ADVERTISEMENT

ಭೂಸ್ವಾಧೀನ: ಅಡಕತ್ತರಿಯಲ್ಲಿ ಸಂತ್ರಸ್ಥರು!

ಬೆಂಗಳೂರು–ಮೈಸೂರು ಹೆದ್ದಾರಿ ವಿಸ್ತರಣೆ ಕಾಮಗಾರಿ ತಂದ ಆತಂಕ

ಆರ್.ಜಿತೇಂದ್ರ
Published 6 ಫೆಬ್ರುವರಿ 2019, 20:00 IST
Last Updated 6 ಫೆಬ್ರುವರಿ 2019, 20:00 IST
ಹೆದ್ದಾರಿ ವಿಸ್ತರಣೆಯಿಂದ ತೆರವಾಗಲಿರುವ ಕಟ್ಟಡಗಳು
ಹೆದ್ದಾರಿ ವಿಸ್ತರಣೆಯಿಂದ ತೆರವಾಗಲಿರುವ ಕಟ್ಟಡಗಳು   

ರಾಮನಗರ: ಬೆಂಗಳೂರು–ಮೈಸೂರು ಹೆದ್ದಾರಿ ವಿಸ್ತರಣೆ ಸಲುವಾಗಿ ಇಲ್ಲಿನ ವಿನಾಯಕ ನಗರದ ಮನೆಗಳ ಮುಂದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ‘ಮಾರ್ಕಿಂಗ್‌’ ಮಾಡಿ ಹೋಗಿದ್ದು, ಯಾವುದೇ ನೋಟಿಸ್ ನೀಡದೇ ಮನೆ ಒಡೆಯಲು ಮುಂದಾಗಿರುವುದಕ್ಕೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಹೆದ್ದಾರಿಯ ವಿಸ್ತರಣೆಗೆ ಭೂಸ್ವಾಧೀನಕ್ಕೆ ಮುಂದಾಗಿರುವ ಪ್ರಾಧಿಕಾರವು ಜಿಲ್ಲಾ ಪಂಚಾಯಿತಿಯ ಅಕ್ಕಪಕ್ಕ ಇರುವ 15–20 ಮನೆಗಳ ತೆರವಿಗೆ ಮುಂದಾಗಿದೆ. ಎಲ್ಲಿಯವರೆಗೆ ಜಾಗ ಅವಶ್ಯ ಇದೆ ಎನ್ನುವುದನ್ನು ಈಗಾಗಲೇ ಗುರುತಿಸಿದೆ. ಆದರೆ ಇಲ್ಲಿ ವಾಸ ಇರುವ ನಿವಾಸಿಗಳಿಗೆ ಈ ಬಗ್ಗೆ ಅಧಿಕೃತವಾಗಿ ಹೇಳಿಲ್ಲ.

ಜಾಗ ಯಾರದ್ದು?: ವಶಪಡಿಸಿಕೊಳ್ಳಲಾಗುತ್ತಿರುವ ಜಾಗವು ಸರ್ಕಾರಕ್ಕೆ ಸೇರಿದ್ದು ಎನ್ನುವುದು ಸರ್ಕಾರಿ ಅಧಿಕಾರಿಗಳ ವಾದ. ಆದರೆ ಈ ಜಾಗ ತಮ್ಮದೆಂದು ಹೇಳಿಕೊಳ್ಳುವುದಕ್ಕೆ ಇಲ್ಲಿನ ನಿವಾಸಿಗಳೂ ದಾಖಲೆಗಳನ್ನು ನೀಡುತ್ತಾರೆ.
ವಡೇರಹಳ್ಳಿ ಸರ್ವೆ ಸಂಖ್ಯೆ 99ಗೆ ಸೇರಿದ ಈ ಜಾಗವನ್ನು ಸುಂದರಮ್ಮ ಎನ್ನುವವರ ಹೆಸರಿಗೆ 1963ರಲ್ಲಿ ಅಂದಿನ ತಹಶೀಲ್ದಾರ್‌ ಭೂಪರಿವರ್ತನೆ ಮಾಡಿಕೊಟ್ಟಿದ್ದಾರೆ. ನಂತರದಲ್ಲಿ ಇಲ್ಲಿ ಲೇಔಟ್ ನಿರ್ಮಿಸಿ ವಿವಿಧ ಹಂತಗಳಲ್ಲಿ ಮಾರಾಟ ಮಾಡಲಾಗಿದೆ.

