ADVERTISEMENT

ಚನ್ನಪಟ್ಟಣ: ಜನರ ಉಪಯೋಗಕ್ಕೆ ಬಾರದ ಸಂಪರ್ಕ ರಸ್ತೆ!

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2025, 2:37 IST
Last Updated 29 ಸೆಪ್ಟೆಂಬರ್ 2025, 2:37 IST
<div class="paragraphs"><p>ಚನ್ನಪಟ್ಟಣದ ಸಂಪರ್ಕ ರಸ್ತೆಯೊಂದರಲ್ಲಿ ಕಸದ ರಾಶಿ ಸುರಿದಿರುವ ದೃಶ್ಯ</p></div>

ಚನ್ನಪಟ್ಟಣದ ಸಂಪರ್ಕ ರಸ್ತೆಯೊಂದರಲ್ಲಿ ಕಸದ ರಾಶಿ ಸುರಿದಿರುವ ದೃಶ್ಯ

   

ಚನ್ನಪಟ್ಟಣ: ಬೆಂಗಳೂರು-ಮೈಸೂರು ಹೆದ್ದಾರಿ ಉತ್ತರ ಹಾಗೂ ದಕ್ಷಿಣ ಭಾಗದಲ್ಲಿ ಇರುವ ಎರಡು ಸಂಪರ್ಕ ರಸ್ತೆಗಳು ಸಾರ್ವಜನಿಕ ಉಪಯೋಗಕ್ಕೆ ಬಾರದೆ ಮುಚ್ಚಿ ಹೋಗಿದೆ. ಈ ರಸ್ತೆಗಳು ಸಾರ್ವಜನಿಕರ ಕಸ ಸುರಿಯುವ ಜಾಗಗಳಾಗಿ ಮಾರ್ಪಾಡಾಗಿವೆ.

ಕುವೆಂಪು ನಗರದ ಒಂದು ಅಡ್ಡ ರಸ್ತೆಯಿಂದ ಮತ್ತೊಂದು ಅಡ್ಡ ರಸ್ತೆಗೆ ತೆರಳಲು ಹಾಗೂ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಹಾಗೂ ಸಾರ್ವಜನಿಕರ ಓಡಾಟದ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ನಿರ್ಮಿಸಲಾಗಿರುವ ಸುಮಾರು ಎರಡು ಕಿ.ಮೀ. ಉದ್ದದ ಸಂಪರ್ಕ ರಸ್ತೆಗಳು ಸ್ವಚ್ಛತೆ ಕಾಣದೆ ಕಸ ಹಾಕುವ ತಾಣಗಳಾಗಿವೆ. ಹಂದಿ, ನಾಯಿಗಳ ಆವಾಸಸ್ಥಾನಗಳಾಗಿವೆ.

ADVERTISEMENT

ಕುವೆಂಪು ನಗರದ ದಕ್ಷಿಣ ಭಾಗದಲ್ಲಿ ಒಂದನೇ ಅಡ್ಡ ರಸ್ತೆಯಿಂದ ಆರಂಭವಾಗಿ ಮಂಗಳವಾರಪೇಟೆವರೆಗೆ ಇರುವ ಸಂಪರ್ಕ ರಸ್ತೆಯು ಒಂದನೇ ಅಡ್ಡ ರಸ್ತೆಯಿಂದ ಎರಡನೇ ಅಡ್ಡ ರಸ್ತೆವರೆಗೆ ಮಾತ್ರ ಸುಸ್ಥಿತಿಯಲ್ಲಿದೆ. ಆ ನಂತರದ ರಸ್ತೆ ಕಸದ ತೊಟ್ಟಿಯಾಗಿ ಮಾರ್ಪಾಡಾಗಿದೆ. ಅದು ಮುಂದುವರಿದಂತೆ ಕೆಲವೆಡೆ ಮುಚ್ಚಿ ಹೋಗಿದೆ. ಕೆಲವೆಡೆ ಅಕ್ಕಪಕ್ಕದ ನಿವಾಸಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಒಂದನೇ ಅಡ್ಡ ರಸ್ತೆ ಸಂಪರ್ಕ ರಸ್ತೆಯು ಸ್ವಚ್ಛತೆ ಕಾಪಾಡಿಕೊಂಡಿದ್ದರೂ ಅದು ಸಾರ್ವಜನಿಕರ ವಾಹನಗಳ ನಿಲುಗಡೆ ಸ್ಥಾನವಾಗಿದೆ ಎನ್ನುವುದು ಸಾರ್ವಜನಿಕರ ಆರೋಪ.

