ಕನಕಪುರ: ನಗರದ ತಾಲ್ಲೂಕು ಕಚೇರಿಯ ತಹಶೀಲ್ದಾರ್ ಸಭಾಂಗಣದಲ್ಲಿ ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಅವರ ಅಧ್ಯಕ್ಷತೆಯಲ್ಲಿ ಬಗರ್ ಹುಕುಂ ಸಾಗುವಳಿ ಸಮಿತಿಯ ಸಭೆ ಗುರುವಾರ ನಡೆಯಿತು.
ಸಭೆಯಲ್ಲಿ ಡಿ.ಕೆ.ಸುರೇಶ್ ಅವರು ಉಪ ವಿಭಾಗಾಧಿಕಾರಿ ಬಿನೊಯ್, ವಿಶೇಷ ಭೂ ಸ್ವಾಧೀನಾಧಿಕಾರಿ ವಿಶ್ವನಾಥ್, ತಹಶೀಲ್ದಾರ್ ಮಂಜುನಾಥ್ ಜಿ, ಎಡಿಎಲ್ ಆರ್.ನಂದೀಶ್, ಇಒ ಅವಿನಾಶ್ ಅವರೊಂದಿಗೆ ತಾಲ್ಲೂಕಿನಲ್ಲಿ ಸಲ್ಲಿಕೆಯಾಗಿರುವ ಸಾಗುವಳಿ ಸಂಬಂಧಿತ ದಾಖಲೆಗಳನ್ನು ಪರಿಶೀಲಿಸಿ ಚರ್ಚೆ ನಡೆಸಿದರು.
ಜುಲೈ 21 ರಂದು ಕೋಡಿಹಳ್ಳಿಯಲ್ಲಿ 22 ರಂದು ಕಸಬಾ ಹೋಬಳಿಯಲ್ಲಿ ನಡೆಯುವ ಜನಸಂಪರ್ಕ ಸಭೆಯ ಪೂರ್ವಸಿದ್ಧತೆ ಹಾಗೂ ಫಲಾನುಭವಿಗಳಿಗೆ ಸವಲತ್ತು ವಿತರಣೆ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಈ ವೇಳೆ ಸಾರ್ವಜನಿಕರು ಬಗರ್ ಹುಕುಂ ಸಾಗುವಳಿ, ಸರ್ವೆ ಸೇರಿದಂತೆ ಇತರೆ ಸಮಸ್ಯೆಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ಡಿ.ಕೆ.ಸುರೇಶ್ ಅವರಿಗೆ ಸಲ್ಲಿಸಿದರು. ಡಿ.ಕೆ.ಸುರೇಶ್ ಅವರು ಅರ್ಜಿಗಳನ್ನು ಪರಿಶೀಲಿಸಿ ಅವುಗಳಿಗೆ ಪರಿಹಾರ ಸೂಚಿಸುವಂತೆ ತಹಶೀಲ್ದಾರ್, ಇಒ ಮತ್ತು ಸರ್ವೆ ಅಧಿಕಾರಿಗಳಿಗೆ ಅರ್ಜಿಗಳನ್ನು ಹಸ್ತಾಂತರಿಸಿದರು.
ರಾಮನಗರ ಶಾಸಕ ಇಕ್ಬಾಲ್ ಹುಸೇನ್, ಬಗರ್ ಹುಕುಂ ಸಾಗುವಳಿ ಸಮಿತಿ ಸದಸ್ಯರು, ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.