ADVERTISEMENT

ನಿವೃತ್ತ ಶಿಕ್ಷಕ ಕಾಂತರಾಜು ಎಂಬುವರು 1980ರಲ್ಲಿ ಬಿ.ಎಸ್. ವಿಶ್ವನಾಥ ಎಂಬುವರಿಂದ ಇಲ್ಲಿ ನಿವೇಶನ ಕಂಡು 1992ರಲ್ಲಿ ಒಟ್ಟು ಎರಡು ಅಂತಸ್ತಿನ ಮನೆಯನ್ನು ನಿರ್ಮಿಸಿಕೊಂಡಿದ್ದಾರೆ. ಕಟ್ಟಡ ಪರವಾನಗಿ ಸೇರಿದಂತೆ ನಗರಸಭೆಯಿಂದ ಬೇಕಾದ ಎಲ್ಲ ಪರವಾನಗಿಗಳೂ ಸಿಕ್ಕಿವೆ. ಇವರ ಹೆಸರಿಗೆ ಮನೆಯ ಇ–ಖಾತೆ ಕೂಡ ಆಗಿದ್ದು, ನಿಯಮಿತವಾಗಿ ಆಸ್ತಿ ತೆರಿಗೆಯನ್ನು ತುಂಬುತ್ತಾ ಬಂದಿದ್ದಾರೆ. ‘ಆಗೆಲ್ಲ ಶುಲ್ಕ ತುಂಬಿಸಿಕೊಂಡು ದಾಖಲೆ ಕೊಟ್ಟ ಸರ್ಕಾರದ ಇಲಾಖೆಗಳು ಈಗ ಆಸ್ತಿಯೇ ಸರ್ಕಾರದ್ದು ಎಂದು ಹೇಳುವುದು ಏತಕ್ಕೆ. ಈ ಬಗ್ಗೆ ಮುಂಚೆಯೇ ಮಾಹಿತಿ ನೀಡಬಹುದಿತ್ತಲ್ಲ’ ಎಂದು ಕಾಂತರಾಜು ಪ್ರಶ್ನಿಸುತ್ತಾರೆ.

ಪ್ರಮೋದ್ ಎಂಬುವರು ಇಲ್ಲಿಯೇ 40X60 ಅಳತೆಯ ಕಟ್ಟಡವನ್ನು 2013ರಲ್ಲಿ ಖರೀದಿಸಿದ್ದು, ಉಪ ನೋಂದಣಾಧಿಕಾರಿಗಳು ಅದನ್ನು ನೋಂದಣಿ ಮಾಡಿಕೊಟ್ಟಿದ್ದಾರೆ. ಇದಕ್ಕಾಗಿ ಮುದ್ರಾಂಕ ಮತ್ತು ನೋಂದಣಿ ಇಲಾಖೆಗೆ ಲಕ್ಷಾಂತರ ರೂಪಾಯಿ ಶುಲ್ಕ ಸಂದಾಯವಾಗಿದೆ. ನಂತರದಲ್ಲಿ ಅವರು ಈ ಕಟ್ಟಡದಲ್ಲಿ ಮತ್ತೆ ಎರಡು ಅಂತಸ್ತುಗಳನ್ನು ನಿರ್ಮಾಣ ಮಾಡಿದ್ದು, ಇದಕ್ಕೆ ನಗರಸಭೆಯು ಪರವಾನಗಿಯನ್ನೂ ನೀಡಿದೆ. ಆದರೆ ಈ ಜಾಗವೂ ರಸ್ತೆಗೆ ಸೇರಿದ್ದು ಎಂದು ಅಧಿಕಾರಿಗಳು ಹೇಳುತ್ತಿರುವ ಕಾರಣ ಮಾಲೀಕರು ಕಂಗಾಲಾಗಿದ್ದಾರೆ.

