ADVERTISEMENT

ರಾಮನಗರ: ಕೈಗಾರಿಕಾ ಪ್ರದೇಶಕ್ಕೆ ಸ್ವಾಮೀಜಿ ಹೆಸರಿಗೆ ನಿರ್ಣಯ

ಬಿಡದಿ ಪುರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರ ಒತ್ತಾಯ, ಶಾಸಕರ ಮೂಲಕ ಸರ್ಕಾರಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2024, 5:47 IST
Last Updated 5 ಡಿಸೆಂಬರ್ 2024, 5:47 IST
ರಾಮನಗರ ತಾಲ್ಲೂಕಿನ ಬಿಡದಿ ಪುರಸಭೆಯ ಸಾಮಾನ್ಯ ಸಭೆಯು ಅಧ್ಯಕ್ಷ ಹರಿಪ್ರಸಾದ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು. ಶಾಸಕ ಎಚ್‌.ಸಿ. ಬಾಲಕೃಷ್ಣ, ಮುಖ್ಯಾಧಿಕಾರಿ ರಮೇಶ್, ಸದಸ್ಯರು ಹಾಗೂ ಅಧಿಕಾರಿಗಳು ಇದ್ದಾರೆ
ರಾಮನಗರ ತಾಲ್ಲೂಕಿನ ಬಿಡದಿ ಪುರಸಭೆಯ ಸಾಮಾನ್ಯ ಸಭೆಯು ಅಧ್ಯಕ್ಷ ಹರಿಪ್ರಸಾದ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು. ಶಾಸಕ ಎಚ್‌.ಸಿ. ಬಾಲಕೃಷ್ಣ, ಮುಖ್ಯಾಧಿಕಾರಿ ರಮೇಶ್, ಸದಸ್ಯರು ಹಾಗೂ ಅಧಿಕಾರಿಗಳು ಇದ್ದಾರೆ   

ರಾಮನಗರ: ತಾಲ್ಲೂಕಿನ ಬಿಡದಿಯ ಪುರಸಭೆಯಲ್ಲಿ ಬುಧವಾರ ನಡೆದ ಮೊದಲ ಸಾಮಾನ್ಯ ಸಭೆಯಲ್ಲಿ, ಇಲ್ಲಿನ ಕೈಗಾರಿಕಾ ಪ್ರದೇಶಕ್ಕೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಹಿಂದಿನ ಶ್ರೀಗಳಾದ ಬಾಲಗಂಗಾಧರನಾಥ ಸ್ವಾಮೀಜಿ ಅವರ ಹೆಸರು ನಾಮಕರಣ ಮಾಡಲು ಸದಸ್ಯರು ಒಕ್ಕೊರಲಿನ ನಿರ್ಣಯ ಕೈಗೊಂಡರು. ಸಭೆಯಲ್ಲಿದ್ದ ಶಾಸಕ ಎಚ್.ಸಿ. ಬಾಲಕೃಷ್ಣ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಅಧ್ಯಕ್ಷ ಎಂ.ಎನ್. ಹರಿಪ್ರಸಾದ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಪ್ರಸ್ತಾಪಿಸಿದ ಸದಸ್ಯ ಸಿ. ಉಮೇಶ್ ಅವರು, ‘ಕೈಗಾರಿಕಾ ಪ್ರದೇಶಕ್ಕೆ ಶ್ರೀ ಡಾ. ಬಾಲಗಂಗಾಧರನಾಥ ಸ್ವಾಮೀಜಿ ಕೈಗಾರಿಕಾ ಪ್ರದೇಶ ಎಂದು ಸರ್ಕಾರ ಮರು ನಾಮಕರಣ ಮಾಡಬೇಕು. ಸ್ವಾಮೀಜಿ ಅವರ ಜನ್ಮಸ್ಥಳವೂ ಪುರಸಭೆ ವ್ಯಾಪ್ತಿಯ ಬಾನಂದೂರು ಆಗಿದ್ದು, ಅದರ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಅದಕ್ಕೆ ಸದಸ್ಯರು ಮೇಜು ತಟ್ಟುವ ಮೂಲಕ ಸಮ್ಮತಿ ವ್ಯಕ್ತಪಡಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಬಾಲಕೃಷ್ಣ, ‘ಸಭೆಯ ನಿರ್ಣಯದ ಕುರಿತು ಸರ್ಕಾರದ ಗಮನ ಸೆಳೆಯಲಾಗುವುದು. ಸ್ವಾಮೀಜಿ ಹೆಸರನ್ನು ನಾಮಕರಣ ಮಾಡಲು ಕ್ರಮ ಕೈಗೊಳ್ಳಲಾಗುವುದು. ಬಾನಂದೂರು ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು’ ಎಂದು ಭರವಸೆ ನೀಡಿದರು.