ದಕ್ಷಿಣದ ರಸ್ತೆಯು ಹೆಚ್ಚು ಸಾರ್ವಜನಿಕರು ಓಡಾಡುವ ರಸ್ತೆಯಾಗಿದೆ. ಕುವೆಂಪು ನಗರ, ಮಂಜುನಾಥ ನಗರ, ವಿವೇಕಾನಂದ ನಗರ, ಮಂಗಳವಾರಪೇಟೆ ಸೇರಿದಂತೆ ಹಲವು ಬಡಾವಣೆಗಳಿಗೆ ತೆರಳುವ ಮಂದಿ ಇದನ್ನು ಬಳಸುತ್ತಿದ್ದರು. ಆದರೆ, ಈಗ ಈ ರಸ್ತೆ ಇದ್ದೂ ಇಲ್ಲದಂತಾಗಿದೆ ಎಂದು ಕುವೆಂಪು ನಗರದ ನಾಗರಾಜು, ಕೃಷ್ಣರಾಜು ಆರೋಪಿಸುತ್ತಾರೆ.

ಹಾಗೆಯೇ ಕುವೆಂಪು ನಗರದ ಉತ್ತರಕ್ಕಿರುವ ಸಂಪರ್ಕ ರಸ್ತೆಯು ಒಂದನೇ ಅಡ್ಡರಸ್ತೆಯಿಂದ 12ನೇ ಅಡ್ಡ ರಸ್ತೆ ನ್ಯಾಯಾಲಯದ ರಸ್ತೆವರೆಗೂ ಸಂಪರ್ಕ ಕಲ್ಪಿಸುತ್ತದೆ. ಇದು ಸಹ ಕೊಳಚೆ ನೀರು ಹರಿಯುವ, ಕಸ ಹಾಕುವ ತಾಣವಾಗಿದೆ. ನಗರಸಭೆ ಅಧಿಕಾರಿಗಳು ಈ ರಸ್ತೆಯನ್ನು ಸ್ವಚ್ಛ ಮಾಡಿಸಿ, ಕಾಂಕ್ರೀಟ್ ಹಾಕಿಸಿದ್ದರು. ಈ ರಸ್ತೆಯಲ್ಲಿ ಹೆಚ್ಚು ಮಂದಿ ಓಡಾಡದ ಕಾರಣ ಈಗ ಅಲ್ಲಲ್ಲಿ ಕಸ ಹಾಕುವ ತಾಣವಾಗಿದೆ ಎನ್ನುವುದು ಸಾರ್ವಜನಿಕರ ಆರೋಪ.

ಕುವೆಂಪು ನಗರದ ಒಂದರಿಂದ 12ನೇ ಅಡ್ಡ ರಸ್ತೆಗಳಲ್ಲಿ ನಗರಸಭೆಯು ಅಲ್ಲಲ್ಲಿ ಹಲವು ಕಸದ ತೊಟ್ಟಿ ನಿರ್ಮಾಣ ಮಾಡಿದ್ದರೂ ಕೆಲವರು ಈ ತೊಟ್ಟಿಗಳಲ್ಲಿ ಕಸ ಹಾಕದೆ, ಸಂಪರ್ಕ ರಸ್ತೆಗಳಲ್ಲಿ ಕಸ ಹಾಕುತ್ತಿದ್ದಾರೆ. ಅದರಲ್ಲೂ ಎರಡನೇ ಅಡ್ಡ ರಸ್ತೆಯಿಂದ ಮೂರನೇ ಅಡ್ಡ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯಂತೂ ಕಸದ ತೊಟ್ಟಿಯಾಗಿದೆ. ಇದು ನಗರಸಭೆಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಈ ಬಗ್ಗೆ ಸಾರ್ವಜನಿಕರಿಗೆ ಎಷ್ಟೇ ಜಾಗೃತಿ ಮೂಡಿಸಿದರೂ ಪ್ರಯೋಜನವಾಗದ ಕಾರಣ ಕುಪಿತಗೊಂಡ ನಗರಸಭೆ ಅಧಿಕಾರಿಗಳು ಈ ರಸ್ತೆಯನ್ನು ಎರಡೂ ಕಡೆ ಮುಚ್ಚಿ ಬೀಗ ಹಾಕಿದ್ದಾರೆ. ಇಲ್ಲಿ ಕಸ ಹಾಕಿದರೆ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ನಾಮಫಲಕ ಹಾಕಿದ್ದಾರೆ.

