ADVERTISEMENT

ಕಾರ್ಮಿಕ ಹಕ್ಕು ದಮನಕ್ಕೆ ಯತ್ನ: ಪ್ರಸನ್ನಕುಮಾರ್

ಟೊಯೊಟಾ ಕಾರ್ಖಾನೆಯಲ್ಲಿ ಕಾರ್ಮಿಕ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 2 ಮೇ 2021, 5:04 IST
Last Updated 2 ಮೇ 2021, 5:04 IST
ಟೊಯೊಟಾ ಕಾರ್ಖಾನೆಯಲ್ಲಿ ವಿಶ್ವ ಕಾರ್ಮಿಕ ದಿನಾಚರಣೆ ನಡೆಯಿತು
ಟೊಯೊಟಾ ಕಾರ್ಖಾನೆಯಲ್ಲಿ ವಿಶ್ವ ಕಾರ್ಮಿಕ ದಿನಾಚರಣೆ ನಡೆಯಿತು   

ಬಿಡದಿ: ವಿಶ್ವ ಕಾರ್ಮಿಕ ದಿನಾಚರಣೆ ಅಂಗವಾಗಿ ಶನಿವಾರ ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿ ಇರುವ ಟೊಯೊಟಾ ಕಿರ್ಲೋಸ್ಕರ್ ಕಾರ್ಖಾನೆ ಮುಂಭಾಗ ಆಯೋಜಿಸಿದ್ದ ಸರಳ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು.

ಟೊಯೊಟಾ ಕಾರ್ಮಿಕ ಸಂಘದ ಅಧ್ಯಕ್ಷ ಪ್ರಸನ್ನಕುಮಾರ್ ಮಾತನಾಡಿ, ಕಾರ್ಮಿಕರ ಕಾನೂನು ಮತ್ತು ನ್ಯಾಯಯುತ ಹಕ್ಕುಗಳು ಬಂಡವಾಳಶಾಹಿಗಳ ಕಪಿಮುಷ್ಠಿಗೆ ಸಿಲುಕಿವೆ ಎಂದು ವಿಷಾದಿಸಿದರು.

ಕಾರ್ಮಿಕರ ಹಕ್ಕೊತ್ತಾಯಗಳ ಧ್ವನಿ ಅಡಗಿಸುವ ಪ್ರಯತ್ನ ನಡೆಯುತ್ತಿವೆ. ಕಾರ್ಮಿಕರ ಹಕ್ಕುಗಳನ್ನು ಬಲವಂತವಾಗಿ ಕೊಳ್ಳಲು ಪಿತೂರಿ ನಡೆಯುತ್ತಿದೆ. ಇದಕ್ಕೆ ಸರ್ಕಾರವೇ ಮಧ್ಯಸ್ಥಿಕೆ ವಹಿಸುತ್ತಿರುವುದು ವಿಷಾದನೀಯ. ಹೀಗಾಗಿ ಕಾರ್ಮಿಕರ ನ್ಯಾಯಯುತ ಹಕ್ಕುಗಳ ರಕ್ಷಣೆಯ ಹೋರಾಟಕ್ಕಾಗಿ ಮತ್ತೆ ಸಜ್ಜಾಗುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.

ADVERTISEMENT

ನೂರಾರು ವರ್ಷಗಳ ಕಾಲ ನಿರಂತರ ಹೋರಾಟ ಹಾಗೂ ಬಲಿದಾನದಿಂದ ದೊರೆತ ಕಾರ್ಮಿಕರ ನ್ಯಾಯಯುತ ಹಕ್ಕುಗಳನ್ನು ಎಂದು ಸರ್ಕಾರಗಳೇ ಕಿತ್ತುಕೊಳ್ಳುವ ಮೂಲಕ ಶೋಷಣೆ ಮಾಡುತ್ತಿವೆ ಎಂದು ದೂರಿದರು.

ಯಾರೊಬ್ಬರು ನಿರೀಕ್ಷೆ ಮಾಡದ ಕೋವಿಡ್ ಮಹಾಮಾರಿ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಇದರಿಂದ ಹೆಚ್ಚಾಗಿ ತೊಂದರೆ ಬಡವರು ಹಾಗೂ ಕಾರ್ಮಿಕರು ತೊಂದರೆಗೆ ಸಿಲುಕಿದ್ದಾರೆ. ಜೀವನ ನಿರ್ವಹಣೆ ಕಷ್ಟಸಾಧ್ಯವಾಗಿದೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಸಂಕಷ್ಟಕ್ಕೆ ಸಿಲುಕಿರುವ ಬಡವರು ಮತ್ತು ಅಸಂಘಟಿತ ಕಾರ್ಮಿಕರ ನೆರವಿಗೆ ಮುಂದಾಗಬೇಕು ಎಂದರು.

ಪ್ರಮುಖವಾಗಿ ಹೊರಗುತ್ತಿಗೆ ಕಾರ್ಮಿಕರಿಗೆ ಭದ್ರತೆಯಿಲ್ಲ. ಅವರನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಬಾಡಿಗೆಯ ಸಣ್ಣ ಕೊಠಡಿಗಳಲ್ಲಿ ಹೊರರಾಜ್ಯದಿಂದ ಬಂದಿರುವ ಎಂಟರಿಂದ ಹತ್ತು ಜನ ಕಾರ್ಮಿಕರು ವಾಸಿಸುತ್ತಿದ್ದಾರೆ. ಅವರಿಗೆ ಸೋಂಕು ತಗುಲಿದರೆ ದೊಡ್ಡ ಪ್ರಮಾಣದ ಅನಾಹುತವಾಗಲಿದೆ. ಕೂಡಲೇ ಅವರ ಬಗ್ಗೆ ಗಮನಹರಿಸಿ ಕಾರ್ಮಿಕರಿಗೆ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದರು.

ಟೊಯೊಟಾ ಕಾರ್ಮಿಕರ ಸಂಘದ ಪದಾಧಿಕಾರಿಗಳಾದ ವೀರೇಶ್, ಪ್ರದೀಪ್ ಕಾಣ್ವ, ಚಂದ್ರು, ರವಿ ಅಬ್ಬನಕುಪ್ಪೆ, ನರಸಿಂಹ, ಗುರುಶಾಂತಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.