ADVERTISEMENT

ಇದೇ ವೇಳೆ ಸದಸ್ಯ ರಾಕೇಶ್ ಕುಮಾರ್, ‘ಬಿಡದಿ ಮುಖ್ಯರಸ್ತೆಗೆ ಶಿವಕುಮಾರ ಸ್ವಾಮೀಜಿ ರಸ್ತೆ ಎಂದು ನಾಮಕರಣ ಮಾಡಿದ್ದರೂಅನುಷ್ಠಾನಕ್ಕೆ ಬಂದಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅದಕ್ಕೆ ಶಾಸಕರು, ‘ಹಿಂದೆಯೇ ಶ್ರೀಗಳ ಹೆಸರನ್ನು ನಾಮಕರಣ ಮಾಡಲಾಗಿದ್ದು, ಅಧಿಕಾರಿಗಳು ಗಮನ ಹರಿಸಬೇಕು’ ಎಂದು ಸೂಚಿಸಿದರು.

ಸ್ವಚ್ಛತೆಗೆ ಬೇಕಿದೆ ಒತ್ತು: ಸದಸ್ಯೆ ಸರಸ್ವತಮ್ಮ ಮಾತನಾಡಿ, ‘ಪಟ್ಟಣದಲ್ಲಿ ಸ್ವಚ್ಛತೆ ಕೊರತೆ ಎದ್ದು ಕಾಣುತ್ತಿದ್ದೆ. ಎಲ್ಲೆಂದರಲ್ಲಿ ಕಸ ಕಣ್ಣಿಗೆ ರಾಚುತ್ತಿದ್ದು, ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ಜನ ಬದುಕುವಂತಾಗಿದೆ’ ಎಂದರು. ಅದಕ್ಕೆ ಕುಮಾರ್ ಹಾಗೂ ಇತರ ಸದಸ್ಯರು ಸಹ ದನಿಗೂಡಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ‘ಪುರಸಭೆಯಲ್ಲಿ 49 ಪೌರ ಕಾರ್ಮಿಕರಿದ್ದು, ಪ್ರತಿ ಟ್ರಾಕ್ಟರ್‌ಗೆ ಮೂವರು ಕಾರ್ಮಿಕರು ಬೇಕಾಗಿದ್ದಾರೆ. ಕೆಲವರು ರಜೆ ಹಾಕುವುದರಿಂದ ಕೊರತೆಯಾಗುತ್ತಿದೆ’ ಎಂದು ಅಸಹಾಯಕತೆ ತೋಡಿಕೊಂಡರು.

ಮಧ್ಯ ಪ್ರವೇಶಿಸಿದ ಬಾಲಕೃಷ್ಣ, ‘ಪಟ್ಟಣದಲ್ಲಿ ಕಸದ ಬ್ಲ್ಯಾಕ್‌ಸ್ಪಾಟ್‌ಗಳನ್ನು ಗುರುತಿಸಿ, ಅಲ್ಲಿ ಕಸ ತೆರವುಗೊಳಿಸಿ ಮುಂದೆ ಕಸ ಹಾಕದಂತೆ ನೋಡಿಕೊಳ್ಳಬೇಕು. ದಂಡ ಹಾಕುವುದು ಸೇರಿದಂತೆ ಜನರಲ್ಲಿ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಬೇಕು’ ಎಂದು ಸಲಹೆ ನೀಡಿದರು.

‘ವಾರ್ಡ್‌ಗಳ ಅಭಿವೃದ್ಧಿಗೆ ಪುರಸಭೆಯಿಂದ ಯಾವ್ಯಾವ ಯೋಜನೆಗಳಡಿಯಲ್ಲಿ ಎಷ್ಟು ಅನುದಾನ ಬರುತ್ತದೆ? ಎಂಬುದರ ಮಾಹಿತಿ ಗೊತ್ತಾಗಬೇಕು. ಅಭಿವೃದ್ಧಿ ಕೆಲಸಗಳು ಕೆಲವೇ ವಾರ್ಡ್‌ಗಳಿಗೆ ಸೀಮಿತವಾಗದೆ, ಎಲ್ಲಾ ಸದಸ್ಯರ ವಾರ್ಡ್‌ಗಳಲ್ಲೂ ಅಭಿವೃದ್ಧಿ ಕಾರ್ಯಕ್ಕೆ ಆದ್ಯತೆ ನೀಡಬೇಕು’ ಎಂದು ನೂತನ ಸದಸ್ಯರು ಒತ್ತಾಯಿಸಿದರು. ಅದಕ್ಕೆ ಶಾಸಕ, ‘ಸದಸ್ಯರಿಗೆ ಅನುದಾನದ ಮಾಹಿತಿ ಜೊತೆಗೆ, ಎಲ್ಲೆಲ್ಲಿ ಯಾವ ಅನುದಾನದಲ್ಲಿ ಕೆಲಸ ನಡೆಯುತ್ತಿದೆ ಎಂಬುದರ ಮಾಹಿತಿಯನ್ನ ಒದಗಿಸಬೇಕು’ ಎಂದು ಮುಖ್ಯಾಧಿಕಾರಿ ರಮೇಶ್‌ ಅವರಿಗೆ ಸೂಚಿಸಿದರು.

