ಎಚ್.ಸಿ. ಜಯಮುತ್ತು ಮತ್ತು ಎಸ್.ಲಿಂಗೇಶ್ ಕುಮಾರ್
ಚನ್ನಪಟ್ಟಣ: ಬಮೂಲ್ ನಿರ್ದೇಶಕರ ಸ್ಥಾನಕ್ಕೆ ಮೇ 25ರಂದು ಚುನಾವಣೆ ನಿಗದಿಯಾಗಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿದೆ.
ಕಳೆದ ನವೆಂಬರ್ 13 ರಂದು ತಾಲ್ಲೂಕಿನಲ್ಲಿ ನಡೆದಿದ್ದ ವಿಧಾನಸಭಾ ಉಪ ಚುನಾವಣೆಯಲ್ಲಿ ಎರಡೂ ಪಕ್ಷಗಳ ಅಭ್ಯರ್ಥಿಗಳು ಪರಸ್ಪರ ಮದಗಜಗಳಂತೆ ಹೋರಾಟ ನಡೆಸಿದ್ದರು. ಆರೋಪ ಪ್ರತ್ಯಾರೋಪಗಳು, ಸ್ಟಾರ್ ಪ್ರಚಾರಕರು, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಕೇಂದ್ರ ಸಚಿವರ ಪ್ರಚಾರದಿಂದ ಚನ್ನಪಟ್ಟಣ ತಾಲ್ಲೂಕು ರಾಷ್ಟ್ರದ ಗಮನ ಸೆಳೆದಿತ್ತು. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಚುನಾವಣೆಯನ್ನು ಪ್ರತಿಷ್ಠೆಯ ಪ್ರಶ್ನೆಯನ್ನಾಗಿ ಸ್ವೀಕರಿಸಿದ್ದವು. ಈಗ ಅಂಥದೇ ಪ್ರತಿಷ್ಠೆಯ ಹಣಾಹಣಿಗೆ ವೇದಿಕೆ ಸಿದ್ಧವಾಗುತ್ತಿದೆ.
ಹಾಲಿ ಬಮೂಲ್ ನಿರ್ದೇಶಕ ಜೆಡಿಎಸ್ ಬೆಂಬಲಿತ ಎಚ್.ಸಿ.ಜಯಮುತ್ತು ಹಾಗೂ ಕಾಂಗ್ರೆಸ್ ಬೆಂಬಲಿತ ಎಸ್.ಲಿಂಗೇಶ್ ಕುಮಾರ್ ಬಮೂಲ್ ನಿರ್ದೇಶಕ ಸ್ಥಾನದ ಆಕಾಂಕ್ಷಿಗಳಾಗಿದ್ದು, ತಾಲ್ಲೂಕಿನ ಹಾಲು ರಾಜಕಾರಣ ರಂಗೇರುತ್ತಿದೆ. ಜಯಮುತ್ತು ಅವರು ತಾಲ್ಲೂಕು ಜೆಡಿಎಸ್ ಅಧ್ಯಕ್ಷರಾಗಿದ್ದಾರೆ. ಜೊತೆಗೆ ಬಿಜೆಪಿಯ ಬೆಂಬಲ ಪಡೆದುಕೊಂಡಿದ್ದಾರೆ. ಎಸ್.ಲಿಂಗೇಶ್ ಕುಮಾರ್ ಅವರು ಮೊದಲು ಜೆಡಿಎಸ್ ನಲ್ಲಿದ್ದು, ಅಲ್ಲಿ ಬೇಸತ್ತು ಬಿಜೆಪಿ ಸೇರಿದ್ದವರು. ಶಾಸಕ ಸಿ.ಪಿ.ಯೋಗೇಶ್ವರ್ ಉಪಚುನಾವಣೆಯ ವೇಳೆ ಕಾಂಗ್ರೆಸ್ ಸೇರಿದ್ದರಿಂದ ಈಗ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದಾರೆ.