ಸಂಪರ್ಕ ರಸ್ತೆಗಳನ್ನು ರಿಪೇರಿ ಮಾಡಿದ ಮೇಲೆ ಅವುಗಳನ್ನು ಸ್ವಚ್ಛವಾಗಿಟ್ಟು ಸಾರ್ವಜನಿಕರ ಉಪಯೋಗಕ್ಕೆ ಮುಕ್ತ ಮಾಡುವುದು ನಗರಸಭೆ ಕೆಲಸ. ಆದರೆ, ನಗರಸಭೆ ಅಧಿಕಾರಿಗಳು ಇದಕ್ಕೂ ನಮಗೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಈ ಬಗ್ಗೆ ಗಮನ ಸೆಳೆದರೂ ಕೇವಲ ಕಸ ವಿಲೇವಾರಿ ಮಾಡಿ ಸುಮ್ಮನಾಗುತ್ತಾರೆ. ಸ್ವಲ್ಪ ದಿನದ ನಂತರ ಸಂಪರ್ಕ ರಸ್ತೆಗಳು ಮತ್ತೆ ಯಥಾಸ್ಥಿತಿಗೆ ಬರುತ್ತವೆ ಎಂದು ನಾಗರಿಕರಾದ ಅರುಣ್ ಕುಮಾರ್, ರೋಹಿತ್ ತಿಳಿಸುತ್ತಾರೆ.

ನಗರಸಭೆಯು ಒತ್ತುವರಿಯಾಗಿರುವ ಸಂಪರ್ಕ ರಸ್ತೆ ತೆರವುಗೊಳಿಸಿ ಸಾರ್ವಜನಿಕರಿಗೆ ಮುಕ್ತ ಮಾಡಬೇಕು. ಕಸ ಹಾಕದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ರಸ್ತೆಗಳ ಸ್ವಚ್ಛತೆಗೆ ಪ್ರತಿದಿನ ಆದ್ಯತೆ ನೀಡಬೇಕು. ಕಸ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎನ್ನುವುದು ಸಾರ್ವಜನಿಕರ ಒತ್ತಾಯ.

ಸ್ವಚ್ಛತೆಗೆ ನಗರಸಭೆ ಮುಂದಾಗಲಿ

‘ಕುವೆಂಪು ನಗರದಲ್ಲಿ ಓಡಾಡುವ ಜನರು ಹೆಚ್ಚಾಗಿ ಸಂಪರ್ಕ ರಸ್ತೆ ಬಳಸುತ್ತಾರೆ. ಈ ರಸ್ತೆಗಳ ಸ್ವಚ್ಛತೆಗೆ ನಗರಸಭೆ ಆದ್ಯತೆ ನೀಡಬೇಕು. ಸಂಪರ್ಕ ರಸ್ತೆಗಳನ್ನು ಸರಿಪಡಿಸಿದರೆ ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನಲ್ಲಿ ಓಡಾಡುವವರು ಈ ರಸ್ತೆಗಳನ್ನು ಬಳಸಿದರೆ ಅಲ್ಲಿ ಆಗುವ ಅಪಘಾತ ತಡೆಯಬಹುದು. ಸಂಪರ್ಕ ರಸ್ತೆಗಳು ಅವಶ್ಯಕವಾಗಿ ಬೇಕಾಗಿದೆ.’

