿಗೆ ತೆರಳಿ ಪರಿಸ್ಥಿತಿ ಅವಲೋಕಿಸುತ್ತಿದ್ದೇವೆ. ಎಲ್ಲರನ್ನೂ ಬಾಲ ಸ್ವರಾಜ್‌ ಯೋಜನೆಗೆದಾಖಲಿಸುವಂತೆ ಸೂಚನೆ ಇದೆ. ಬಹುತೇಕ ಪ್ರಕರಣಗಳಲ್ಲಿ ರಕ್ತ ಸಂಬಂಧಿಗಳೇ ನೆರವಾಗುತ್ತಿದ್ದಾರೆ’ ಎನ್ನುತ್ತಾರೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ನಾಗವೇಣಿ.

ಇಂತಹ ಮಕ್ಕಳನ್ನು ಮೊದಲಿಗೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಲಾಗುತ್ತದೆ. ಸಮಿತಿಯು ಮಕ್ಕಳ ಪಾಲನೆಗೆ ಶಿಫಾರಸು ಮಾಡಿದಲ್ಲಿ ಅಂತಹವರಿಗೆ ಸರ್ಕಾರದಿಂದಲೇ ವಸತಿ–ಊಟೋಪಚಾರದ ಜೊತೆಗೆ ಶಿಕ್ಷಣ, ಕೌಶಲ ತರಬೇತಿಯೂ ಸಿಗಲಿದೆ. ಈ ಮಕ್ಕಳಿಗೆ 18 ವರ್ಷ ತುಂಬುವರೆಗೆ ಸಂಪೂರ್ಣ ಪಾಲನೆಯ ಜವಾಬ್ದಾರಿಯನ್ನು ಸರ್ಕಾರವೇ ಹೊರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.