ವಿಧಾನಸಭಾ ಉಪ ಚುನಾವಣೆಯ ಕಾವು ತಣ್ಣಗಾಗುತ್ತಿದ್ದಂತೆ ಬಮೂಲ್ ನಿರ್ದೇಶಕ ಸ್ಥಾನದ ಚುನಾವಣೆ ರಂಗು ಪಡೆದುಕೊಂಡಿದೆ. ಮೇ 25 ರಂದು ನಡೆಯಲಿರುವ ಚುನಾವಣೆಗೆ ಈಗಾಗಲೇ ಇಬ್ಬರು ಸ್ಪರ್ಧಿಗಳು ತಂತ್ರ ಪ್ರತಿತಂತ್ರಗಳನ್ನು ಹೆಣೆಯುತ್ತಿದ್ದಾರೆ. ಪರಸ್ಪರ ಆರೋಪ ಪ್ರತ್ಯಾರೋಪಗಳು ನಡೆಯುತ್ತಿವೆ. ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಬೆಂಬಲಕ್ಕೆ ಪಕ್ಷದ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನಿಂತಿದ್ದರೆ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಬೆಂಬಲಕ್ಕೆ ಮಾಜಿ ಸಂಸದ ಡಿ.ಕೆ.ಸುರೇಶ್, ಶಾಸಕ ಸಿ.ಪಿ. ಯೋಗೇಶ್ವರ್ ನಿಂತಿದ್ದಾರೆ.
ತಾಲ್ಲೂಕಿನಲ್ಲಿ 176 ಹಾಲು ಉತ್ಪಾದಕರ ಸಹಕಾರ ಸಂಘಗಳಿವೆ. ಇವುಗಳ ಪೈಕಿ 131 ಸಂಘಗಳ ಮತದಾರರು ಬಮೂಲ್ ಆಡಳಿತ ಮಂಡಳಿಗೆ ನಿರ್ದೇಶಕರನ್ನು ಆಯ್ಕೆ ಮಾಡುವ ಹಕ್ಕು ಹೊಂದಿದ್ದಾರೆ. ಉಳಿದವುಗಳಲ್ಲಿ ಕೆಲವು ಸಂಘಗಳಿಗೆ ತಾಂತ್ರಿಕ ಕಾರಣದಿಂದ ಚುನಾವಣೆ ನಡೆದಿಲ್ಲ. ಕೆಲವು ಸಂಘಗಳು ನಿಯಮಗಳನ್ನು ಪಾಲಿಸದ ಕಾರಣದಿಂದ ಸೂಪರ್ ಸೀಡ್ ಆಗಿವೆ. ಇವುಗಳಿಗೆ ಮತದಾನದ ಹಕ್ಕು ಸಿಕ್ಕಿಲ್ಲ. ಮತದಾನದ ಹಕ್ಕು ಪಡೆದಿರುವ 131 ಹಾಲು ಉತ್ಪಾದಕರ ಸಂಘಗಳ ಆಡಳಿತ ಮಂಡಳಿಗಳು ಒಬ್ಬೊಬ್ಬ ಪ್ರತಿನಿಧಿಯನ್ನು ತಮ್ಮಲ್ಲೇ ಆಯ್ಕೆ ಮಾಡಿಕೊಂಡು ಅವರಿಗೆ ಮತದಾನದ ಹಕ್ಕು ನೀಡಿವೆ.
ವಿಧಾನಸಭಾ ಉಪ ಚುನಾವಣೆ ನಂತರ ಬಂದಿರುವ ಬಮೂಲ್ ನಿರ್ದೇಶಕ ಸ್ಥಾನದ ಚುನಾವಣಾ ಕಾವು ಈಗಾಗಲೇ ರಂಗೇರುತ್ತಿದೆ. ಈ ಹಿಂದಿನ ಚುನಾವಣೆಗಳಲ್ಲಿ ಜೆಡಿಎಸ್ ಅವರೇ ಪರಸ್ಪರ ಸ್ಪರ್ಧಿಗಳಾಗುತ್ತಿದ್ದರು. ಆದರೆ, ಇದೇ ಮೊದಲ ಬಾರಿಗೆ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ಹಣಾಹಣಿ ಏರ್ಪಟ್ಟಿರುವ ಕಾರಣ ಚುನಾವಣಾ ಕಾವು ತಾರಕಕ್ಕೇರಿದೆ.