– ಪ್ರದೀಪ್ ಕುಮಾರ್, ಸ್ಥಳೀಯ ನಿವಾಸಿ, ಚನ್ನಪಟ್ಟಣ  ‌

ಬೀಗ ಹಾಕುವುದು ಸೂಕ್ತವಲ್ಲ 

‘ನಗರದ ದೂರದೃಷ್ಟಿ ಫಲವಾಗಿ ಸಂಪರ್ಕ ರಸ್ತೆಗಳು ನಿರ್ಮಾಣವಾಗಿವೆ. ಆದರೆ, ಈ ರಸ್ತೆಗಳ ಸಮರ್ಪಕ ಉಪಯೋಗ ಆಗದಿರುವುದು ನಿಜಕ್ಕೂ ದುರಂತ. ಇದಲ್ಲದೆ ಎರಡು ಹಾಗೂ ಮೂರನೇ ಅಡ್ಡ ರಸ್ತೆಯನ್ನು ಮುಚ್ಚಿ ಬೀಗ ಹಾಕಿರಿವುದು ಸೂಕ್ತವಲ್ಲ. ಈ ರಸ್ತೆಗಳನ್ನು ಸ್ವಚ್ಛ ಮಾಡಿ ಸಾರ್ವಜನಿಕರ ಉಪಯೋಗಕ್ಕೆ ಮುಕ್ತ ಮಾಡುವುದು ನಗರಸಭೆ ಕರ್ತವ್ಯ’

– ಜಿ.ರಾಘವೇಂದ್ರ, ಚನ್ನಪಟ್ಟಣ

ಕಸ ತಡೆಯಲು ಮುಚ್ಚಲಾಗಿದೆ

‘ಸಂಪರ್ಕ ರಸ್ತೆಗಳಲ್ಲಿ ಕಸ ಸುರಿಯುವುದು ಹೆಚ್ಚಾಗಿದ್ದ ಕಾರಣ ಅಲ್ಲಿ ಸಾರ್ವಜನಿಕ ಪ್ರಕಟಣೆ ಹಾಕಿ ಎರಡು ರಸ್ತೆ ಮುಚ್ಚಲಾಗಿದೆ. ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರೂ ಪ್ರಯೋಜನವಾಗಿರಲಿಲ್ಲ. ಹಾಗಾಗಿ ಕ್ರಮ ಕೈಗೊಳ್ಳಲಾಗಿದೆ. ಮುಂದೆ ಅವುಗಳನ್ನು ಸ್ವಚ್ಛ ಮಾಡಿ ಸಾರ್ವಜನಿಕರ ಓಡಾಟಕ್ಕೆ ಮುಕ್ತ ಮಾಡುತ್ತೇವೆ’.

– ವಾಸಿಲ್ ಆಲಿಖಾನ್, ನಗರಸಭೆ ಅಧ್ಯಕ್ಷ, ಚನ್ನಪಟ್ಟಣ

ಚನ್ನಪಟ್ಟಣ ಕುವೆಂಪುನಗರದ ಎರಡನೇ ಅಡ್ಡರಸ್ತೆ ಸಂಪರ್ಕ ರಸ್ತೆಯನ್ನು ಮುಚ್ಚಿ ನಾಮಫಲಕ ಹಾಕಿರುವ ನಗರಸಭೆ
 ಕುವೆಂಪುನಗರ ಮೂರನೇ ಅಡ್ಡರಸ್ತೆ ಸಂಪರ್ಕ ರಸ್ತೆಗೆ ಗೇಟ್ ಹಾಕಿರುವುದು
ಸದ್ಯ ಸಾರ್ವಜನಿಕರ ಓಡಾಟಕ್ಕೆ ಒಳಕೆಯಾಗುತ್ತಿರುವ ಕುವೆಂಪುನಗರ ಒಂದನೇ ಅಡ್ಡರಸ್ತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.