ಪುರಸಭೆ ಉಪಾಧ್ಯಕ್ಷೆ ಮಂಜುಳಾ ಗೋವಿಂದಯ್ಯ, ಇತರ ಸದಸ್ಯರು ಹಾಗೂ ಅಧಿಕಾರಿಗಳು ಇದ್ದರು.

ತಿಂಗಳಿಗೆ ₹2ರಿಂದ ₹2500 ಕರ

ಪಟ್ಟಣದಲ್ಲಿರುವ ಹೋಟೆಲ್ ಬಾರ್ ಆ್ಯಂಡ್ ರೆಸ್ಟೋರೆಂಡ್ ಹಾಗೂ ಕಲ್ಯಾಣ ಮಂಟಪಗಳಿಂದ ಹೆಚ್ಚಿನ ತ್ಯಾಜ್ಯ ಸಂಗ್ರಹವಾಗುತ್ತಿದೆ. ಆದ್ದರಿಂದ ಅವುಗಳಿಂದ ತಿಂಗಳಿಗೆ ₹2ರಿಂದ ₹2500ರವರೆಗೆ ಕರ ವಸೂಲಿ ಮಾಡಲು ನಿರ್ಧರಿಸಲಾಗಿದೆ’ ಎಂದು ಪುರಸಭೆ ಅಧ್ಯಕ್ಷ ಹರಿಪ್ರಸಾದ್ ಸಭೆಗೆ ತಿಳಿಸಿದರು. ಅದಕ್ಕೆ ಸರ್ವಸದಸ್ಯರೂ ಸಮ್ಮತಿಸಿದರು.

ವಾಗ್ವಾದಕ್ಕೆ ಕಾರಣವಾದ ಅನುದಾನ ಪಟ್ಟಣದ 7 ಮತ್ತು 8ನೇ ವಾರ್ಡ್‌ಗೆ ಎಚ್‌.ಡಿ. ಕುಮಾರಸ್ವಾಮಿ ಅವರು ಸಿ.ಎಂ ಆಗಿದ್ದಾಗ ಎಸ್‌ಎಫ್‌ಸಿ ಯೋಜನೆಯಡಿ ನೀಡಿದ್ದ ₹10 ಕೋಟಿ ಅನುದಾನದ ಕುರಿತು ಚರ್ಚೆಗೆ ಸಂಬಂಧಿಸಿದಂತೆ ಸದಸ್ಯರ ನಡುವೆ ವಾಗ್ವಾದ ನಡೆಯಿತು. ವಿಷಯದ ಚರ್ಚೆಯನ್ನು ಕೈಗೆತ್ತಿಕೊಂಡಾಗ ಸದಸ್ಯ ದೇವರಾಜು ಆಕ್ಷೇಪಿಸಿದರು.

ಮುಂದಿನ ಸಭೆಯಲ್ಲಿ ಚರ್ಚೆಗೆ ಪರಿಗಣಿಸಬೇಕು ಎಂದರು. ಅದಕ್ಕೆ ಉಮೇಶ್ ವಿರೋಧ ವ್ಯಕ್ತಪಡಿಸಿದರು. ಅವರಿಗೆ ಇತರ ಸದಸ್ಯರಾದ ರಾಮಚಂದ್ರಯ್ಯ ಕುಮಾರ್ ನಾಗರಾಜು ಸಾಥ್ ನೀಡಿದರು. ಅನುದಾನ ಹಂಚಿಕೆಯಲ್ಲಿ ತಾರಮತಮ್ಯ ಸಲ್ಲದು. ಎಲ್ಲರಿಗೂ ಸಮಾನವಾಗಿ ಅನುದಾನ ಹಂಚಿಕೆಯಾಗಬೇಕು ಎಂದರು.

‘ಶಾಸಕ ಬಾಲಕೃಷ್ಣ ಅವರು ₹10 ಕೋಟಿ ಅನುದಾನವನ್ನು ಎಲ್ಲಾ ವಾರ್ಡುಗಳಿಗೂ ಹಂಚಿದ್ದಾರೆ. ಹಿಂದಿನ ಶಾಸಕರು ರಾಕೇಶ್ ಅವರು ಪ್ರತಿನಿಧಿಸಿದ್ದ ವಾರ್ಡ್‌ಗೆ ಅನುದಾನ ನೀಡಿದ್ದರು. ಅಲ್ಲಿ ನಾನು ಗೆದ್ದ ಬಳಿಕ ಅನುದಾನವನ್ನು ಬೇರೆ ವಾರ್ಡ್‌ಗೆ ನೀಡಿದರು. ಇಂತಹ ತಾರತಮ್ಯವನ್ನು ಈಗಿನ ಶಾಸಕರು ಮಾಡಿಲ್ಲ’ ಎಂದು ಉಮೇಶ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.