ಎಂಪಿಸಿಎಸ್‌ಗಳ ಸೂಪರ್ ಸೀಡ್ ಸಂಘರ್ಷ
ಬಮೂಲ್ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಲ್ಲಿ ರಾಜಕೀಯ ಸಂಘರ್ಷ ತೀವ್ರಗೊಳ್ಳುತ್ತಿರುವಂತೆ ಕೆಲವು ಎಂಪಿಸಿಎಸ್‌ಗಳನ್ನು ಸೂಪರ್ ಸೀಡ್ ಮಾಡಿ ಅವುಗಳ ಮತದಾನದ ಹಕ್ಕು ವಜಾ ಮಾಡಲು ಸಹಕಾರ ಇಲಾಖೆಯ ಅಧಿಕಾರಿಗಳು ಮುಂದಾಗಿದ್ದಾರೆ ಎಂಬ ಆರೋಪ ಜೆಡಿಎಸ್‌ನಿಂದ ಕೇಳಿ ಬಂದಿದೆ.
ಇಲಾಖೆಯು ಕೆಲವು ಸಂಘಗಳಿಗೆ ಹಣಕಾಸಿನ ಲೆಕ್ಕಾಚಾರ, ಸಾಮಾನ್ಯ ಸಭೆ ವಿಚಾರಗಳ ಹಿನ್ನೆಲೆಯಲ್ಲಿ ಕಾರಣ ಕೇಳಿ ನೋಟಿಸ್ ನೀಡಿದ್ದು, ಇದರ ಹಿಂದೆ ಸಂಘಗಳ ಸೂಪರ್ ಸೀಡ್ ಕುತಂತ್ರ ಅಡಿಗಿದೆ. ಈ ಕುತಂತ್ರದ ಹಿಂದೆ ಕಾಂಗ್ರೆಸ್ ಪಕ್ಷದ ಕೆಲವರ ಕೈವಾಡವಿದೆ ಎಂದು ಜೆಡಿಎಸ್ ಆರೋಪಿಸಿ ಈಗಾಗಲೇ ರಾಮನಗರದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದೆ.
ತಾಲ್ಲೂಕಿನಲ್ಲಿ ಬಹುತೇಕ ಎಂಪಿಸಿಎಸ್‌ಗಳು ನಮ್ಮ ಬೆಂಬಲಿಕ್ಕಿವೆ. ಅದನ್ನು ಸಹಿಸದೆ ಕಾಂಗ್ರೆಸ್ ಚುನಾವಣೆಯನ್ನು ಗೆಲ್ಲಲು 20ಕ್ಕೂ ಹೆಚ್ಚು ಎಂಪಿಸಿಎಸ್‌ಗಳನ್ನು ಸೂಪರ್ ಸೀಡ್ ಮಾಡಿಸಿ ಅವುಗಳ ಮತದಾನದ ಹಕ್ಕು ಕಸಿಯುವ ವಾಮಮಾರ್ಗವನ್ನು ಅನುಸರಿಸುತ್ತಿದೆ. ಇದರ ವಿರುದ್ಧ ನಾವು ಕಾನೂನು ಹೋರಾಟ ಮಾಡುತ್ತೇವೆ ಎಂದು ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಎಚ್.ಸಿ. ಜಯಮುತ್ತು ತಿಳಿಸಿದ್ದಾರೆ.