‘ರಸ್ತೆ ವಿಸ್ತರಣೆಯು ಅನಿವಾರ್ಯವಾದರೆ ನಾವು ಜಾಗ ಬಿಟ್ಟುಕೊಡಲು ಸಿದ್ಧರಿದ್ದೇವೆ. ಆದರೆ ನಮಗೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕು. ದಾಖಲೆಗಳನ್ನು ಪರಿಶೀಲಿಸಿ ನಂತರ ಕ್ರಮ ಕೈಗೊಳ್ಳಬೇಕು. ಸದ್ಯ ಏಕಾಏಕಿ ಮನೆಗಳನ್ನು ಧ್ವಂಸ ಮಾಡುವ ಕಾರ್ಯವನ್ನು ನಿಲ್ಲಿಸಬೇಕು’ ಎಂದು ಸ್ಥಳೀಯ ನಿವಾಸಿಗಳು ಆಗ್ರಹಿಸುತ್ತಾರೆ.

ಅಧಿಕಾರಿಗಳ ವಾದ ಏನು?: ‘ಅರಸರ ಕಾಲದಲ್ಲಿಯೇ ಹೆದ್ದಾರಿಗೆ ಇಂತಿಷ್ಟು ಜಾಗ ಎಂದು ಗುರುತಿಸಿಕೊಡಲಾಗಿತ್ತು. 1960–70ರ ದಶಕದಲ್ಲಿ ಸರ್ಕಾರವು ಹೆದ್ದಾರಿಯ ಆಚೀಚಿನ ಇಷ್ಟು ಜಾಗ ಸರ್ಕಾರಕ್ಕೆ ಸೇರಿದ್ದು ಎಂದು ಕಾನೂನು ಜಾರಿಗೆ ತಂದಿದೆ. ಅದರ ಮಿತಿಯೊಳಗೆ ಈ ಆಸ್ತಿಗಳು ಬರುವುದರಿಂದ ಅವುಗಳಿಗೆ ಪರಿಹಾರ ನೀಡಲು ಆಗದು’ ಎನ್ನುತ್ತಾರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿ.

‘ಈ ಮೊದಲು ಹೆದ್ದಾರಿಗಳು ಕಿರಿದಾಗಿದ್ದ ಕಾರಣ ಅಕ್ಕಪಕ್ಕದ ಜಾಗ ಒತ್ತುವರಿ ಆಗಿ ಅವು ಇತರರಿಗೆ ಮಾರಾಟ ಆಗಿರುವ ಸಾಧ್ಯತೆ ಇದೆ. ಇವುಗಳ ನೋಂದಣಿ ಮಾಡಿಕೊಂಡು, ಕರ ಕಟ್ಟಿಸಿಕೊಂಡ ಸರ್ಕಾರಿ ಅಧಿಕಾರಿಗಳನ್ನೇ ಭೂಸಂತ್ರಸ್ಥರು ಪ್ರಶ್ನಿಸಬೇಕು’ ಎಂದ ಅವರು ಸಮಜಾಯಿಷಿ ನೀಡುತ್ತಾರೆ.

ನೋಟಿಸ್‌ ಕೊಟ್ಟರೆ ಲೀಗಲ್‌!
ಭೂಸ್ವಾಧೀನಕ್ಕೆ ಮುಂದಾಗುವ ಮುನ್ನ ಸರ್ಕಾರವು ಅಲ್ಲಿನ ನಿವಾಸಿಗಳಿಗೆ ಮುಂಚಿತವಾಗಿಯೇ ನೋಟಿಸ್ ನೀಡಿ, ಅವರನ್ನು ಒಕ್ಕಲೆಬ್ಬಿಸಿ ನಂತರದಲ್ಲಿ ಕಟ್ಟಡಗಳ ನೆಲಸಮಕ್ಕೆ ಮುಂದಾಗುವ ಕ್ರಮವಿದೆ. ಆದರೆ ಇಲ್ಲಿನ ಮನೆಗಳಲ್ಲಿ ವಾಸವಿರುವವರಿಗೆ ಈವರೆಗೂ ಒಂದು ನೋಟಿಸ್ ಸಹ ಜಾರಿಯಾಗಿಲ್ಲ ಎಂಬುದು ಸ್ಥಳೀಯರ ಆರೋಪ.

