
ರಾಮನಗರ: ತಾಲ್ಲೂಕಿನ ಲಕ್ಷ್ಮೀಪುರ ಬಳಿಯ ಮಟಕಯ್ಯನದೊಡ್ಡಿ ಗ್ರಾಮದಲ್ಲಿ ಸೋಮವಾರ 75 ವರ್ಷದ ವೃದ್ಧೆ ಈರಮ್ಮ ಎಂಬುವರರ ಮೇಲೆ ಕರಡಿ ದಾಳಿ ನಡೆಸಿದೆ. ದಾಳಿಯ ತೀವ್ರತೆಗೆ ಈರಮ್ಮ ಅವರ ಎರಡು ಕಣ್ಣುಗಳು ಕಿತ್ತು ಹೋಗಿದ್ದು, ತಲೆ ಹಾಗೂ ಭುಜದ ಭಾಗಕ್ಕೂ ತೀವ್ರ ಹಾನಿಯಾಗಿ ಕೂದಲು ಕಿತ್ತು ಬಂದಿದೆ.
ಗಂಭೀರವಾಗಿ ಗಾಯಗೊಂಡಿರುವ ಈರಮ್ಮ ಅವರಿಗೆ ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಬಳಿಕ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈರಮ್ಮ ಅವರು ಬೆಳಿಗ್ಗೆ 6ರ ಸುಮಾರಿಗೆ ಲಕ್ಷ್ಮೀಪುರ ಗ್ರಾಮದಿಂದ ಮಟಕಯ್ಯನ ದೊಡ್ಡಿಯಲ್ಲಿರುವ ತಮ್ಮ ಮನೆಗೆ ನಡೆದುಕೊಂಡು ಹೋಗುತ್ತಿದ್ದರು.
ಆಗ ಏಕಾಏಕಿ ಬಂದು ಮೇಲೆರಗಿದ ಕರಡಿ ಮುಖ, ತಲೆ ಹಾಗೂ ಭುಜಕ್ಕೆ ಕಚ್ಚಿದೆ. ಕರಡಿ ದಾಳಿಗೆ ನಿತ್ರಾಣಗೊಂಡ ಈರಮ್ಮ ರಸ್ತೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಕೆಲ ಹೊತ್ತಿನ ನಂತರ ಸ್ಥಳೀಯರೊಬ್ಬರು ಅದೇ ಮಾರ್ಗದಲ್ಲಿ ಬಂದಾಗ ರಸ್ತೆಯಲ್ಲಿ ರಕ್ತಸಿಕ್ತವಾಗಿ ಬಿದ್ದಿದ್ದ ಈರಮ್ಮ ಅವರನ್ನು ಕಂಡು, ಕುಟುಂಬದವರಿಗೆ ವಿಷಯ ತಿಳಿಸಿದ್ದಾರೆ.
ನಂತರ, ವಾಹನದಲ್ಲಿ ರಾಮನಗರ ಜಿಲ್ಲಾಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿ, ನಂತರ ಬೆಂಗಳೂರಿಗೆ ಕರೆದೊಯ್ದಿದ್ದಾರೆ. ದಾಳಿಯಲ್ಲಿ ಈರಮ್ಮ ಅವರು ಒಂದು ಕಣ್ಣು ಸಂಪೂರ್ಣ ಕಿತ್ತು ಹೋಗಿದ್ದು, ಮತ್ತೊಂದು ಕಣ್ಣಿಗೂ ಹೆಚ್ಚಿನ ಹಾನಿಯಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಜಿಲ್ಲಾಸ್ಪತ್ರೆಗೆ ಉಪ ಅರಣ್ಯ ಸಂರಕ್ಷಾಣಾಧಿಕಾರಿ ಎಂ. ರಾಮಕೃಷ್ಣಪ್ಪ, ಎಸಿಎಫ್ ಪುಟ್ಟಮ್ಮ, ವಲಯ ಅರಣ್ಯಾಧಿಕಾರಿ ಮನ್ಸೂರ್ ಅಹಮದ್, ಉಪ ಉಪ ವಲಯ ಅರಣ್ಯಾಧಿಕಾರಿ ಮಿಥುನ್ ಭೇಟಿ ನೀಡಿ ಈರಮ್ಮ ಅವರ ಆರೋಗ್ಯ ಸ್ಥಿತಿ ವಿಚಾರಿಸಿದರು. ಈರಮ್ಮ ಅವರ ಚಿಕಿತ್ಸಾ ವೆಚ್ಚವನ್ನು ಇಲಾಖೆ ವತಿಯಿಂದ ಭರಿಸಲಾಗುವುದು ಎಂದು ಕುಟುಂಬದವರಿಗೆ ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.