ಆದರೆ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿ ಎಸ್. ಲಿಂಗೇಶ್ ಕುಮಾರ್ ಅವರು, ಸಹಕಾರ ಸಂಘಗಳ ನಿಯಮಗಳ ವಿಚಾರದಲ್ಲಿ ನಮ್ಮ ಹಸ್ತಕ್ಷೇಪ ಇಲ್ಲ. ಯಾವ ಸಂಘಗಳಲ್ಲಿ ಸಮಸ್ಯೆ ಇದೆಯೋ ಆ ಸಂಘಗಳಿಗೆ ಇಲಾಖೆ ನೋಟಿಸ್ ಕೊಟ್ಟಿದೆ. ಜೆಡಿಎಸ್ ಪಕ್ಷದವರು ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ನ್ಯಾಯಸಮ್ಮತ ಚುನಾವಣೆ ನಡೆಸಲಿ
ಪ್ರತಿಬಾರಿಯೂ ಬಮೂಲ್‌ನಲ್ಲಿ ನ್ಯಾಯಸಮ್ಮತ ಚುನಾವಣೆ ನಡೆದಿದೆ. ಆದರೆ, ಈ ಬಾರಿ ಕಾಂಗ್ರೆಸ್ ಕುತಂತ್ರದ ಚುನಾವಣೆ ಮಾಡಲು ಹೊರಟಿದೆ. ಜೆಡಿಎಸ್ ಬೆಂಬಲಿತ ಎಂಪಿಸಿಎಸ್‌ಗಳ ಮತದಾನದ ಹಕ್ಕು ಹೊಂದಿರುವ ಅಧ್ಯಕ್ಷರನ್ನು ಹೆದರಿಸಿ, ಬೆದರಿಸಿ ರಾಜೀನಾಮೆ ಪತ್ರಕ್ಕೆ ಸಹಿ ಹಾಕಿಸಿಕೊಳ್ಳುವ ಕೆಲಸ ಮಾಡುತ್ತಿದೆ. ಸಹಕಾರ ಇಲಾಖೆಯು ನ್ಯಾಯಸಮ್ಮತ ಚುನಾವಣೆ ನಡೆಸಬೇಕು ಎನ್ನುವುದು ನಮ್ಮ ಒತ್ತಾಯ.
- ಎಚ್.ಸಿ. ಜಯಮುತ್ತು, ಜೆಡಿಎಸ್ ಬೆಂಬಲಿತ ಅಭ್ಯರ್ಥಿ
ನಮ್ಮ ಪಕ್ಷ ವಾಮಮಾರ್ಗ ಅನುಸರಿಸುತ್ತಿಲ್ಲ
ಸಹಕಾರ ಇಲಾಖೆ ನಿಯಮಾವಳಿ ಪ್ರಕಾರ ಯಾವ ಸಂಘಗಳಲ್ಲಿ ಲೋಪದೋಷವಿದೆಯೋ ಅವುಗಳಿಗೆ ನೋಟಿಸ್ ನೀಡಲಾಗಿದೆ. ಅದರಲ್ಲಿ ಜೆಡಿಎಸ್, ಕಾಂಗ್ರೆಸ್ ಎನ್ನುವ ಪ್ರಶ್ನೆಯಿಲ್ಲ. ಯಾವುದೇ ಲೋಪ ಇಲ್ಲದ ಮೇಲೆ ಎಂಪಿಸಿಎಸ್‌ಗಳು ಭಯಪಡುವ ಅಗತ್ಯವಿಲ್ಲ. ಚುನಾವಣೆಯನ್ನು ನಾವು ಪಾರದರ್ಶಕವಾಗಿ ಎದುರಿಸುತ್ತೇವೆ. ನಮ್ಮ ಪಕ್ಷ ಯಾವುದೇ ವಾಮಮಾರ್ಗ ಅನುಸರಿಸುತ್ತಿಲ್ಲ.
- ಎಸ್.ಲಿಂಗೇಶ್ ಕುಮಾರ್, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.