‘ನೋಟಿಸ್ ಕೊಟ್ಟರೆ ಆಸ್ತಿಯು ಖಾಸಗಿ ಸ್ವತ್ತು ಎಂಬುದನ್ನು ಒಪ್ಪಿಕೊಂಡಂತೆ ಆಗುತ್ತದೆ. ಆಗ ಆಸ್ತಿ ಮಾಲೀಕರು ಕಾನೂನು ಸಮರಕ್ಕೆ ಮುಂದಾಗಬಹುದು ಎನ್ನುವ ಮುಂದಾಲೋಚನೆಯಿಂದ ಅಧಿಕಾರಿಗಳು ಯಾವುದೇ ನೋಟಿಸ್ ನೀಡುತ್ತಿಲ್ಲ. ಬದಲಾಗಿ ಮೌಖಿಕವಾಗಿ ಬೆದರಿಕೆ ಹಾಕುತ್ತಿದ್ದಾರೆ’ ಎಂದು ಅವರು ದೂರುತ್ತಾರೆ.

ಅನುಮಾನಕ್ಕೆ ಎಡೆ ಮಾಡಿಕೊಟ್ಟ ಸ್ವಾಧೀನ?
ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಮತ್ತು ಜಿಲ್ಲಾಡಳಿತವು ಪ್ರಭಾವಿಗಳ ಒತ್ತಡಕ್ಕೆ ಮಣಿದು ಮನಬಂದಂತೆ ರಸ್ತೆ ವಿಸ್ತರಣೆ ಮಾಡುತ್ತಿದೆ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.

ಸದ್ಯ ನಡೆದಿರುವ ಕಾಮಗಾರಿಯು ಈ ಆರೋಪವನ್ನು ಪುಷ್ಟೀಕರಿಸುವಂತೆ ಇದೆ. ಕೆಲವು ಕಡೆ ರಸ್ತೆಗಾಗಿ 10–15 ಅಡಿ ಜಾಗ ಮಾತ್ರ ಸ್ವಾಧೀನ ಮಾಡಿಕೊಂಡಿದ್ದರೆ, ಇನ್ನೂ ಕೆಲವು ಕಡೆ 20–30 ಅಡಿಗಳವರೆಗೆ ಭೂಸ್ವಾಧೀನಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ.

ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ
ಒಂದು ವೇಳೆ ಈ ಆಸ್ತಿಯು ಸರ್ಕಾರಕ್ಕೇ ಸೇರಿದ್ದು ಎನ್ನುವುದಾದರೆ ಅದನ್ನು ಖಾಸಗಿಯವರ ಹೆಸರಿಗೆ ಮಾಡಿಕೊಟ್ಟ, ಆಸ್ತಿ ತೆರಿಗೆ ಸಂಗ್ರಹಿಸಿ ಬೊಕ್ಕಸ ತುಂಬಿಸಿಕೊಂಡ ಅಧಿಕಾರಿಗಳ ವಿರುದ್ಧ ಮೊದಲು ಕ್ರಮ ಕೈಗೊಂಡು ದಂಡ ವಸೂಲಿ ಮಾಡಬೇಕು. ಆ ಹಣವನ್ನು ಪರಿಹಾರದ ರೂಪದಲ್ಲಿ ಸಂತ್ರಸ್ಥ ಮಾಲೀಕರಿಗೆ ನೀಡಬೇಕು ಎನ್ನವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

*
ಮೂವತ್ತು ವರ್ಷದ ಹಿಂದೆಯೇ ಆಸ್ತಿ ಖರೀದಿ ಮಾಡಿ ಮನೆ ನಿರ್ಮಿಸಿದ್ದೇನೆ. ಈಗ ಅಧಿಕಾರಿಗಳು ಈ ಆಸ್ತಿಯೇ ಸರ್ಕಾರದ್ದು ಅಂದರೆ ಹೇಗೆ?
-ಕಾಂತರಾಜು, ಭೂಸಂತ್ರಸ್ಥ

*
‘ರೈಟ್‌ಆಫ್‌ ವೇ’ ನಿಯಮದಡಿ ಈ ಭೂಮಿ ಹೆದ್ದಾರಿಗೆ ಸೇರಿದ್ದು ಎಂದು ಇದೆ. ಹೀಗಿರುವಾಗ ನೋಟಿಸ್, ಪರಿಹಾರ ನೀಡುವ ಅಗತ್ಯ ಇಲ್ಲ
ಹೆಸರು ಹೇಳಲಿಚ್ಛಿಸದ ಅಧಿಕಾರಿ
-ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.