ADVERTISEMENT

ಬಿಡದಿ ಪುರಸಭೆಗೆ ಭಾನುಪ್ರಿಯಾ ಅಧ್ಯಕ್ಷೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2025, 8:15 IST
Last Updated 22 ಅಕ್ಟೋಬರ್ 2025, 8:15 IST
ಭಾನುಪ್ರಿಯಾ ಸಂಪತ್
ಭಾನುಪ್ರಿಯಾ ಸಂಪತ್   

ಬಿಡದಿ (ರಾಮನಗರ): ಇಲ್ಲಿನ ಪುರಸಭೆಯ ನೂತನ ಅಧ್ಯಕ್ಷರಾಗಿ ವಾರ್ಡ್–22ರ ಜೆಡಿಎಸ್ ಸದಸ್ಯೆ ಭಾನುಪ್ರಿಯಾ ಸಂಪತ್ ಅವರು ಇತ್ತೀಚೆಗೆ ಆಯ್ಕೆಯಾದರು. ಹಿಂದಿನ ಅಧ್ಯಕ್ಷ ಎಂ.ಎನ್. ಹರಿಪ್ರಸಾದ್ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಇತ್ತೀಚೆಗೆ ಚುನಾವಣೆ ನಡೆಯಿತು.

ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಭಾನುಪ್ರಿಯಾ ಹಾಗೂ ಕಾಂಗ್ರೆಸ್‍ನಿಂದ ವಾರ್ಡ್ –16ರ ಸದಸ್ಯ ಶ್ರೀನಿವಾಸ್ ನಾಮಪತ್ರ ಸಲ್ಲಿಸಿದ್ದರು. ಚುನಾವಣೆಯಲ್ಲಿ ಪುರಸಭೆಯ 23 ಸದಸ್ಯರು ಮತ ಚಲಾಯಿಸಿದರು. ಅಂತಿಮ ಫಲಿತಾಂಶ ಬಂದಾಗ ಭಾನುಪ್ರಿಯ ಅವರು 14 ಮತ್ತು ಶ್ರೀನಿವಾಸ್ 9 ಮತ ಪಡೆದರು.

ಹೆಚ್ಚು ಮತ ಪಡೆದ ಭಾನುಪ್ರಿಯಾ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿದ್ದ ತಹಶೀಲ್ದಾರ್ ತೇಜಸ್ವಿನಿ ಅವರು ಘೋಷಿಸಿದರು. ಮತದಾನದ ಹಕ್ಕು ಹೊಂದಿದ್ದ ಸಂಸದ ಡಾ. ಸಿ.ಎನ್. ಮಂಜುನಾಥ್ ಮತ್ತು ಶಾಸಕ ಎಚ್.ಸಿ. ಬಾಲಕೃಷ್ಣ ಮತದಾನಕ್ಕೆ ಗೈರಾಗಿದ್ದರು.

ADVERTISEMENT

ಬಳಿಕ ಮಾತನಾಡಿದ ಭಾನುಪ್ರಿಯಾ, ‘ಕೈಗಾರಿಕಾ ಪ್ರದೇಶವಾಗಿ ಗುರುತಿಸಿಕೊಂಡಿರುವ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಸದಸ್ಯರು ಹಾಗೂ ಪಕ್ಷದ ನಾಯಕರ ಮಾರ್ಗದರ್ಶನದಲ್ಲಿ ಶ್ರಮಿಸಲಾಗುವುದು. ಮಾದರಿ ಪುರಸಭೆಯಾಗಿ ಮಾಡುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಲಾಗುವುದು’ ಎಂದರು.

ನೂತನ ಅಧ್ಯಕ್ಷರಿಗೆ ಜೆಡಿಎಸ್ ಜಿಲ್ಲಾಧ್ಯಕ್ಷ ಎ. ಮಂಜುನಾಥ್, ಬಿಡದಿ ಹೋಬಳಿ ಅಧ್ಯಕ್ಷ ಜಗದೀಶ್ ಗೌಡ, ಪುರಸಭೆ ಉಪಾಧ್ಯಕ್ಷೆ ಮಂಜುಳಾ ಗೋವಿಂದಪ್ಪ, ವಿರೋಧ ಪಕ್ಷದ ನಾಯಕ ಸಿ. ಉಮೇಶ್, ಪುರಸಭೆ ಮುಖ್ಯಾಧಿಕಾರಿ ಎಂ.ಕೆ. ಮೀನಾಕ್ಷಿ, ಸದಸ್ಯರು ಹಾಗೂ ಪಕ್ಷದ ಸ್ಥಳೀಯ ಮುಖಂಡರು ಹೂವಿನಹಾರ ಹಾಕಿ ಅಭಿನಂದಿಸಿದರು.

ಬಿಡದಿ ಪುರಸಭೆಯ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದ ಜೆಡಿಎಸ್‌ನ ವಾರ್ಡ್‌– 22ರ ಸದಸ್ಯೆ ಭಾನುಪ್ರಿಯ ಸಂಪತ್ ಅವರನ್ನು ಜೆಡಿಎಸ್ ಜಿಲ್ಲಾಧ್ಯಕ್ಷ ಎ. ಮಂಜುನಾಥ್ ಪುರಸಭೆ ಸದಸ್ಯರು ಹಾಗೂ ಪಕ್ಷದ ಮುಖಂಡರು ಅಭಿನಂದಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.