ADVERTISEMENT

ಮಾಗಡಿ: ಗೋಮಾಳ ಕಬಳಿಕೆಗೆ ಯತ್ನ

​ಪ್ರಜಾವಾಣಿ ವಾರ್ತೆ
Published 30 ಮೇ 2021, 3:36 IST
Last Updated 30 ಮೇ 2021, 3:36 IST
ಮಾಗಡಿ ತಾಲ್ಲೂಕಿನ ಸಾತನೂರು ಗ್ರಾಮದಲ್ಲಿ ಗೋಮಾಳ ಕಬಳಿಸಲು ನೆಲಸಮಗೊಳಿಸಿರುವುದು
ಮಾಗಡಿ ತಾಲ್ಲೂಕಿನ ಸಾತನೂರು ಗ್ರಾಮದಲ್ಲಿ ಗೋಮಾಳ ಕಬಳಿಸಲು ನೆಲಸಮಗೊಳಿಸಿರುವುದು   

ಮಾಗಡಿ: ಸ್ಮಶಾನ ಮತ್ತು ಸಾರ್ವಜನಿಕ ಬಳಕೆಗೆ ಮೀಸಲಿಟ್ಟಿದ್ದ ಸರ್ಕಾರಿ ಗೋಮಾಳವನ್ನು ಖಾಸಗಿ ವ್ಯಕ್ತಿಗಳು ಕಬಳಿಸಲು ಸಮತಟ್ಟುಗೊಳಿಸಿ ಟ್ರಂಚ್‌ ತೆಗೆದಿರುವುದನ್ನು ತಡೆಗಟ್ಟಬೇಕು ಎಂದು ಸಾತನೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಗಿರಿಯಪ್ಪ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾತನೂರು ಸರ್ವೆ ನಂಬರ್‌ 199ರಲ್ಲಿ 50 ಎಕರೆ ಸರ್ಕಾರಿ ಗೋಮಾಳವಿದೆ. ಅದರಲ್ಲಿ 2 ಎಕರೆ ಸಾರ್ವಜನಿಕ ಸ್ಮಶಾನಕ್ಕೆ ಗುರುತಿಸಲಾಗಿದೆ. ಉಳಿದ 48 ಎಕರೆ ಭೂಮಿಯನ್ನು ಗ್ರಾಮಸ್ಥರ ಬಳಕೆಗೆ ಮೀಸಲಿಡಲಾಗಿದೆ ಎಂದರು.

ಈ ಭೂಮಿಯ ಅಕ್ಕಪಕ್ಕದವರು, ಮಾಜಿ ಶಾಸಕರ ಹಿಂಬಾಲಕರೊಬ್ಬರು ಸೇರಿದಂತೆ ನಾಲ್ವರು ಒಟ್ಟು 10 ಎಕರೆ ಗೋಮಾಳದ ಭೂಮಿಯಲ್ಲಿ ಜೆಸಿಬಿ ಯಂತ್ರ ಬಳಸಿ ಅಕ್ರಮವಾಗಿ ಸಮಗೊಳಿಸಿ ಟ್ರಂಚ್‌ ತೆಗೆದಿದ್ದಾರೆ. ಗ್ರಾಮಸ್ಥರ ಬಳಕೆಗೆ ಮೀಸಲಿಟ್ಟಿದ್ದ ಗೋಮಾಳ ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಳ್ಳುವುದನ್ನು ವಿರೋಧಿಸುತ್ತಿದ್ದೇವೆ. ಜಿಲ್ಲಾಧಿಕಾರಿ ಮತ್ತು ಶಾಸಕರು ಗೋಮಾಳ ಉಳಿಸಲು ಮುಂದಾಗಬೇಕು ಎಂದರು.

ADVERTISEMENT

ಎಪಿಎಂಸಿ ನಿರ್ದೇಶಕ ಕೆಂಪಸಾಗರ ಮಂಜುನಾಥ ಮಾತನಾಡಿ, ಈ ಹಿಂದೆ ತೋಟಗಾರಿಕೆ ಇಲಾಖೆಯ ಹಾರೋಹಳ್ಳಿ ಫಾರ್ಮ್‌ನ 8 ಎಕರೆಯಲ್ಲಿ ಎಪಿಎಂಸಿ ಮಾರುಕಟ್ಟೆ ಸಂಕೀರ್ಣ ನಿರ್ಮಿಸಲು ಯೋಜನೆ ತಯಾರಿಸಲಾಗಿತ್ತು. ಇದಕ್ಕಾಗಿ ಸಾತನೂರು ಗೋಮಾಳದಲ್ಲಿ 10 ಎಕರೆ ಭೂಮಿಯನ್ನು ತೋಟಗಾರಿಕಾ ಫಾರ್ಮ್‌ ನಿರ್ಮಿಸಲು ಉದ್ದೇಶಿಸಲಾಗಿತ್ತು. ಗೋಮಾಳವನ್ನು ಖಾಸಗಿ ವ್ಯಕ್ತಿಗಳಿಗೆ ಹಂಚುವುದನ್ನು ವಿರೋಧಿಸುತ್ತಿದ್ದೇವೆ ಎಂದರು.

ಕೆ.ಎನ್‌. ಗಂಗರಾಜು, ಡಿ.ಸಿ. ಮೂರ್ತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.